ಶ್ರೀಮಂಗಲ, ಜೂ. 15: ದಕ್ಷಿಣ ಕೊಡಗಿನ ಗಡಿಭಾಗ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮಕ್ಕೆ ಒಂದು ವಾರದಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಿ, ಇನ್ನೂ ಅನುಮೋದನೆಗೊಳ್ಳದೆ ಇರುವ ಶ್ರೀಮಂಗಲ - ಬಿರುನಾಣಿ ತಡೆ ರಹಿತ ವಿದ್ಯುತ್ ಮಾರ್ಗಕ್ಕೆ ಅನಧಿಕೃತವಾಗಿ ಸಂಪರ್ಕ ನೀಡಲಾಗಿದೆ ಎಂದು ಆರೋಪಿಸಿ ಪೊರಾಡು ಗ್ರಾಮಸ್ಥರು ಶ್ರೀಮಂಗಲ ವಿದ್ಯುತ್ ಉಪಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.ತಾ. 10 ರಿಂದ ವಿದ್ಯುತ್ ಸಂಪರ್ಕ ಗ್ರಾಮಕ್ಕೆ ಕಡಿತ ಮಾಡಲಾಗಿದೆ. ಗ್ರಾಮಕ್ಕೆ ಸಂಪರ್ಕ ನೀಡುತ್ತಿದ್ದ ಹಳೆಯ 11 ಕೆ.ವಿ. ವಿದ್ಯುತ್ ಮಾರ್ಗವನ್ನು ಕಡಿತಗೊಳಿಸಿ, ಶ್ರೀಮಂಗಲ- ಬಿರುನಾಣಿ ನಡುವೆ ಅಳವಡಿಸಿರುವ 11 ಕೆ.ವಿ. ತಡೆರಹಿತ ಮಾರ್ಗದ ವಗರೆಯಿಂದ ಅನಧಿಕೃತವಾಗಿ ಸೆಸ್ಕ್‍ನ ಶ್ರೀಮಂಗಲದ ಕಿರಿಯ ಅಭಿಯಂತರ ವಿಜಯ್ ಕುಮಾರ್ ಸಂಪರ್ಕ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಡೆರಹಿತ ಮಾರ್ಗದ ಕಾಮಗಾರಿ ಇನ್ನೂ ಅಪೂರ್ಣವಾಗಿದ್ದು ಈ ಮಾರ್ಗದ ಹಲವೆಡೆ ಮರ ಗಿಡಗಳಿಗೆ ಮುಟ್ಟುತ್ತಿದ್ದು ಸಂಪರ್ಕಕ್ಕೆ ಚಾಲನೆ ನೀಡಲು ಸಾಧ್ಯವಿಲ್ಲವೆಂದು ಈ ಮಾರ್ಗಕ್ಕೆ ಹಿರಿಯ ಅಭಿಯಂತರರು ಅನುಮೋದನೆ ನೀಡದೆ ಅಕ್ಷೇಪಣೆ ವ್ಯಕ್ತ ಪಡಿಸಿದ್ದಾರೆ. ಇದರ ನಡುವೆ ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿರುವ ಬಗ್ಗೆ ಗ್ರಾಮಸ್ಥರು ವಿಜಯ್‍ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಡೆರಹಿತ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿ ಬಿರುನಾಣಿಯಿಂದ ವಾಪಸ್ ಪೊರಾಡು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖಾ ಅಧಿಕಾರಿಗಳು ತಾ. 10 ರಿಂದ ಹಳೆಯ ವಿದ್ಯುತ್ ಮಾರ್ಗ ಕಡಿತಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತ ಪಡಿಸಿದರು.
ತಡೆರಹಿತ ಮಾರ್ಗ ಅನುಮೋದನೆಗೊಂಡಿಲ್ಲ. ಹಲವೆಡೆ ಈ ಮಾರ್ಗದ
(ಮೊದಲ ಪುಟದಿಂದ) ತಂತಿಗಳು ಮರಗಳಿಗೆ ತಾಗುತ್ತಿದ್ದು, ದಿಢೀರ್ ಆಗಿ ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿರುವದರಿಂದ ತೋಟಗಳಲ್ಲಿ ಕೆಲಸ ಮಾಡುವ ಸಂದರ್ಭ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ವಿದ್ಯುತ್ ಹರಿಯುತ್ತಿಲ್ಲ ಎಂದು ಬಾವಿಸಿ ತೋಟದ ಕಾರ್ಮಿಕರು ಹಾಗೂ ಮಾಲೀಕರು ಎಂದಿನಂತೆ ಕೆಲಸ ಕಾರ್ಯ ಮಾಡುತ್ತಿದ್ದು ಜನರಿಗೆ ಯಾವದೇ ಮಾಹಿತಿ ನೀಡದೆ ದಿಢೀರಾಗಿ ಚಾಲನೆಗೊಳಿಸಿರುವದರ ಬಗ್ಗೆ ಕಿಡಿ ಕಾರಿದರು.
ಶ್ರೀಮಂಗಲ-ಬಿರುನಾಣಿ ತಡೆರಹಿತ ವಿದ್ಯುತ್ ಮಾರ್ಗಕ್ಕೆ ಶ್ರೀಮಂಗಲ ಉಪ ಕೇಂದ್ರದಿಂದಲೇ ವಿದ್ಯುತ್ ಸಂಪರ್ಕ ನೀಡಲಿ. ಈ ಮೂಲಕ ಬಿರುನಾಣಿ ವ್ಯಾಪ್ತಿಯ ವಿದ್ಯುತ್ ಸಂಪರ್ಕವನ್ನು ಸುಧಾರಿಸಲು ಮುಂದಾಗಲಿ ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಪೊರಾಡು ಗ್ರಾಮಕ್ಕೆ ಸಂಪರ್ಕ ನೀಡುವ ಹಳೆಯ ಮಾರ್ಗವನ್ನು ಕಡಿತಗೊಳಿಸಿ ಇಡೀ ಗ್ರಾಮವನ್ನು ವಾರದಿಂದ ಕಾರ್ಗತ್ತಲೆ ಯಲ್ಲಿ ಮುಳುಗಿಸಿರುವದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಇದ್ದರಿಂದ ಗ್ರಾಮದಲ್ಲಿ ಕುಡಿಯುವ ನೀರು ಮೊಬೈಲ್ ಸಂಪರ್ಕ ಇತ್ಯಾದಿ ಸಮಸ್ಯೆ ಉಂಟಾಗಿದೆ. ಕೂಡಲೇ ಹಳೆಯ 11 ಕೆ.ವಿ. ಮಾರ್ಗಕ್ಕೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.
ಇದೇ ಸಂದರ್ಭ ವೀರಾಜಪೇಟೆ ತಾಲೂಕು ಸೆಸ್ಕ್ ಎ.ಇ.ಇ. ಅಂಕಯ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತಾನಾಡಿದ ಪ್ರತಿಭಟನಾಕಾರರಿಗೆ ತಡೆ ರಹಿತ ವಿದ್ಯುತ್ ಮಾರ್ಗ ಚಾಲನೆಗೊಳಿಸಿ ಬಿರುನಾಣಿಯಿಂದ ವಾಪಸ್ ಪೊರಾಡು ಗ್ರಾಮಕ್ಕೆ ವಿದ್ಯುತ್ ಕಲ್ಪಿಸಲು ಸಾಧ್ಯವಿಲ್ಲ. ಹಳೆಯ 11 ಕೆ.ವಿ. ವಿದ್ಯುತ್ ಮಾರ್ಗ ಕಡಿತ ಗೊಳಿಸಿರುವದು ಗಮನಕ್ಕೆ ಬಂದಿಲ್ಲ.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿಯುವ ಪ್ರದೇಶವಾಗಿರುವದರಿಂದ ಇಲ್ಲಿಗೆ ಹೆಚ್ಚುವರಿ ಸಿಬ್ಬಂದಿ, ವಾಹನ ಮತ್ತು ಸಾಮಗ್ರಿಗಳನ್ನು ಒದಗಿಸಲಾಗಿದೆ. ಕೂಡಲೇ ಕಿರಿಯ ಅಭಿಯಂತರ ವಿಜಯ್ ಕುಮಾರ್ ಅವರನ್ನು ಸ್ಥಳಕ್ಕೆ ತೆರಳಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸೂಚಿಸುವದಾಗಿ ಭರವಸೆ ನೀಡಿದರು.