ಮಡಿಕೇರಿ, ಜೂ. 14: ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುವದ ರೊಂದಿಗೆ; ಮುಂದಿನ ಐದು ವರ್ಷಗಳಲ್ಲಿ ಜನತೆಯ ಆಶಯದಂತೆ ಪರಿಣಾಮಕಾರಿಯಾಗಿ ತಾನು ಕಾರ್ಯನಿರ್ವಹಿಸುವೆ ಎಂದು; ಕೊಡಗು - ಮೈಸೂರು ಕ್ಷೇತ್ರದಿಂದ ದ್ವಿತೀಯ ಬಾರಿ ಗೆಲವು ಸಾಧಿಸಿರುವ ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ. ಇಂದು ಕೊಡಗು ಪ್ರೆಸ್ಕ್ಲಬ್ ಆಯೋಜಿಸಿದ್ದ ಮಾದ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ಅವರು; ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವದು ತಮಗೆ ಅತ್ಯಂತ ಹೆಮ್ಮೆ ಎಂದು ನುಡಿದರು.ಕಳೆದ ಬಾರಿ ಓರ್ವ ಪತ್ರಕರ್ತ ನಾಗಿ ರಾಜಕೀಯ ಅನುಭವದ ಕೊರತೆ ನಡುವೆಯೂ ಸಾಕಷ್ಟು ಅಭಿವೃದ್ಧಿಗೆ ಶ್ರಮಿಸಿದ್ದಾಗಿ; ತಮ್ಮ ಕ್ಷೇತ್ರದಲ್ಲಿ ಅನುಷ್ಠಾನ ಗೊಂಡಿರುವ ಕೇಂದ್ರ ಸರಕಾರದ ಯೋಜನೆಗಳನ್ನು ಉಲ್ಲೇಖಿಸಿದ ಅವರು; ಭವಿಷ್ಯದಲ್ಲಿ ಗ್ರಾಮ ಪಂಚಾಯಿತಿ ಹಂತದಲ್ಲೂ ನಿಗಾವಹಿಸುವ ಮೂಲಕ ಜನತೆಯ ಬೇಕು ಬೇಡಿಕೆಗಳಿಗೆ ಒತ್ತು ನೀಡುವೆ ಎಂದರು.ಕಚೇರಿಯಲ್ಲಿ ಲಭ್ಯ : ಕೊಡಗು ಜಿಲ್ಲಾ ಕೇಂದ್ರದ ಸಂಸದರ ಕಚೇರಿಯಲ್ಲಿ ತಿಂಗಳಿಗೆ ಎರಡು ಬಾರಿ ಜನತೆಗೆ ಲಭಿಸುವದರೊಂದಿಗೆ; ಕುಂದು ಕೊರತೆಗಳನ್ನು ಆಲಿಸಲು ತೀರ್ಮಾನಿಸಿರುವೆ ಎಂದ ಅವರು; ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲನಾ ಸಭೆಗಳನ್ನು ನಡೆಸುವದಾಗಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ರೈಲು - ರಸ್ತೆಗೆ ಒತ್ತು : ಮೈಸೂರು - ಮಡಿಕೇರಿ ನಡುವೆ ಹಾಗೂ ಚನ್ನರಾಯಪಟ್ಟಣ - ಮಾಕುಟ್ಟ ನಡುವೆ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುವದಾಗಿ ಸ್ಪಷ್ಟಪಡಿಸಿದ ಸಂಸದರು; ಕುಶಾಲನಗರ ತನಕ ರೈಲ್ವೇ ಯೋಜನೆ ಅನುಷ್ಠಾನ ಖಂಡಿತಾ ಎಂದು ಪುನರುಚ್ಚರಿಸಿದರು. ಇಂತಹ ಯೋಜನೆಗಳ ಜಾರಿಗೆ ಅಡ್ಡಿಪಡಿಸು ವವರಿಂದ ಕೊಡಗಿನ ಸರ್ವ ತೋಮುಖ ಏಳಿಗೆಗೆ ಧಕ್ಕೆ ಉಂಟಾ ಗಲಿದೆ ಎಂದು ಅವರು ವ್ಯಾಖ್ಯಾನಿಸಿದರು.
ಕಾಫಿ - ಮೆಣಸು ರಫ್ತು: ಕೊಡಗಿನ ಕಾಫಿ ಹಾಗೂ ಒಳ್ಳೆಮೆಣಸು ಇತ್ಯಾದಿಗೆ ರೈಲ್ವೇಯೊಂದಿಗೆ ರಸ್ತೆ ಅಭಿವೃದ್ಧಿ ಗೊಂಡರೆ ಉತ್ತಮ ಮಾರುಕಟ್ಟೆ ಬೆಲೆ ಲಭಿಸಲಿದ್ದು; ಈ ಜಿಲ್ಲೆಯ ಬೆಳೆಗಾರರು ತಮ್ಮ ಫಸಲಿಗೆ ಹೆಚ್ಚಿನ ದರದೊಂದಿಗೆ ರಫ್ತು ಮಾರುಕಟ್ಟೆ ಕಂಡುಕೊಳ್ಳಲು ಅವಕಾಶವಾಗಲಿದೆ ಎಂದರಲ್ಲದೆ; ಯಾವದೇ ಕಾರಣಕ್ಕೂ ಕೊಡಗಿನ ಪರಿಸರದೊಂದಿಗೆ ಅರಣ್ಯ ನಾಶಕ್ಕೆ ಸಂಸದನಾಗಿ ಅವಕಾಶ ನೀಡಲಾರೆ ಎಂದು ಮಾರ್ನುಡಿದರು.
(ಮೊದಲ ಪುಟದಿಂದ)
ಹೇಳಿಕೆಗೆ ಬದ್ಧ : ಮೊದಲ ಬಾರಿಗೆ ಸಂಸದನಾಗಿ ಆಯ್ಕೆಗೊಂಡ ವೇಳೆ ಕೊಡಗಿನ ಜನತೆಗೆ ನೀಡಿರುವ ಭರವಸೆಯಂತೆ; ಕಸ್ತೂರಿ ರಂಗನ್ ವರದಿಯಿಂದ ಯಾವದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ತಮ್ಮದೆಂದು ಪ್ರತಾಪ್ ಸಿಂಹ ಪುನರುಚ್ಚರಿಸಿದರು.
ಆಸ್ತಿ ಮಾರಬೇಡಿ : ಕೊಡಗಿನಲ್ಲಿ ಎಲ್ಲ ಸಾಮಥ್ರ್ಯದೊಂದಿಗೆ ಒಳ್ಳೆಯ ಜನರಿದ್ದರೂ ಒಗ್ಗಟ್ಟಿನ ಕೊರತೆಯಿಂದ ತಮ್ಮ ತಮ್ಮ ಆಸ್ತಿ ಮಾರಿ ಹೊರಗೆ ಹೋಗುತ್ತಿರುವ ಪರಿಣಾಮ ಸಮಸ್ಯೆ ಎದುರಾಗುತ್ತಿದೆ ಎಂದ ಅವರು; ತಮ್ಮ ಆಸ್ತಿಯನ್ನು ಉಳಿಸಿಕೊಂಡು ಉದ್ಯೋಗೀಕರಣಕ್ಕೆ ಕಾಳಜಿ ತೋರುವಂತೆ ಕಿವಿಮಾತು ಹೇಳಿದರು. ಆ ದಿಸೆಯಲ್ಲಿ ಕೇಂದ್ರ ಸರಕಾರದ ಮುಖಾಂತರ ಪ್ರವಾಸೋದ್ಯಮ ಅಭಿವೃದ್ಧಿ; ಇನ್ನಿತರ ಸ್ವಯಂ ಉದ್ಯೋಗ ಬಯಸುವವರಿಗೆ ತಾವೇ ಮುಂದೆ ನಿಂತು ಬ್ಯಾಂಕ್ನಿಂದ ಆರ್ಥಿಕ ಸೌಲಭ್ಯ ಕೊಡಿಸುವದಾಗಿ ಘೋಷಿಸಿದರು.
ಹೊರರಾಜ್ಯಗಳ ಮಂದಿಗೆ ಜಾಗ ಮಾರಾಟಗೊಳಿಸಿ ವ್ಯಾಪಾರೋ ದ್ಯಮಕ್ಕೆ ಒತ್ತು ನೀಡುವದು ಯಾರ ತಪ್ಪೆಂದು ಪ್ರಶ್ನಿಸಿದ ಅವರು; ಮುಂದೆಯಾದರೂ ಕೊಡಗಿನ ನೆಲ, ಜಲ, ಸಂಸ್ಕøತಿ, ಆಚಾರ - ವಿಚಾರಗಳ ಉಳಿವಿಗೆ ಸ್ಥಳೀಯರು ಹೆಚ್ಚಿನ ಕಾಳಜಿ ತೋರುವಂತೆ ಸಲಹೆ ನೀಡುತ್ತಾ; ತಾವಂತೂ ಇಲ್ಲಿ ಆಸ್ತಿ ಮಾಡಲು ಬಯಸದೆ ಅಭಿವೃದ್ಧಿ ಕೆಲಸಗಳಿಗೆ ಪ್ರಾಮಾಣಿಕ ಸಂಕಲ್ಪ ಕೈಗೊಂಡಿರುವದಾಗಿ ಮನಃಪೂರ್ವಕ ನುಡಿಯಾಡಿದರು.
ಸರಕಾರದ ಪಾತ್ರ ಮುಖ್ಯ : ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ರೈಲ್ವೇ ಯೋಜನೆ, ಹೆದ್ದಾರಿ ಅಭಿವೃದ್ಧಿ; ಕಳೆದ ಸಾಲಿನ ಪ್ರಾಕೃತಿಕ ವಿಕೋಪ ಸಂದರ್ಭ ಜಲಸ್ಫೋಟದೊಂದಿಗೆ ಭೂಕುಸಿತ ಉಂಟಾಗಿ ಸಂತ್ರಸ್ತರಾದವರಿಗೆ ಮತ್ತು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವದು ಇತ್ಯಾದಿ ರಾಜ್ಯ ಸರಕಾರದ ಜವಾಬ್ದಾರಿಯಿದ್ದು; ಕೇಂದ್ರದ ಯೋಜನೆಗಳ ಅನುಷ್ಠಾನ ಗೊಳಿಸುವಲ್ಲಿಯೂ ಕರ್ನಾಟಕ ಸರಕಾರ ಮುಖ್ಯ ಪಾತ್ರ ವಹಿಸಬೇಕಿದೆ ಎಂದು ಬೊಟ್ಟು ಮಾಡಿದರು.
ರಚನಾತ್ಮಕ ಟೀಕೆ ಇರಲಿ : ತಾವೂ ಕೂಡ ಪತ್ರಿಕೋದ್ಯಮದಿಂದ ರಾಜಕೀಯಕ್ಕೆ ಬಂದಿದ್ದು; ಮಾದ್ಯಮದವರ ಸಹಿತ ಯಾವದೇ ರಾಜಕಾರಣಿಗಳು ಮತ್ತು ಸಾರ್ವಜನಿಕರು ರಚನಾತ್ಮಕ ಟೀಕೆ ಮಾಡಿದರೆ ಅವನ್ನು ಕೇಳಬಯಸುವೆ ಎಂದ ಪ್ರತಾಪ್ ಸಿಂಹ; ಅನಾವಶ್ಯಕ ಆರೋಪಿಗಳಿಗೆ ಪ್ರತಿಕ್ರಿಯಿಸಿ ಸಮಯ ವ್ಯರ್ಥಗೊಳಿಸಲಾರೆ ಎಂದು ಸಮರ್ಥಿಸಿಕೊಂಡರು.
ಹೆಮ್ಮೆ ಪಡುವೆ : ಕೊಡಗು - ಮೈಸೂರು ಕ್ಷೇತ್ರದ ಸಂಸದರಾಗಿ ಕಳೆದ ಬಾರಿಗಿಂತ 1.30 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿರುವ ಜನತೆಯ ನಿರೀಕ್ಷೆಯಂತೆ ಕರ್ತವ್ಯ ನಿರ್ವಹಿಸಲು ಹೆಮ್ಮೆ ಪಡುವದಾಗಿ ನುಡಿಯುತ್ತಾ; ಯಾವದೇ ಮಂತ್ರಿ ಪದವಿ, ಅಧಿಕಾರಲಾಲಸೆ, ಹಣಗಳಿಕೆಯ ಅಪೇಕ್ಷೆಯಿಲ್ಲ ಎಂದರಲ್ಲದೆ; ಬಹುಶಃ ರಾಜಕೀಯ ಇರುವೆಡೆಗಳಲ್ಲಿ ಭ್ರಷ್ಟಾಚಾರ ತಳ್ಳಿಹಾಕಲಾಗದು ಎಂದು ಮಾರ್ಮಿಕವಾಗಿ ನುಡಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಡಿ ಸಂಸದರಾಗಿರುವದೇ ಹೆಮ್ಮೆಯೆಂದು ಪ್ರತಿಪಾದಿಸಿ ಕೊಂಡರು. ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯದರ್ಶಿ ಸುಬ್ರಮಣಿ ವೇದಿಕೆಯಲ್ಲಿದ್ದರು.