ಕೂಡಿಗೆ, ಜೂ. 16: ತಾಲೂಕು ವ್ಯಾಪ್ತಿಯ ರೈತರಿಗೆ ಅನುಕೂಲಕರ ವಾಗುವ ದೃಷ್ಟಿಯಿಂದ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಬೇಕಾಗುವಂತಹ ಬಿತ್ತನೆ ಬೀಜ ಹಾಗೂ ಕೃಷಿ ಉಪಕರಣಗಳನ್ನು ವಿತರಿಸಲಾಗುತ್ತಿದ್ದು, ರೈತರು ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿ ಬಿತ್ತನೆ ಬೀಜ ಹಾಗೂ ಕೃಷಿ ಉಪಕರಣಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ರೈತರಲ್ಲಿ ಮನವಿ ಮಾಡಿದ್ದಾರೆ.
ತಾಲೂಕಿನ, ಕುಶಾಲನಗರ, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪಟೆ ಕಸಬಾ ಹೋಬಳಿಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ತಾಲೂಕಿಗೊಳಪಡುವ ಸಹಕಾರ ಸಂಘಗಳಲ್ಲಿ ವಿವಿಧ ತಳಿಯ ಜೋಳ ಹಾಗೂ ಭತ್ತದ ಬಿತ್ತನೆ ಬೀಜಗಳನ್ನು ದಾಸ್ತಾನು ಇಡಲಾಗಿದೆ.
ಇಲಾಖೆಯ ವತಿಯಿಂದ ಪರಿಸ್ಕøತಗೊಂಡು ರೈತರಿಗೆ ವಿತರಿಸಲು ಸಿದ್ಧವಾಗಿದೆ. ಈಗಾಗಲೇ ಜೋಳದ ಬಿತ್ತನೆ ಬೀಜಗಳಾದ ಗಂಗಾ-ಕಾವೇರಿ, ಕಾವೇರಿ ಸೀಡ್ಸ್, ಪೆನ್ನೀರ್, ಸಿಪಿ ಸೇರಿದಂತೆ ಹೈಬ್ರಿಡ್ ತಳಿಯ ಜೋಳಗಳು ಈ ಸಾಲಿನಲ್ಲಿ ಭತ್ತದ ವಿವಿಧ ತಳಿಗಳಾದ ತುಂಗಾ, ತನು, ಬಾಂಗ್ಲಾರೈಸ್, ಐಆರ್164, 1001, ಎಂಟಿಯು, ಅತೀರ, ದೀರ್ಘಾವಧಿ ಮತ್ತು ಅತ್ಪಾವಧಿಯ ಹೈಬ್ರಿಡ್ ತಳಿಯ ಭತ್ತಗಳು ದಾಸ್ತಾನಿವೆ. ರೈತರು ತಮ್ಮ ಜಮೀನಿನ ಆರ್‍ಟಿಸಿ, ಆಧಾರ್‍ಕಾರ್ಡ್, ಬ್ಯಾಂಕ್ ಪಾಸ್‍ಬುಕ್‍ನ ಪ್ರತಿಗಳನ್ನು ಒದಗಿಸಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಂಡು ಬಿತ್ತನೆ ಮಾಡಬಹುದಾಗಿದೆ.
ಈ ಬಗ್ಗೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಮಾಹಿತಿ ನೀಡಿ, ರೈತರು ತಮ್ಮ ಜಮೀನಿನ ಮಣ್ಣನ್ನು ಕೂಡಿಗೆಯಲ್ಲಿರುವ ಜಿಲ್ಲೆಯ ಏಕೈಕ ಆಧುನಿಕ ಯಾಂತ್ರೀಕೃತ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಮಣ್ಣಿನ ಅನುಗುಣವಾಗಿ ಸಾವಯವ ಮತ್ತು ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ನೀಡಿ ನಂತರ ಮಣ್ಣಿನ ಪೋಷಕಾಂಶದ ಅನುಗುಣಕ್ಕೆ ಹೆಚ್ಚುವರಿಯಾಗಿ ರಾಸಾಯನಿಕ ಗೊಬ್ಬರವನ್ನು ಜಮೀನಿಗೆ ಬಳಸಿ ಉತ್ತಮವಾದ ಬೆಳೆ ಬೆಳೆಯಬೇಕು. ಇಲಾಖೆಯ ವತಿಯಿಂದ ಈಗ ಭತ್ತ ಬಿತ್ತನೆ ಮಾಡಲು ಗದ್ದೆ ಸಿದ್ಧಗೊಳಿಸುತ್ತಿದ್ದು, ಅವರು ಸೆಣಬಿನ ಬೀಜವನ್ನು ನೀಡಲಾಗುತ್ತಿದೆ.
ಸೆಣಬಿನ ಬೀಜ ಬಿತ್ತನೆಯಿಂದ ನಾಟಿ ಮಾಡುವ ಸಂದರ್ಭಕ್ಕೆ ಸೆಣಬಿನ ಉಳುಮೆ ಮಾಡಿದ್ದಲ್ಲಿ ಮಣ್ಣಿನ ಫಲವತ್ತತ್ತೆ ಕೂಡಾ ಹೆಚ್ಚುತ್ತದೆ. ಇದನ್ನು ರೈತರು ಸದ್ಬಳಸಿಕೊಳ್ಳಬೇಕು ಎಂದರು.