ಚೆಟ್ಟಳ್ಳಿ, ಜೂ. 14: ಕೊಡಗಿನಲ್ಲಿ ಅತ್ಯಂತ ಹಳೆಯದಾದ ಸೂರ್ಲಬ್ಬಿ ಶಾಲೆಯು ಇಂದು ಸರಕಾರದ ದಿವ್ಯ ನಿರ್ಲಕ್ಷ್ಯದಿಂದ ಬಾಗಿಲು ಹಾಕಿಕೊಳ್ಳುವ ಹಂತವನ್ನು ತಲಪಿದೆ. ಸುಮಾರು 1912 ನೇ ಇಸವಿಯಲ್ಲಿ ಪ್ರಾರಂಭವಾದ ಶಾಲೆಯು ತನ್ನ ಇತಿಹಾಸದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ, ಕುಗ್ರಾಮ ಸೂರ್ಲಬ್ಬಿ ಜನತೆಗೆ ನೆಲೆ ಕಟ್ಟಿಕೊಳ್ಳುವಂತೆ ಮಾಡಿದೆ.
ಈ ಶಾಲೆಯಲ್ಲಿ ಸುಮಾರು 15 ವರ್ಷಗಳ ಹಿಂದೆ 350 ರಿಂದ 400 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತಿದ್ದರೆ, ಈಗ ಕೇವಲ 10 ರಿಂದ 20 ಮಕ್ಕಳವರೆಗೆ ತಲಪಿದೆ. ಅದರಲ್ಲೂ ಪ್ರಾಥಮಿಕ ಶಾಲೆಯ ತರಗತಿಗಳಿಗೆ ಪಾಠ ಪ್ರವಚನ ಮಾಡಲು ಕೇವಲ ಮೂವರು ಶಿಕ್ಷಕರಿದ್ದಾರೆ. ಅವರು ದಿನಕ್ಕೆ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ, 8ನೇ ತರಗತಿ ಅವಧಿಗಳಿಗೆ ಪಾಠ ಮಾಡಬೇಕಾಗುತ್ತದೆ. ಪ್ರೌಢ ಶಾಲೆಗೆ ಐವರು ಶಿಕ್ಷಕರಿದ್ದಾರೆ.
ಈ ಶಾಲೆಗೆ ಬರುವ ಮಕ್ಕಳು ದೂರದ ಊರಾದ ಹಮ್ಮಿಯಾಲ, ಮುಟ್ಲು, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ ಮುಂತಾದ ಬೆಟ್ಟ ಪ್ರದೇಶಗಳಿಂದ ಕಾಲುನಡಿಗೆಯಲ್ಲಿ ಐದಾರು ಕಿ.ಮೀ. ನಡೆದು ಮುಖ್ಯ ರಸ್ತೆಗೆ ಬಂದರೆ ಅವರಿಗೆ ಶಾಲೆಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲ. ಅದರಿಂದ ಪುನಃ ಅವರು ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಏಳೆಂಟು ಕಿ.ಮೀ.ಗಳು ಶಾಲೆಗೆ ಕಾಲು ನಡಿಗೆಯಲ್ಲೇ ಕ್ರಮಿಸಬೇಕಾಗುತ್ತದೆ. ಕಳೆದ ಮೂರು ವರ್ಷಗಳಿಂದ ದಾನಿಯೊಬ್ಬರು ಹಮ್ಮಿಯಾಲದಿಂದ ಬರುವ ಮಕ್ಕಳಿಗೆ ಒಂದು ಖಾಸಗಿ ವಾಹನವನ್ನು ವ್ಯವಸ್ಥೆ ಮಾಡಿದ್ದರು. ಆದರೆ ಈ ವರ್ಷ ಅವರ ಕಡೆಯಿಂದ ಯಾವದೇ ಪ್ರತಿಕ್ರಿಯೆ ಇಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಬೇರೆ ಕಡೆ ಶಾಲೆಗೆ ಸೇರಿಸಲು ಟಿ.ಸಿ. ಕೇಳಲು ಬಂದಿದ್ದರೆಂದು ಮುಖ್ಯೋಪಾಧ್ಯಾಯನಿ ಸುಂದರಿ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ವಿದ್ಯುತ್ ಅಭಾವ ಇರುವದರಿಂದ ಶಾಲೆಯ ಲೆಕ್ಕ ಪತ್ರಗಳ ವ್ಯವಹಾರವನ್ನು ಗಣಕ ಯಂತ್ರದ ಮೂಲಕ ಮಾಡಲು ಆಗುವದಿಲ್ಲ ಎಂದು ಮತ್ತು ಈಗಿನ ಸರಕಾರದ ನಿಯಮದಲ್ಲಿ ಎಲ್ಲ ವ್ಯಹಾರವು ಆನ್ಲೈನ್ ಮುಖಾಂತರ ಮಾಡಬೇಕಾಗಿರುವದರಿಂದ ಸೂರ್ಲಬ್ಬಿಗೆ ನೆಟ್ವರ್ಕ್ ಸೌಲಭ್ಯ ದೊರೆಯದ್ದರಿಂದ ಅದು ಕೂಡ ತಾವು ಮನೆಯಲ್ಲಿ ನಿರ್ವಹಿಸಿ ಕಳುಹಿಸುವಂತಾಗಿದೆ ಎಂದರು.
ಶಾಲಾ ಶೌಚಾಲಯವು ತೀರಾ ಕಳಪೆ ಕೆಲಸದಿಂದ ಕೂಡಿದ್ದು, ಹೆಣ್ಣು ಮಕ್ಕಳ ಒಂದು ಶೌಚಾಲಯಕ್ಕೆ ಬಾಗಿಲನ್ನೇ ಅಳವಡಿಸಿರುವದಿಲ್ಲ. ಅದಕ್ಕೆ ಸರಿಯಾದ ಬೇಸಿನ್ ವ್ಯವಸ್ಥೆಯೂ ಇಲ್ಲ. ಕೆಲವು ಶೌಚಾಲಯದಲ್ಲಿ ಬೇಸಿನ್ ಕಾಣುವದಿಲ್ಲ ಮತ್ತು ಕೆಲವು ಬಾಗಿಲುಗಳನ್ನೇ ಅಳವಡಿಸಿಲ್ಲ.
ಕಳೆದ ಮೂರು ವರ್ಷದ ಹಿಂದೆ ಸರಕಾರವು ನಿಯಮಿಸಿದ ಶಿಕ್ಷಕರು ಹಮ್ಮಿಯಾಲ ಪ್ರಾಥಮಿಕ ಶಾಲೆಗೆ ಸರಿಯಾಗಿ ಹಾಜರಾಗದ ಕಾರಣ, ಅಲ್ಲಿನ ಮಕ್ಕಳ ಪೋಷಕರು ಶಾಲೆಯಿಂದ ವರ್ಗಾವಣೆ ಪತ್ರವನ್ನು ಪಡೆದು ಸೂರ್ಲಬ್ಬಿ ಶಾಲೆಗೆ ಸೇರಿಸಿದ್ದಾರೆಂದು ಅಲ್ಲಿನ ಶಿಕ್ಷಕರೊಬ್ಬರು ಹೇಳಿದರು. ಆದರೆ ಈಗ ತಮ್ಮ ಶಾಲೆಗೆ ಈ ದುಸ್ಥಿತಿ ಬಂತೆಂದು ಮರುಗಿದರು.
ಹೊರಗಿನ ಶಾಲೆಯ ಅವಲಂಭನೆ
ಈಗಿನ ಮುಂದುವರಿದ ಯುಗದಲ್ಲಿ ಮಕ್ಕಳ ಪೋಷಕರು ಅಲ್ಪಸ್ವಲ್ಪ ವಿದ್ಯಾವಂತರಾಗಿದ್ದು , ತಮ್ಮ ಮಕ್ಕಳು ಎಲ್ಲರಂತೆ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಇಚ್ಛಿಸುತ್ತಾರೆ. ಅದರಿಂದ ಅವರ ಮಕ್ಕಳನ್ನು ಕುಗ್ರಾಮದ ಗಾಳಿ, ಮಳೆ, ಬಿಸಿಲು-ಚಳಿಯಿಂದ ರಕ್ಷಿಸಲು ಮತ್ತು ಅವರಿಗೆ ಸರಿಯಾದ ವಿದ್ಯಾಭ್ಯಾಸ ದೊರುಕುವಂತೆ ಮಾಡಲು ದೂರದ ಊರಾದ ಮಡಿಕೇರಿ, ಮಾದಾಪುರ, ಸುಂಟಿಕೊಪ್ಪ, ಪೊನ್ನಂಪೇಟೆ, ಮುಂತಾದ ಊರಿನಲ್ಲಿ ತಮ್ಮ ಮಕ್ಕಳನ್ನು ಸಾಲ ಮಾಡಿ, ಅಥವಾ ಯಾವದಾದರೂ ಸಂಘ-ಸಂಸ್ಥೆಗಳ ಮುಖಾಂತರ, ನೆಂಟರಿಷ್ಟರ ಸಹಾಯವನ್ನು ಕೋರಿ ಓದಿಸತೊಡಗಿದ್ದಾರೆ. ಇನ್ನು ಕೆಲವರು ತಾವು ಕಷ್ಟಪಟ್ಟು ದುಡಿದು ಕೃಷಿಯಲ್ಲಿ ತೊಡಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಲೆಯೂ ದಕ್ಕದೆ ದೂರದ ಊರಾದ ಬೆಂಗಳೂರಿಗೆ ತೆರಳಿ ಗನ್ ಮ್ಯಾನ್ ಕೆಲಸವನ್ನು ಮಾಡುತ್ತಾ ಜೀವನ ನಿರ್ವಹಿಸುತ್ತಾ ಮಕ್ಕಳನ್ನು ಓದಿಸುತ್ತಿದ್ದಾರೆ. ಈ ಗ್ರಾಮಕ್ಕೆ ದಿನ ಎರಡು ಸರಕಾರಿ ಬಸ್ಸು ಬರುತ್ತದೆ. ಅದು ಬೆಳಿಗ್ಗೆ ಮಾದಾಪುರದಿಂದ ಹೊರಟು ಗರ್ವಾಲೆ, ಸೂರ್ಲಬ್ಬಿ ಮಾರ್ಗವಾಗಿ ಸೋಮವಾರಪೇಟೆಗೆ ತೆರಳಿದರೆ ,ಸಂಜೆ ಮತ್ತೊಂದು ಬಸ್ಸು ಅದೇ ಮಾರ್ಗವಾಗಿ ವಾಪಸ್ಸು ಚಲಿಸುತ್ತದೆ. ಮುಟ್ಲು ಹಮ್ಮಿಯಾಲ ಜನರ ಪರಿಸ್ಥಿತಿ ದೇವರೇ ಗತಿ.
ಕುಸಿಯುವ ಹಂತದಲ್ಲಿ ಮನೆ
ಇನ್ನೂ ಕನಿಷ್ಟ ಮೂರು ವರ್ಷದಿಂದ ಗ್ರಾಮದ ರೈತಾಪಿ ವರ್ಗದ ಜನರು ಯಾವದೇ ಫಸಲು (ಇಳುವರಿ) ಇಲ್ಲದೆ ಗದ್ದೆಯಲ್ಲಿ ನಾಟಿ ಮಾಡಿಕೊಂಡು ಅಲ್ಪ ಸ್ವಲ್ಪ ಏಲಕ್ಕಿ, ಕಾಫಿಯನ್ನು ಅವಲಂಬಿಸಿದ ಜನರು ಈಗ ಊಟ ಮಾಡುವದಕ್ಕೂ ಪರದಾಡುತ್ತಿದ್ದಾರೆ. ಹಲವು ಮನೆಯು ಈ ವರ್ಷ ಮಳೆಗೆ ಕುಸಿಯುವ ಹಂತ ತಲಪಿದ್ದು, ಇಲ್ಲಿಯ ಶ್ರಮಜೀವಿಗಳು ಬೀದಿಗೆ ಬೀಳುವ ಹಂತಕ್ಕೆ ತಲಪಿದ್ದಾರೆ. ಸರಕಾರ ಈ ಕೂಡಲೇ ಎಚ್ಚೆತ್ತು ಅವರಿಗೆ ಹೊಸ ಮನೆ ನಿರ್ಮಾಣದ ವ್ಯವಸ್ಥೆ ಮಾಡಬೇಕೆಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳಂಗಪ್ಪ ಆಗ್ರಹಿಸಿದ್ದಾರೆ.
ವಿದ್ಯುಚ್ಛಕ್ತಿ ಅಭಾವ
ಗ್ರಾಮದಲ್ಲಿ ವಿದ್ಯುಚ್ಛಕ್ತಿ ಕಣ್ಣ ಮುಚ್ಚಾಲೆ ಆಟ ಸಾಮಾನ್ಯವಾಗಿದೆ.ಮಕ್ಕಳಿಗೆ ಓದುವದಕ್ಕೆ ಅಥವಾ ಬೇರೆ ಕೆಲಸಗಳಿಗೆ ಗ್ರಾಮದಲ್ಲಿ ಕೊಡುವ ಸೀಮೆಎಣ್ಣೆಯೂ ಸಾಕಾಗುವದಿಲ್ಲ, ಮಳೆ ಗಾಳಿ-ಚಳಿಯಿಂದ ತಮ್ಮನ್ನು ಹಾಗೂ ಮಕ್ಕಳನ್ನು ವಯೋವೃದ್ಧರನ್ನು ರಕ್ಷಿಸುವದು ಸಾಮಾನ್ಯದ ಮಾತಲ್ಲ ಎಂದು ಅಂಗನವಾಡಿ ಸಹಾಯಕಿ ಗೌರಮ್ಮನವರ ಅಳಲು. ತಮ್ಮ ಮನೆಗಳಿಗೆ ಸರಕಾರದಿಂದ ಸಣ್ಣ ಮಟ್ಟದ ಸೌರ ವಿದ್ಯುತ್ ದೀಪ ಒದಗಿಸುವಂತೆ ಅವರು ಕೋರಿದರು.
ಕೊಡಗು ಸೇವಾ ಕೇಂದ್ರ ಭೇಟಿ
ಮಡಿಕೇರಿಯಲ್ಲಿ ಕೆಲವು ಸಮಾನ ಮನಸ್ಕರಿಂದ ನಡೆಯುತ್ತಿರುವ ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳಾದ ಅಜ್ಜಿನಂಡ ತಮ್ಮು ಪೂವಯ್ಯ, ತೇಲಪಂಡ ಪ್ರಮೋದ್ ಸೋಮಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ಭೇಟಿ ನೀಡಿ ಹಲವಾರು ಮಾಹಿತಿ ಸಂಗ್ರಹಿಸಿದರು, ಆನ್ಲೈನ್ ವ್ಯವಸ್ಥೆ ಇಲ್ಲದ ಕಾರಣ ಶಾಲೆಯ ದಾಖಲಾತಿಗಳನ್ನು ನಮೂದಿಸಲು ಒಂದು ಲ್ಯಾಪ್ ಟಾಪ್ ಒದಗಿಸಿಕೊಡುವಂತೆ, ಮತ್ತು ಹಮ್ಮಿಯಾಲ ಕಡೆಯಿಂದ ಶಾಲೆಗೆ ಬರುವ ಹತ್ತು ಮಕ್ಕಳ ವರ್ಷದ ವಾಹನದ ವ್ಯವಸ್ಥೆಗೆ ರೂ. 85000 ಗಳನ್ನು ಒದಗಿಸುವ ಭರವಸೆ ನೀಡಿದರು. ಮುಂದಿನ ಸಾಲಿನಲ್ಲಿ ಶಾಲೆಗೆ ಒಂದು ವಾಹನ ನೀಡುವಂತೆ ಮತ್ತು ಅದರ ಖರ್ಚನ್ನು ನಿಭಾಯಿಸಲು ಒಂದು ಊರಿನ ಮತ್ತು ಶಾಲೆಯ ಜಂಟಿ ಸಮಿತಿಯನ್ನು ರಚಿಸುವಂತೆ ಕೊಡಗು ಸೇವಾ ಕೇಂದ್ರ ಪದಾಧಿಕಾರಿಗಳು ತೀರ್ಮಾನಿಸಿದರು.
ಶಾಲೆಯಲ್ಲಿ ನಡೆದ ಸರಳ ಚರ್ಚಾ ಸಮಾರಂಭದಲ್ಲಿ ಮಾಜಿ ಎಸ್ಡಿ.ಎಂಸಿ ಅಧ್ಯಕ್ಷರು ಮತ್ತು ದಾನಿಗಳಾದ ನೇತ್ರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳಂಗಪ್ಪ, ಎಸ್ಡಿಎಂಸಿ ಪ್ರಾಥಮಿಕ ಶಾಲಾ ಅಧ್ಯಕ್ಷ ರವಿ, ಎಸ್ಡಿ ಎಂಸಿ ಪ್ರೌಢ ಶಾಲಾ ಅಧ್ಯಕ್ಷ ಅಶೋಕ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ್ ನಾಯಕ್, ಪ್ರಾಥಮಿಕ ಮುಖ್ಯೋಪಾಧ್ಯಾಯಿನಿ ಸುಂದರಿ ಇದ್ದರು.