ಗೋಣಿಕೊಪ್ಪ ವರದಿ, ಜೂ. 16: ಯುಎಸ್‍ಎ ರಾಯಬಾರಿ ಜನರಲ್ ರಾಬರ್ಟ್ ಬರ್ಗೆಸ್ ಅವರು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಜೇನು ಕೃಷಿ ಪದ್ಧತಿ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಶನಿವಾರ ಕಾಲೇಜಿಗೆ ಭೇಟಿ ನೀಡಿದ್ದ ಅವರು ಕಾಲೇಜು ಆವರಣದಲ್ಲಿ ಗಿಡ ನೆಟ್ಟು, ಅನುಷ್ಠಾನಗೊಳಿಸಿರುವ ಜೇನು ಕೃಷಿ ಪದ್ಧತಿ ಬಗ್ಗೆ ಮಾಹಿತಿ ಕಲೆಹಾಕಿದರು. ಜೇನುಹುಳಗಳ ಜೇನು ಸಂಗ್ರಹದ ಬಗ್ಗೆ ಮಾಹಿತಿ ಪಡೆದು ಕೊಡಗಿನ ಜೇನು ಕೃಷಿಗೆ ಪ್ರೋತ್ಸಾಹ ನೀಡುತ್ತಿರುವದು ಉತ್ತಮ ಬೆಳವಣಿಗೆ ಎಂದರು.

ವಿದ್ಯಾರ್ಥಿಗಳ ಸಂಶೋಧನೆ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡಿದರು. ಕಾಲೇಜು ಆಡಳಿತ ವರ್ಗ, ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.

ಹವಾಮಾನ ಬದಲಾವಣೆ ಸಂಶೋಧನೆ ಬಗ್ಗೆ ಭಾರತ ದೇಶದ ಜತೆ ಯುಎಸ್‍ಎ ರಾಯಬಾರಿಯಾಗಿ ನಡೆಸಬೇಕಾದ ಬಾಂಧವ್ಯ ವೃದ್ಧಿ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಹವಾಮಾನ ಬದಲಾವಣೆ ವಿಚಾರದಲ್ಲಿ ನಡೆಸಬೇಕಾದ ಸಂಶೋಧನೆ ಬಗ್ಗೆ ಯುಎಸ್‍ಎ ಹಿಂದೆ ಬಿದ್ದಿಲ್ಲ. ಸಂಶೋಧನೆಗೆ ಸಹಕಾರ ನೀಡುವದಾಗಿ ತಿಳಿಸಿದರು. ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡಿರ ಕುಶಾಲಪ್ಪ, ಕೊಡವ ಎಜುಕೇಷನ್ ಫಂಡ್ ಅಧ್ಯಕ್ಷ ಕೆ.ಪಿ. ಉತ್ತಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಡೊಳ್ಳುಕುಣಿತದ ಮೂಲಕ ಅವರನ್ನು ಸ್ವಾಗತಿಸಿಕೊಂಡರು.