ಸುಂಟಿಕೊಪ್ಪ, ಜೂ. 16: ಕಳೆದ ವರ್ಷದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಸಂಭವಿಸಿದ ಅನಾಹುತಗಳ ಬಗ್ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸೂಕ್ಷ್ಮತೆಯ ಬಗ್ಗೆ ಮಾಹಿತಿ ಕಲೆಹಾಕಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಪರಿವೀಕ್ಷಕರೊಂದಿಗೆ, ಎನ್‍ಡಿಆರ್‍ಎಫ್ ತಂಡ ಸ್ಥಳ ಪರಿಶೀಲನೆ ನಡೆಸಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮಧುರಮ್ಮ ಬಡಾವಣೆ ಗಿರಿಯಪ್ಪಮನೆ, ಗದ್ದೆಹಳ್ಳದ ಬಿಸಿಎಂ ಹಾಸ್ಟೇಲ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳನ್ನು ಪರಿಶೀಲನೆ ನಡೆಸಿದರು.

ಹಾಲೇರಿ, ಚಾಮುಂಡೇಶ್ವರಿ ಬಡಾವಣೆ, ತಾತಿಮನೆ ಪೈಸಾರಿ, ಮಾದಾಪುರ ವ್ಯಾಪ್ತಿಯ ಹಟ್ಟಿಹೊಳೆ, ಇಗ್ಗೋಡ್ಲು, ಮುಕ್ಕೋಡ್ಲು, ಮೂವತ್ತೊಕ್ಲು ಇನ್ನಿತರ ಸೂಕ್ಷ್ಮ ಪ್ರದೇಶಗಳಲ್ಲಿ ಭೇಟಿ ನೀಡಿ ಪರಿಶೀಲಿಸಿತ್ತು. ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತಂಡವು ಯಾವ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಮಾಹಿತಿಯನ್ನು ಕಲೆಹಾಕಿದರು.

ನಾಡ ಕಚೇರಿಯ ಕಂದಾಯ ಪರಿವೀಕ್ಷಕ ಹೆಚ್.ಕೆ. ಶಿವಪ್ಪ, ಗ್ರಾ.ಪಂ. ಪಿಡಿಓ ಮೇದಪ್ಪ, ಈ ವ್ಯಾಪ್ತಿಯ ನೋಡಲ್ ಅಧಿಕಾರಿ ಹೆಚ್.ಕೆ. ಪಾಂಡು, ಎನ್‍ಡಿಆರ್‍ಎಫ್ ಟೀಮ್ ಕಮಾಂಡರ್ ವೆಲ್ಲೂರು ರಮೇಶ್, ಹವಾಲ್ದಾರ್ ದೊಡ್ಡಬಸಪ್ಪ ಸೇರಿದಂತೆ 30 ಮಂದಿ ಸಿಬ್ಬಂದಿ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಶಿಕ್ಷಕ ಪ್ರೇಮಕುಮಾರ್, ಗ್ರಾ.ಪಂ. ಕಾರ್ಯದರ್ಶಿ, ಸಿಬ್ಬಂದಿಗಳು ಇದ್ದರು.