ನಾಪೆÇೀಕ್ಲು, ಜೂ. 16: ನಾಲ್ಕುನಾಡು ವ್ಯಾಪ್ತಿಯಲ್ಲಿ ಮುಂಗಾರು ಕ್ಷೀಣಗೊಂಡಿದ್ದು, ಭಾನುವಾರ ಬೆಳಿಗ್ಗಿನಿಂದಲೇ ಬಿಸಿಲಿನ ವಾತಾವರಣ ಕಂಡು ಬಂದಿದೆ. ಬೆಳಿಗ್ಗೆಯಿಂದ ಎಲ್ಲಿಯೂ ಮಳೆಯಾದ ಬಗ್ಗೆ ವರದಿ ಯಾಗಿಲ್ಲ. ಕಳೆದ ನಾಲ್ಕು ದಿನಗಳಲ್ಲಿ ತುಂತುರು ಮಳೆ ಸುರಿದಿದ್ದು, ಮುಂಗಾರು ಆರಂಭದ ಲಕ್ಷಣಗಳು ಕಂಡು ಬಂದಿತ್ತು. ಈ ಸಮಯದಲ್ಲಿ ಬೆಳೆಗಾರರು ಕಾಫಿ ತೋಟಗಳಿಗೆ ಗೊಬ್ಬರ ಹಾಕುವ ಕೆಲಸವನ್ನು ಬಿರುಸಿನಿಂದ ಕೈಗೊಂಡಿದ್ದರು. ಆದರೆ ಈಗ ಮಳೆ ಸಂಪೂರ್ಣವಾಗಿ ಕಡಿಮೆ ಯಾಗುವ ಲಕ್ಷಣಗಳು ಕಂಡು ಬಂದಿದೆ.
ಈ ವಿಭಾಗದಲ್ಲಿ ಭತ್ತದ ಕೃಷಿಯನ್ನು ಕೈಗೊಳ್ಳುವವರ ಸಂಖ್ಯೆ ವಿರಳವಾಗಿದ್ದು, ಅಲ್ಲಲ್ಲಿ ಭತ್ತದ ಕೃಷಿ ಮಾಡುವವರು ಸಸಿ ಮಡಿ ತಯಾರಿಸಲು ಗದ್ದೆಯ ಉಳುಮೆ ಆರಂಭಿಸಿದ್ದರು. ಹಿಂದಿನ ವರ್ಷಗಳಲ್ಲಿ ಈ ಸಮಯದಲ್ಲಿ ಉತ್ತಮ ಮಳೆಯಾಗಿ ಸಸಿ ಮಡಿಯಲ್ಲಿ ಭತ್ತದ ಬಿತ್ತನೆ ಕಾರ್ಯ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಆರಂಭಗೊಳ್ಳುತ್ತಿದ್ದಂತೆಯೇ ಮಳೆ ಕ್ಷೀಣಗೊಂಡ ಪರಿಣಾಮ ಭತ್ತದ ಬೆಳೆಗಾರರಿಗೆ ಸಮಸ್ಯೆಯಾಗಿದೆ.
ತುಂತುರು ಮಳೆಯಾದ ಕಾರಣ ಬಾವಿ, ನದಿ, ಹೊಳೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ.
ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ತಾ. 20 ರಿಂದ ಉತ್ತಮ ಮಳೆಯಾಗಲಿದೆ ಎಂಬ ಹಿನ್ನಲೆಯಲ್ಲಿ ಬೆಳೆಗಾರರು, ಕೃಷಿಕರು ಮಳೆಗಾಗಿ ಕೌತುಕರಾಗಿದ್ದಾರೆ.