ಆಲೂರು-ಸಿದ್ದಾಪುರ, ಜೂ. 14: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ. ಕರ್ನಾಟಕ ಭೂ ಹಕ್ಕುದಾರರ ಜಿಲ್ಲಾ ವೇದಿಕೆ, ಸರಕಾರಿ ಪ.ಪೂ. ಕಾಲೇಜು ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಸೇರಿದ ಜಾಗದಲ್ಲಿ ಮತ್ತು ಮುಖ್ಯರಸ್ತೆ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿವಿಧ ಸಸಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾ.ಪಂ.ಗೆ ವಿತರಿಸಿತು. ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಗಿಡಗಳನ್ನು ನಾಟಿ ಮಾಡಿದರು. ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ರಾಜ್ಯ ಸಂಚಾಲಕ ರಾಜಶೇಖರ್ ನಾಯ್ಡು, ಮಹಿಳಾ ಸಂಚಾಲಕಿ ಚಿತ್ರಾವತಿ, ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್, ಪಿಡಿಓ ಪೂರ್ಣಿಮಾ, ಪ.ಪೂ. ಕಾಲೇಜು ಉಪನ್ಯಾಸಕ ಶಿವಕುಮಾರ್, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾ.ಪಂ. ಸದಸ್ಯರು ಹಾಜರಿದ್ದರು.