ಮಡಿಕೇರಿ, ಜೂ. 15: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕೃಷಿಗೆ ಪೂರಕ ಬಿತ್ತನೆ ಬೀಜ, ರಸಗೊಬ್ಬರದೊಂದಿಗೆ ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರಗಳನ್ನು ಒದಗಿಸುವಂತೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶನಿವಾರ ನಡೆದ ಜಿ.ಪಂ. ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೃಷಿಕರಿಗೆ ಬೇಕಿರುವ ಭತ್ತದ ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ವಿತರಣೆ ಮಾಡಬೇಕು. ಕೃಷಿ ಕ್ಷೇತ್ರ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷರು ಸೂಚಿಸಿದರು.ಈ ಸಂಬಂಧ ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಾಜು ಅವರು ಈಗಾಗಲೇ ಭತ್ತ ಹಾಗೂ ಮುಸುಕಿನ ಜೋಳದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಜೊತೆಗೆ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಹಾಗೆಯೇ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮಣ್ಣು ಆರೋಗ್ಯ ಪರೀಕ್ಷೆ ಸಂಬಂಧಿಸಿದಂತೆ 45,859 ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಗಿದೆ ಎಂದು ಅವರು ಹೇಳಿದರು.

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣ, ಟಿಲ್ಲರ್, ಟಾರ್ಪಲ್‍ಗಳ ವಿತರಣೆ, ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಮೂಲಕ ನೀಡುವದು ಹೀಗೆ ನಾನಾ ಕಾರ್ಯಕ್ರಮಗಳನ್ನು ಕೃಷಿ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಜು ತಿಳಿಸಿದರು.

ಜಿಲ್ಲೆಯಲ್ಲಿ ಅತಿರ ಭತ್ತ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಬೆಂಬಲ ಬೆಲೆಯಡಿ ಇದನ್ನು ಖರೀದಿಸಲಾಗುತ್ತಿಲ್ಲ ಎಂಬ ಮಾಹಿತಿಯನ್ನು ಆಹಾರ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಕಿರಣ್ ಕಾರ್ಯಪ್ಪ, ಸರೋಜಮ್ಮ ಅವರು ಜಿಲ್ಲೆಯಲ್ಲಿ ಟಾರ್ಪಲ್‍ಗೆ ಬೇಡಿಕೆ ಇದ್ದು, ಯಥೇಚ್ಛವಾಗಿ ಒದಗಿಸುವಂತಾಗಬೇಕು ಎಂದು ಸಲಹೆ ಮಾಡಿದರು.

‘ನಿಫಾ ವೈರಸ್’ ಪಕ್ಕದ ರಾಜ್ಯದಲ್ಲಿ ಹರಡುತ್ತಿದ್ದು, ಜಿಲ್ಲೆಯಲ್ಲಿಯೂ ಸಹ ಎಚ್ಚರವಹಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವದು ಹಾಗೂ ಮಳೆಗಾಲದಲ್ಲಿ ಹರಡುವ (ಮೊದಲ ಪುಟದಿಂದ) ರೋಗಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿ.ಪಂ. ಅಧ್ಯಕ್ಷರು ಸಲಹೆ ಮಾಡಿದರು.

ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡುವದು, ಗಿಡಗಂಟಿಗಳನ್ನು ಕಡಿಸುವಂತೆ ಶನಿವಾರಸಂತೆ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸುವಂತೆ ಸೂಚಿಸಿದರು.

ಚೇಲಾವರ ಜಲಪಾತದಲ್ಲಿ ಗುಂಡಿ ಮುಚ್ಚುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತ ಬರಲಾಗಿದೆ. ಆದರೆ ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಕಿರಣ್ ಕಾರ್ಯಪ್ಪ ಅತೃಪ್ತಿ ವ್ಯಕ್ತಪಡಿಸಿದರು.

ಮಲ್ಲಳ್ಳಿ ಜಲಪಾತದ ಬಳಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದವರನ್ನು ತೆರವಗೊಳಿಸಲಾಗಿದೆ. ಇದರಿಂದ ಅಲ್ಲಿಗೆ ತೆರಳುವ ಪ್ರವಾಸಿಗರಿಗೆ ಕುಡಿಯುವ ನೀರು ಮತ್ತು ಊಟ ಲಭ್ಯವಾಗುತ್ತಿಲ್ಲ. ಇದರಿಂದ ಪ್ರವಾಸಿಗರು ನೀರಿಗೆ ಇಳಿಯುವ ಪರಿಸ್ಥಿತಿ ಉಂಟಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಬೇಸರ ವ್ಯಕ್ತಪಡಿಸಿದರು.

ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಹಾಡಿಯಲ್ಲಿನ ದಿಡ್ಡಳ್ಳಿ ಗಿರಿಜನರಿಗೆ 538 ಮನೆಗಳಲ್ಲಿ 338 ಮನೆಗಳು ಪೂರ್ಣಗೊಂಡಿದ್ದು, ಇವರಲ್ಲಿ 9 ಕುಟುಂಬ ಹೊರತುಪಡಿಸಿ ಉಳಿದವರು ವಾಸ ಮಾಡುತ್ತಿದ್ದಾರೆ ಎಂದು ಐಟಿಡಿಪಿ ಅಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ, ಐಟಿಡಿಪಿ, ಬಿಸಿಎಂ, ವಸತಿ ಶಾಲೆಗಳು ಹಾಗೂ ಕ್ರೀಡಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರು ಕಲ್ಪಿಸಬೇಕು. ಉತ್ತಮ ಆಹಾರ ನೀಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ ಮಾಡಬೇಕು. ಜೊತೆಗೆ ವಸತಿ ನಿಲಯಗಳಲ್ಲಿ ಭದ್ರತೆ, ಸಿಸಿಟಿವಿ ಅಳವಡಿಸುವುದು ಮತ್ತಿತರವನ್ನು ವ್ಯವಸ್ಥೆ ಮಾಡುವಂತೆ ಜಿ.ಪಂ. ಅಧ್ಯಕ್ಷರು ಹೇಳಿದರು.

ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಬೇಕು. ಈಗಿನಿಂದಲೇ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸಲು ಅಗತ್ಯ ತಯಾರಿ ಮಾಡುವಂತೆ ಸಲಹೆ ಮಾಡಿದರು.

ಫಲಿತಾಂಶ ಸುಧಾರಣಾ ಕ್ರಮ

ಈ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾಡೋ ಅನುದಾನಿತ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ಸಭೆಯನ್ನು ಆಹ್ವಾನಿಸಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಲೋಕೇಶ್ ಸಾಗರ್ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಗಳ ದುರಸ್ತಿ ಮತ್ತಿತರ ಬಗ್ಗೆ ಗಮನ ಹರಿಸಬೇಕು. ಶಾಲಾ ಸುರಕ್ಷತೆ ಸಂಬಂಧಿಸಿದಂತೆ ಯುನೆಸೆಫ್ ವತಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಸಂಬಂಧ ಅಗತ್ಯ ಸಹಕಾರ ನೀಡುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಸಲಹೆ ಮಾಡಿದರು.

ಶಾಲೆಗಳು ಹಾಗೂ ಅಂಗನವಾಡಿಗಳಲ್ಲಿ ಕುಡಿಯುವ ನೀರು, ಶೌಚಾಲಯ, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಲೋಕೇಶ್ವರಿ ಗೋಪಾಲ್ ಸಲಹೆ ಮಾಡಿದರು.

ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುವ ಕಾರ್ಯಕ್ರಮಗಳನ್ನು ಕೃಷಿಕರಿಗೆ ತಲಪಿಸಬೇಕು. ಜೇನುಕೃಷಿಗೆ ಹೆಚ್ಚಿನ ಅನುದಾನ ನೀಡಬೇಕು. ಬಾಳೆ ಕೃಷಿ, ಹನಿ ನೀರಾವರಿಗೆ ಪ್ರೋತ್ಸಾಹ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷರು ಸಲಹೆ ಮಾಡಿದರು. ಕರಿಮೆಣಸು ಗಿಡಗಳನ್ನು ಉಚಿತವಾಗಿ ವಿತರಿಸುವಂತೆ ಕಿರಣ್ ಕಾರ್ಯಪ್ಪ ಸಲಹೆ ನೀಡಿದರು.

ಅಪಾಯದ ಕಂಬ ಬದಲಾಯಿಸಿ

ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವದರಿಂದ ಹಳೇ ವಿದ್ಯುತ್ ಕಂಬಗಳನ್ನು ಬದಲಿಸಿ ಹೊಸ ಕಂಬ ಅಳವಡಿಸುವದು, ಮತ್ತಿತರ ಮುನ್ನೆಚ್ಚರಿಕೆ ವಹಿಸುವಂತೆ ಸೆಸ್ಕ್ ಇಲಾಖೆ ಎಂಜಿನಿಯರ್‍ಗೆ ಸೂಚಿಸಲಾಯಿತು.

ಸಣ್ಣ ಮತ್ತು ಅತೀ ಸಣ್ಣ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಪರವಾನಗಿ ನೀಡುವಲ್ಲಿ ಅಗತ್ಯ ವಿನಾಯಿತಿ ನೀಡಬೇಕು ಎಂದು ಲೋಕೇಶ್ ಸಾಗರ್ ಸಲಹೆ ಮಾಡಿದರು.

ಸೀಮೆಎಣ್ಣೆ ದಾಸ್ತಾನು

ಆಹಾರ ಇಲಾಖೆ ಉಪ ನಿರ್ದೇಶಕರು ಜಿಲ್ಲೆಯಲ್ಲಿ ಮಳೆಗಾಲ ಅವಧಿಯಲ್ಲಿನ ತುರ್ತು ಸಂದರ್ಭಕ್ಕಾಗಿ 48 ಸಾವಿರ ಲೀಟರ್ ಸೀಮೆ ಎಣ್ಣೆ ಮತ್ತು 2 ಸಾವಿರ ಕ್ವಿಂಟಾಲ್ ಅಕ್ಕಿಯನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ವಸತಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿ.ಪಂ.ಉಪಕಾರ್ಯದರ್ಶಿ ಗುಡೂರು ಭೀಮಸೇನ ವಿವಿಧ ವಸತಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಆದಷ್ಟು ಶೀಘ್ರ ಮನೆ ನಿರ್ಮಾಣ ಪ್ರಗತಿ ಸಾಧಿಸಲಾಗುವದು ಎಂದು ಹೇಳಿದರು.

ವಸತಿ ಯೋಜನೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮರಳು ಪೂರೈಸುವಂತೆ ಜಿ.ಪಂ .ಅಧ್ಯಕ್ಷರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಕುಡಿಯುವ ನೀರು ಒದಗಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ಸೂಚಿಸಲಾಯಿತು. ಅಂಗನವಾಡಿಗಳ ಸುರಕ್ಷತೆ ಬಗ್ಗೆ ಗಮನಹರಿಸಬೇಕು ಎಂದು ಲೋಕೇಶ್ವರಿ ಗೋಪಾಲ್ ಸೂಚನೆ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅರುಂಧತಿ ಈಗಾಗಲೇ 24 ಅಂಗನವಾಡಿಗಳನ್ನು ಶಾಲೆ ಹಾಗೂ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬಾಡಿಗೆ ಕಟ್ಟಡದಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರು ಇದೆಯೇ ಎಂಬದನ್ನು ಗಮನಿಸುವಂತೆ ಲೋಕೇಶ್ವರಿ ಗೋಪಾಲ್ ಸಲಹೆ ಮಾಡಿದರು.

ಮಾತೃವಂದನಾ ಹಿನ್ನೆಡೆ

ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಶೇ.20ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಲಕ್ಷ್ಮೀಪ್ರಿಯಾ ಅವರು ಮಾತೃವಂದನಾ ಯೋಜನೆಗೆ ಅರ್ಜಿಗಳೇ ಸಲ್ಲಿಕೆಯಾಗುತ್ತಿಲ್ಲ. ಈ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಸಲಹೆ ಮಾಡಿದರು.

ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣ ಮಾಡುವದರ ಜೊತೆ ಚರಂಡಿ ಹಾಗೂ ಮೋರಿಯನ್ನು ಸರಿಪಡಿಸುವಂತೆ ಎಂಜಿನಿಯರ್‍ಗೆ ಸೂಚಿಸಲಾಯಿತು.

ಪಶುಪಾಲನಾ ಇಲಾಖೆಯ ವ್ಯಾಪ್ತಿಯಲ್ಲಿ ಪಶುಭಾಗ್ಯ ಯೋಜನೆ ಅನುಷ್ಠಾನ, ಕೋಳಿ ಮರಿ ವಿತರಣೆ ಮತ್ತಿತರ ಕಾರ್ಯಕ್ರಮವನ್ನು ಸಕಾಲದಲ್ಲಿ ಅರ್ಹರಿಗೆ ತಲಪಿಸುವಂತೆ ಜಿ.ಪಂ. ಅಧ್ಯಕ್ಷರು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತಿತರ ಕಡೆಗಳಲ್ಲಿ ಅರಣ್ಯ ಇಲಾಖೆಯಿಂದ ಉಚಿತವಾಗಿ ಗಿಡಗಳನ್ನು ವಿತರಿಸುವಂತಾಗಬೇಕು ಎಂದು ಜಿ.ಪಂ. ಅಧ್ಯಕ್ಷರು ಸಲಹೆ ಮಾಡಿದರು.

ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿಂಗ್ ಅವರು ಒಂದು ಗಿಡಕ್ಕೆ 1 ರೂ.ನಂತೆ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಲಾಮೃತ ಯೋಜನೆಯಡಿ ಸ್ವಚ್ಛ ಮೇವ ಜಯತೆ, ಜಲ ಸಂರಕ್ಷಣೆ ಮತ್ತು ಮಣ್ಣಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಾವಿರಾರು ಗಿಡ ನೆಡಲಾಗುತ್ತಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ ಮಾಹಿತಿ ನೀಡಿದರು.

ತಾ.ಪಂ. ಇಒಗಳಾದ ಲಕ್ಷ್ಮಿ, ಸುನಿಲ್ ಕುಮಾರ್, ಜಯಣ್ಣ ಅವರು ತಾಲೂಕು ವ್ಯಾಪ್ತಿಗಳಲ್ಲಿ ಸ್ವಚ್ಛ ಮೇವ ಜಯತೆ ಪ್ರಯುಕ್ತ ಸಾವಿರಾರು ಗಿಡಗಳನ್ನು ನೆಡಲಾಗುತ್ತಿದೆ ಎಂದು ವಿವರಿಸಿದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರ್ಪಡೆ ಮಾಡುವದು. ಆ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಕೈಜೋಡಿಸುವಂತೆ ಜಿ.ಪಂ. ಸಿಇಒ ಸಲಹೆ ಮಾಡಿದರು.

ರಾಜೀವ್ ಗಾಂಧಿ ಚೈತನ್ಯ ಯೋಜನಾ ಕಾರ್ಯಕ್ರಮದಡಿ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವದು, ಕಾಡಾನೆ ಹಾವಳಿಯಿಂದ ನಷ್ಟವಾದ ಬೆಳೆಗೆ ಕನಿಷ್ಟ 5 ಸಾವಿರ ರೂ. ಮೇಲ್ಪಟ್ಟು ಪರಿಹಾರ ವಿತರಿಸುವದು, ರೇಷ್ಮೆ ಬೆಳೆಗೆ ಉತ್ತೇಜನ ನೀಡುವದು, ಸಕಾಲದಲ್ಲಿ ಮೀನು ಮರಿ ವಿತರಣೆ ಮಾಡುವದು. ಹಾಲು ಉತ್ಪಾದಕರ ಸಂಘಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.