ಮಡಿಕೇರಿ, ಜೂ. 14: ನಿಫಾ ವೈರಾಣು ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವದರ ಜೊತೆಗೆ ಮಳೆಗಾಲದ ಅವಧಿಯಲ್ಲಿ ಹರಡುವಂತಹ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಫಾ ವೈರಾಣು ಜ್ವರದ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ನಡೆದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣಗಳು ಕಂಡು ಬರುತ್ತಿರುವದ ರಿಂದ ಕೊಡಗು ಜಿಲ್ಲೆಯಲ್ಲಿಯೂ ಸಹ ಕಟ್ಟೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ನಿಫಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಮಳೆಗಾಲದ ಸಂದರ್ಭದಲ್ಲಿ ಹರಡುಬಹುದಾದ ಡೆಂಗ್ಯು, ಚಿಕನ್‍ಗುನ್ಯ, ಮಲೇರಿಯಾ, ಕಾಮಾಲೆ ಮತ್ತಿತರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಅವರು ಸಲಹೆ ಮಾಡಿದರು.
ನದಿ ಪಾತ್ರಗಳಲ್ಲಿನ ಗ್ರಾಮಗಳು, ರಬ್ಬರ್ ತೋಟದ ಹಾಗೂ ಹಾಡಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ನಿಫಾ ವೈರಸ್ ಜ್ವರ ಸಂಬಂಧಿಸಿದಂತೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ಅತಿ ಹೆಚ್ಚಾಗಿ ಕಂಡುಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರು ಕುಡಿಯಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳುವದು, ರೋಗಿಯ ಶರೀರ ಸ್ರಾವದೊಂದಿಗೆ (ಜೊಲ್ಲು, ಬೆವರು, ಮೂತ್ರ ಇತ್ಯಾದಿ) ಸಂಪರ್ಕ ತಪ್ಪಿಸಬೇಕು ಎಂದು ತಿಳಿಸಿದರು.
104 ಸಂಪರ್ಕಿಸಿ: ರೋಗಿಗಳು 104 ದೂರವಾಣಿ ಕರೆ ಮಾಡಲು ಡಾ. ಶಿವಕುಮಾರ್ ಸಲಹೆ ನೀಡಿದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ, ಐಟಿಡಿಪಿ ಅಧಿಕಾರಿ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅರುಂಧತಿ, ತಾಲೂಕು ವೈದ್ಯಾಧಿಕಾರಿ ಡಾ. ಎ.ಸಿ. ಶಿವಕುಮಾರ್, ಡಾ. ಗುರುರಾಜ್, ಡಾ. ಲೋಕೇಶ್ ಹಲವು ಮಾಹಿತಿ ನೀಡಿದರು.