ಸೋಮವಾರಪೇಟೆ, ಜೂ. 15: ತಾಲೂಕಿನ ಬಾಣಾವರ ಶಾಖಾ ವ್ಯಾಪ್ತಿಯ ನಿಡ್ತ ಮೀಸಲು ಅರಣ್ಯದಲ್ಲಿ ಕಾಡುಹಂದಿಯನ್ನು ಅಕ್ರಮ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಅರಣ್ಯ ಇಲಾಖಾ ಅಧಿಕಾರಿಗಳು ಐವರು ಬೇಟೆಗಾರರನ್ನು ಬಂಧಿಸಿದ್ದಾರೆ.ನಿಡ್ತ ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ವನ್ಯ ಪ್ರಾಣಿಯಾದ ಕಾಡುಹಂದಿಯನ್ನು ಭೇಟೆಯಾಡಿದ್ದ ಭುವಂಗಾಲ ಗ್ರಾಮದ ಧರ್ಮಪ್ಪ, ವಸಂತ್, ವಿಶ್ವನಾಥ್, ರಮಾನಂದ್, ಪಿ.ಕೆ. ವಿಜಯ ಅವರುಗಳನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದಾರೆ.ಬಂದಿತ ಆರೋಪಿಗಳಿಂದ ಕಾಡುಹಂದಿಯ ಮೃತದೇಹ, ಕೃತ್ಯಕ್ಕೆ ಬಳಸಿದ್ದ ಕತ್ತಿ, ಚಾಕು ಸೇರಿದಂತೆ ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಡಿಆರ್ ಎಫ್ ಓ ಮಹದೇವನಾಯಕ್, ಪುನೀತ್, ಅರಣ್ಯ ರಕ್ಷಕ ಪ್ರಮೋದ್, ಅರಣ್ಯ ವೀಕ್ಷಕ ವೀರಪ್ಪ, ಅಂತೋಣಿ, ಶ್ರೀಕಾಂತ್ ಅವರುಗಳು ಭಾಗವಹಿಸಿದ್ದರು.

ಬಂದಿತ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿರುವ ಅಧಿಕಾರಿಗಳು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.