ಹೆಬ್ಬಾಲೆ, ಜೂ. 13: ತೊರೆನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಮೂರ್ತಿ ಅವರು ನಿವೃತ್ತಿ ಹೊಂದಿದ ಹಿನ್ನೆಲೆ ಇಲಾಖೆ ಹಾಗೂ ಗ್ರಾಮಸ್ಥರು ಸನ್ಮಾನಿಸಿ, ಬೀಳ್ಕೊಟ್ಟರು.
ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವರ್ಗ, ಹಳೆಯ ವಿದ್ಯಾರ್ಥಿ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಗ್ರಾಮಸ್ಥರು ಪ್ರತ್ಯೇಕವಾಗಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್. ಪ್ರಸನ್ನ, ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಸನ್ಮಾನ ಸ್ವೀಕರಿಸಿ ಶಿಕ್ಷಕ ಕೃಷ್ಣಮೂರ್ತಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಪಿ.ಪಿ. ಕಾಮಾಕ್ಷಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಆರ್. ಕುಮಾರ್, ಸಿ.ಆರ್.ಪಿ.ಹೆಚ್.ಎಂ. ಗಿರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಸ್.ಎ. ಯೋಗೇಶ್, ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಹೆಚ್.ಎಸ್. ರಾಜಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಎ. ರವಿಚಂದ್ರ, ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.ಕೊಡ್ಲಿಪೇಟೆ: ಕೊಡ್ಲಿಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 33 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಡಿ ಗ್ರೂಪ್ ನೌಕರ ಕೆ.ಎಸ್. ಚಂದ್ರೇಗೌಡ ಅವರನ್ನು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸನ್ಮಾನಿಸಿ, ಬೀಳ್ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಮಾತನಾಡಿ, ಸಿಬ್ಬಂದಿ ಚಂದ್ರೇಗೌಡ ಅವರ ಕರ್ತವ್ಯವನ್ನು ಸ್ಮರಿಸಿದರು. ನಿರ್ದೇಶಕ ಬಿ.ಕೆ. ಚಿನ್ನಪ್ಪ ಹಾಗೂ ಬಿ.ಎ. ವಸಂತ್ ಮಾತನಾಡಿದರು.
ಸಂಘದ ಉಪಾಧ್ಯಕ್ಷೆ ಭಾನುಮತಿ, ನಿರ್ದೇಶಕರಾದ ಕೆ.ಸಿ. ಪ್ರಸನ್ನ, ಕೆ.ಬಿ. ಸುಬ್ರಮಣ್ಯಾಚಾರ್, ಕೆ.ಪಿ. ಯೋಗೇಶ್, ಹೆಚ್.ಎನ್. ನಿರ್ಮಲಾ, ಬಿ.ಕೆ. ಯತೀಶ್, ಬಿ.ಈ. ರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಡಿ. ನಾಗರಾಜ್ ಹಾಗೂ ಸಿಬ್ಬಂದಿ ಹಾಜರಿದ್ದರು.ಹೊದ್ದೂರು: ಹೊದ್ದೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಕಳೆದ 30 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ತಂಬಾಂಡ ಮಣಿ ಭೀಮಯ್ಯ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಣಿ ಭೀಮಯ್ಯ ಅವರ ಸೇವೆಯನ್ನು ಸ್ಮರಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಂಡ ಸೋಮಣ್ಣ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜೇನುಕುರುಬ ಜನಾಂಗ ಅಭಿವೃದ್ಧಿಗೆ ಕ್ರಮ: ಡಿ.ಸಿ. ಸೂಚನೆ
ಮಡಿಕೇರಿ, ಜೂ. 13: ಜಿಲ್ಲೆಯ ಮೂಲ ನಿವಾಸಿ ಜೇನುಕುರುಬ ಜನಾಂಗದವರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮ ಗಳಿದ್ದು, ಇವಗಳನ್ನು ತಲಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೂಲ ನಿವಾಸಿ ಜೇನು ಕುರುಬ ಜನಾಂಗದವರ ಅಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೇನು ಕುರುಬ ಜನಾಂಗದ ಕುಟುಂಬದವರಿಗೆ ಮನೆ ನಿರ್ಮಾಣ ಮಾಡುವದು, ಕೃಷಿ, ಭೂ ಅಭಿವೃದ್ಧಿ ಕಾರ್ಯಕ್ರಮಗಳು, ಪಶು ಸಂಗೋಪನೆ ಇಲಾಖೆ ಮೂಲಕ ಪಶುಭಾಗ್ಯ ಯೋಜನೆಯ ಅನುಷ್ಠಾನ, ಹಸು, ಎಮ್ಮೆ, ತೋಟಗಾರಿಕೆ ಇಲಾಖೆ ಕಾರ್ಯಕ್ರಮದಡಿ ಜೇನು ಕೃಷಿ, ಆರೋಗ್ಯ ಕಾರ್ಯಕ್ರಮದಡಿ ಆರೋಗ್ಯ ಸಂಬಂಧ ಜಾಗೃತಿ ಮೂಡಿಸುವದು, ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಉಚಿತವಾಗಿ ಕಲ್ಪಿಸುವದು, ಹಾಡಿಗಳಿಗೆ ವಿದ್ಯುತ್ ಸಂಪರ್ಕ, ಸೋಲಾರ್ ದೀಪ ವ್ಯವಸ್ಥೆ ಮಾಡುವದು ಹೀಗೆ ಹಲವು ಕಾರ್ಯಕ್ರಮಗಳನ್ನು ತಲಪಿಸಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ವಿವಿಧ ಇಲಾಖೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜೇನುಕುರುಬ ಜನಾಂಗದವರಿಗೆ ಯಾವ ರೀತಿಯ ಸೌಲಭ್ಯಗಳನ್ನು ಕಲ್ಪಿಸಬಹುದು ಎಂಬ ಬಗ್ಗೆ ವಿವಿಧ ಇಲಾಖೆಗಳು ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್ ಅವರು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 1303 ಗುರಿಯಲ್ಲಿ 1,157 ಆಯ್ಕೆ ಮಾಡಲಾಗಿದೆ. ಇದರಲ್ಲಿ 45 ಅಡಿಪಾಯ ಪೂರ್ಣಗೊಂಡಿದೆ. 57 ಗೋಡೆ ತನಕ ಕಾಮಗಾರಿ ನಡೆದಿದೆ. 78 ಛಾವಣಿ ಹಂತ ತಲಪಿದೆ. 586 ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 391 ಮನೆಗಳ ನಿರ್ಮಾಣ ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದರು.
ರಸ್ತೆ ಕಾಮಗಾರಿಗೆ ಸಂಬಂಧಿಸಿ ದಂತೆ 29 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 23 ಪೂರ್ಣಗೊಂಡಿದೆ. 5 ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ 34 ಕಾಮಗಾರಿಗಳಲ್ಲಿ 28 ಕಾಮಗಾರಿ ಪೂರ್ಣಗೊಂಡಿದ್ದು, 8 ಕಾಮಗಾರಿ ಪ್ರಗತಿಯಲ್ಲಿದೆ. ಹಾಗೆಯೇ ಸಮುದಾಯ ಭವನ ನಿರ್ಮಾಣ ಸಂಬಂಧಿಸಿದಂತೆ 5 ಕಾಮಗಾರಿಯಲ್ಲಿ 3 ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.
ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಎಲೆಕ್ಟ್ರೀಷಿಯನ್, ಮ್ಯಾನ್ಸನ್, ಟೈಲ್ಸ್ ಅಳವಡಿಸುವದು, ಪ್ಲಂಬರಿಂಗ್, ವಾಹನ ಚಾಲನಾ ತರಬೇತಿ, ಮರ ಗೆಲಸ, ಮೊಬೈಲ್ ರಿಪೇರಿ, ಬ್ಯೂಟಿಷೀಯನ್ ಮತ್ತಿತರ ವನ್ನು ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ 9.50 ಲಕ್ಷ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಜೇನುಕುರುಬ ಸಮಾಜದ ಮುಖಂಡರಾದ ಜೆ.ಪಿ. ರಾಜು, ಜೆ.ಕೆ. ರಾಮು, ಇಂದಿರಾ, ಸೋಮಯ್ಯ ಅವರು ವೈಯಕ್ತಿಕ ಅರಣ್ಯ ಹಕ್ಕು ಪತ್ರ ನೀಡುವದರ ಜೊತೆಗೆ ಸಮುದಾಯ ಅರಣ್ಯ ಹಕ್ಕು ಪತ್ರಗಳನ್ನು ನೀಡುವಂತಾಗಬೇಕು. ಬಾಳೆಗುಂಡಿ ಹಾಡಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಕೋರಿದರು.
ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮೂಲನಿವಾಸಿ ಜೇನು ಕುರುಂಬ ಜನಾಂಗದವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಬಂಧ ಹಲವು ಸಲಹೆ ನೀಡಿದರು.
ಮನೆಗಳ ಹಾಗೂ ವಿವಿಧ ಮೂಲಭೂತ ಸೌಕರ್ಯ ಕಾಮಗಾರಿಗಳ ಪ್ರಗತಿ ಪರಿಶೀಲನೆ, 2011-12 ಮತ್ತು 2012-13ನೇ ಸಾಲಿನಲ್ಲಿ ಅನುಷ್ಠಾನಗೊಳ್ಳದಿರುವ ಕಾರ್ಯಕ್ರಮಗಳ ಬದಲಿಗೆ ಹೊಸ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಬಗ್ಗೆ, ಕೃಷಿ ಕಾರ್ಯಕ್ರಮದಡಿ ಬಿಡುಗಡೆಯಾಗಿರುವ ರೂ. 25 ಲಕ್ಷ ಅನುದಾನದಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ, ಭೂ ಅಭಿವೃದ್ಧಿ ಕಾರ್ಯಕ್ರಮಕ್ಕೆ ರೂ. 42 ಲಕ್ಷ ಬಿಡುಗಡೆಯಾಗಿದ್ದು, ಕೃಷಿ ಇಲಾಖೆಯಲ್ಲಿನ ಮಾರ್ಗ ಸೂಚಿಗಳನ್ವಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ, ಪಶು ಸಂಗೋಪನೆ ಕಾರ್ಯಕ್ರಮದಡಿ ಬಿಡುಗಡೆಯಾಗಿರುವ ರೂ. 80 ಲಕ್ಷ ಅನುದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುವ ಬಗ್ಗೆ, ಇಂಟಿಗ್ರೇಟೆಡ್ ಡೈರಿ ಡೆವಲಪ್ಮೆಂಟ್ ಕಾರ್ಯಕ್ರಮದಡಿ ರೂ. 26.25 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಪಶು ಭಾಗ್ಯ ಯೋಜನೆಯ ಮಾರ್ಗಸೂಚಿಯನ್ವಯ 35 ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಿ ರೂ. 75 ಸಾವಿರಗಳನ್ನು ಇಲಾಖೆಯಿಂದ ಮತ್ತು ರೂ. 25 ಸಾವಿರ ಮೊತ್ತ ಫಲಾನುಭವಿಗಳಿಂದ ಪಡೆದು ಒಟ್ಟು ರೂ. 1 ಲಕ್ಷ ಮೊತ್ತಕ್ಕೆ 2 ಮಿಶ್ರತಳಿ ಹಸು/ ಎಮ್ಮೆಗಳನ್ನು ಖರೀದಿಸಿ ಹಂಚಿಕೆ ಮಾಡುವ ಬಗ್ಗೆ, ತೋಟಗಾರಿಕಾ ಕಾರ್ಯಕ್ರಮದಡಿ ಬಿಡುಗಡೆ ಯಾಗಿರುವ ರೂ. 45 ಲಕ್ಷಗಳ ಅನುದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವ ಬಗ್ಗೆ, ಆರೋಗ್ಯ ಕಾರ್ಯಕ್ರಮದಡಿ ರೂ. 5 ಲಕ್ಷ ಅನು ದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಐಟಿಡಿಪಿ ಅಧಿಕಾರಿ ಶಿವಕುಮಾರ್ ಅವರು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್, ಸೆಸ್ಕ್ ಇಂಜಿನಿಯರ್ ಸೋಮಶೇಖರ್, ಜಿ.ಪಂ. ಇಂಜಿನಿಯರ್ ಶ್ರೀಕಂಠಯ್ಯ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ತಮ್ಮಯ್ಯ, ತಹಶೀಲ್ದಾರ್ ಗೋವಿಂದರಾಜು, ಕೃಷಿ ಅಧಿಕಾರಿ ಗಿರೀಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್, ಚಂದ್ರಶೇಖರ್ ಇತರರು ಹಲವು ಮಾಹಿತಿ ನೀಡಿದರು.
ಅರಣ್ಯ ಹಕ್ಕು ಸಮಿತಿ ಸಭೆ: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಹಕ್ಕು ಸಮಿತಿ ಸಭೆ ನಡೆಯಿತು.
ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ, ಉಪ ವಿಭಾಗಾ ಧಿಕಾರಿ ಟಿ.ಜವರೇಗೌಡ, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ತಾ.ಪಂ. ಇಒ ಜಯಣ್ಣ (ಪೊನ್ನಂಪೇಟೆ) ತಾಲ್ಲೂಕು ಅಧಿಕಾರಿಗಳಾದ ಚಂದ್ರಶೇಖರ್ (ಪೊನ್ನಂಪೇಟೆ), ಶೇಖರ್ (ಸೋಮವಾರಪೇಟೆ), ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಮೂಲ ನಿವಾಸಿ ಜನಾಂಗದವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕು ಪತ್ರವನ್ನು ನೀಡಬೇಕು. ಹಲವು ಹಾಡಿಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಅವರು ಸೂಚನೆ ನೀಡಿದರು.
ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿ ಇರುವ ಅರ್ಜಿಗಳನ್ನು ಗ್ರಾಮ ಸಭೆಯಲ್ಲಿ ಮಂಡಿಸಿ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಕೆದಮುಳ್ಳೂರು ಗ್ರಾಮದಲ್ಲಿ ಗಿರಿಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.