ಸೋಮವಾರಪೇಟೆ, ಜೂ. 16: ಮಾಲಂಬಿ ಮೀಸಲು ಅರಣ್ಯ ವ್ಯಾಪ್ತಿಯಿಂದ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಾರ, ಕೂಗೂರು, ಚನ್ನಾಪುರ ಗ್ರಾಮಗಳಿಗೆ ಕಾಡಾನೆಗಳು ನಿರಂತರ ಲಗ್ಗೆಯಿಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಮಾಲಂಬಿ ಮೀಸಲು ಅರಣ್ಯದಿಂದ ಶನಿವಾರ ರಾತ್ರಿ ಗ್ರಾಮಕ್ಕೆ ನುಗ್ಗಿರುವ 8 ಕಾಡಾನೆಗಳು ಚನ್ನಾಪುರ ಗ್ರಾಮದಲ್ಲಿ ಕೃಷಿ ಫಸಲನ್ನು ಹಾನಿಪಡಿಸಿವೆ. ಗಣೇಶ್ ಸೇರಿದಂತೆ ಅನೇಕರ ಕಾಫಿ ಗಿಡಗಳು ಹಾಗೂ ಬಾಳೆಯನ್ನು ತುಳಿದು ನಷ್ಟಪಡಿಸಿವೆ.

ಹಗಲಿನ ವೇಳೆ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರು ಹರಸಾಹಸ ಮಾಡಿದರು. ಚನ್ನಾಪುರ, ಚಿಕ್ಕಾರ ಗ್ರಾಮದಲ್ಲಿ ಭಾನುವಾರ ಹಗಲಿನ ವೇಳೆ ಕಾಣಿಸಿಕೊಂಡ ಗಜಪಡೆಯನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದರು. ಗದ್ದೆ ಹಾಗೂ ಕಾಫಿ ತೋಟದಲ್ಲಿ ಓಡಾಡುತ್ತಿದ್ದ ಆನೆಗಳನ್ನು ಸಂಜೆ ವೇಳೆಗೆ ಕಾಡಿಗೆ ಓಡಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾದರು.