ಗೋಣಿಕೊಪ್ಪ ವರದಿ, ಜೂ. 15: ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯ 3ನೇ ವಿಭಾಗಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ದಿಡೀರ್ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಆಡಳಿತ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಅವರು ಗ್ರಾಮಸ್ಥರ ಸಮಸ್ಯೆ ಆಲಿಸದೆ ಬೇಜವಬ್ದಾರಿ ತೋರುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಲ್ಲಿ ವ್ಯಕ್ತವಾಯಿತು.

ಪ್ರತಿಭಟನೆ ಸಂದರ್ಭ ಮದ್ಯಪ್ರವೇಶಿಸಿದ ಪಂಚಾಯಿತಿ ಸದಸ್ಯೆ ಮಂಜುಳಾ ಪಂಚಾಯಿತಿಯಲ್ಲಿ ಅಧ್ಯಕ್ಷೆ ಸ್ಪಂದಿಸುತ್ತಿಲ್ಲ. ಇದರಿಂದ ನಮಗೂ ತೊಂದರೆಯಾಗಿದೆ ಎಂದು ತಮ್ಮ ನೋವು ಹೇಳಿಕೊಂಡರು. ಅಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಶೀಘ್ರದಲ್ಲಿ ನೀರು ನೀಡದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಸಿದರು. ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಬೇಜವಬ್ದಾರಿ ಬಗ್ಗೆ ಆಕ್ರೋಶ ವ್ಯಕ್ತವಾಯಿತು.ಖಾಲಿಬಿಂದಿಗೆ ಪ್ರದರ್ಶಿಸಿ, ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನಿರ್ವಹಣೆ ಮಾಡಬೇಕಾದ ಸದಸ್ಯರುಗಳು ಬೇಜವಬ್ದಾರಿ ಉತ್ತರ ನೀಡುತ್ತಿದ್ದಾರೆ, ಅಧ್ಯಕ್ಷೆಯನ್ನು ನೀರು ಬಿಡಿ ಎಂದು ಮನವಿ ಮಾಡಿಕೊಂಡರೆ ಗೋಣಿಕೊಪ್ಪದಲ್ಲಿ ನಿಮಗೆ ಮಾತ್ರ ನೀಡುವದೇ ನಮ್ಮ ಕೆಲಸವೇ ಎಂದು ಪ್ರಶ್ನಿಸುತ್ತಾರೆ. ಇದರಿಂದ ನಾವುಗಳು ನೀರಿಗಾಗಿ ಕಚ್ಚಾಡುವ ಸ್ಥಿತಿ ನಿರ್ಮಾಣ ವಾಗಿದೆ ಎಂದು ನಿವಾಸಿಗಳು ನೋವು ಹಂಚಿಕೊಂಡರು.3 ದಿನಕೊಮ್ಮೆ ನೀರು ಬಿಡುತ್ತಾರೆ. 4 ಬಿಂದಿಗೆ ತುಂಬುವಷ್ಟರಲ್ಲಿ ನೀರು ನಿಲ್ಲಿಸುತ್ತಾರೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಾಣುತ್ತಿಲ್ಲ.

(ಮೊದಲ ಪುಟದಿಂದ) ಅಧ್ಯಕ್ಷರಿಗೆ ಕರೆ ಮಾಡಿದರೆ, ಅಧ್ಯಕ್ಷೆ ಸೆಲ್ವಿ ಬೇಜವಬ್ದಾರಿ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ವಾಟರ್‍ಮೆನ್‍ಗಳಿಗೆ ನೀರು ಬಿಡಲು ಹೇಳಿದರೆ ನೀರು ಬಿಡಲು ಪಿಡಿಒ, ಸದಸ್ಯರು ಒಪ್ಪಿದರೆ ಮಾತ್ರ ಬಿಡುವದಾಗಿ ಹೇಳುತ್ತಿದ್ದಾರೆ. ಅಲ್ಲಿನ ಸಿಬ್ಬಂದಿ ಅಧ್ಯಕ್ಷರಂತೆ ವರ್ತಿಸುತ್ತಿರು ವದು ಸಮಸ್ಯೆ ಉಲ್ಬಣಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದರು.

3ನೇ ವಾರ್ಡ್‍ನಲ್ಲಿರುವ ಮೂವರು ಪಂಚಾಯಿತಿ ಸದಸ್ಯರ ನಡುವೆ ಒಮ್ಮತವಿಲ್ಲ. ಸದಸ್ಯರಾದ ಮಂಜುಳ ಹಾಗೂ ಮಂಜು ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಸದಸ್ಯ ಮುರುಗ ಸಮಸ್ಯೆ ಆಲಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದರು.

ಸ್ಥಳೀಯ ನಿವಾಸಿ ಶಿಖಾಮಣಿ ಮಾತನಾಡಿ, ನೀರು ಸಿಗದ ಕಾರಣ ಸರ್ಕಾರಿ ಆಸ್ಪತ್ರೆ ಟ್ಯಾಂಕ್‍ನಿಂದ ಕುಡಿಯಲು ನೀರು ತರುತ್ತಿದ್ದೇವೆ. ಪಂಚಾಯಿತಿ ಸಿಬ್ಬಂದಿ ಹಾಗೂ ಸದಸ್ಯರುಗಳು ಬೇಜವಬ್ದಾರಿಯಿಂದ ಬೇಸತ್ತಿದ್ದೇವೆ ಎಂದು ನುಡಿದರು.

ನೇತಾಜಿ ಲೇಔಟ್ ನಿವಾಸಿ ಸಿಂಗಿ ಸತೀಶ್ ಮಾತನಾಡಿ, ಪಂಚಾಯಿತಿ ಸದಸ್ಯರಲ್ಲಿ ಸೇವಾಭಾವನೆ ಕಾಣುತ್ತಿಲ್ಲ. ಸದಸ್ಯ ರಾಮಕೃಷ್ಣ ಅವರಿಗೆ ನೇತಾಜಿ ಲೇಔಟ್‍ಗೆ ನೀರು ಬಿಡುವಂತೆ ಎಷ್ಟೇ ಮನವಿ ಮಾಡಿದರೂ ದರ್ಪದಿಂದ ಉತ್ತರಿಸುತ್ತಾರೆ. ಗೆದ್ದ ನಂತರ ಮತದಾರರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಿವಾಸಿ ಅನೀಶ್ ಮಾತನಾಡಿ, 3 ದಿನಗಳಿಗೊಮ್ಮೆ 4 ಬಿಂದಿಗೆ ಮಾತ್ರ ನೀರು ಬಿಡುತ್ತಿರುವದರಿಂದ ನೀರು ಸಾಕಾಗುತ್ತಿಲ್ಲ. ದಿನಂಪ್ರತಿ ನೀರು ಬಿಡುವಂತೆ ಒತ್ತಾಯಿಸಿದರು. ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

-ಸುದ್ದಿಪುತ್ರ