ಮಡಿಕೇರಿ, ಜೂ. 14: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬಾರೆ ಯಲ್ಲಿ ಖಾಸಗಿಯ ವರಿಂದ ರ್ಯಾಫ್ಟಿಂಗ್ ನಡೆಸುವ ಬಗ್ಗೆ ಅರಣ್ಯ ಇಲಾಖೆಗೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಈ ಸಂಬಂಧ ತಾ. 17 ರಂದು ಸಭೆ ಕರೆದಿರುವದಾಗಿ ಪ್ರತಿಕ್ರಿಯಿಸಿದ್ದಾರೆ. ದುಬಾರೆ ರ್ಯಾಫ್ಟಿಂಗ್ ನಿರ್ವಹಣಾ ಸಮಿತಿ ರಚನೆಯೊಂದಿಗೆ; ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಿಂದಿನ ಸಭೆಯಲ್ಲಿ ಚರ್ಚಿಸಿದ್ದು, ಅಂತಿಮ ನಿರ್ಧಾರ ಆಗಿಲ್ಲವೆಂದು ಅವರು ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ.ಇಂದಿನ ‘ಶಕ್ತಿ’ಯಲ್ಲಿ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ತಾ. 17ರ ಸಭೆಯಲ್ಲಿ ರ್ಯಾಫ್ಟಿಂಗ್ ನಿರ್ವಹಣಾ ಸಮಿತಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ವಿವರಿಸಿದ್ದಾರೆ. ಆದರೆ ಡಿಎಫ್ಓ ಅವರು ಅರಣ್ಯ ಇಲಾಖಾ ವತಿಯಿಂದ ರ್ಯಾಫ್ಟಿಂಗ್ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿ ಆಸಕ್ತ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ್ದು, ಜಿಲ್ಲಾಡಳಿತದ ಗಮನಕ್ಕೆ ಬಂದಿರಲಿಲ್ಲವೆಂಬ ಬಗ್ಗೆ ‘ಶಕ್ತಿ’ಗೆ ಮಾಹಿತಿ ಒದಗಿದೆ.