ಮಡಿಕೇರಿ, ಜೂ. 13: ಹಲವು ಕಾರಣಗಳಿಂದ ಕಳೆದ ವರ್ಷ ಸ್ಥಗಿತಗೊಳಿಸಲಾಗಿದ್ದ ದುಬಾರೆ ರಿವರ್ ರ್ಯಾಫ್ಟಿಂಗ್ ಅನ್ನು ಪುನರಾರಂಭಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ, ಅರಣ್ಯ ಇಲಾಖೆಗೆ ಒಪ್ಪಿಸಿದ್ದು, ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಮುಂದಾದರೆ ಬದುಕನ್ನು ಕಟ್ಟಿಕೊಂಡು ಬವಣೆಗೀಡಾಗಿರುವ ರ್ಯಾಫ್ಟಿಂಗ್ ಮಂದಿ, ಅರಣ್ಯ ಇಲಾಖೆ ಅನವಶ್ಯಕ ಕಿರುಕುಳ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಳೆದ ಹಲವು ವರ್ಷಗಳಿಂದ ದುಬಾರೆ ರಿವರ್ ರ್ಯಾಫ್ಟಿಂಗ್ ಜಿಲ್ಲೆ ಮತ್ತು ಪ್ರವಾಸಿಗರಿಗೆ ಒಂದು ಹೊಸ ಅನುಭವದ ಸೃಷ್ಟಿ ಕೇಂದ್ರವಾಗಿದ್ದರೂ ಕೂಡ ಕೆಲವೊಮ್ಮೆ ಕಾನೂನಿಗೆ ವಿರುದ್ಧವಾದ ಘಟನೆಗಳು ಕಂಡು ಬಂದಿದ್ದವು. ನಂಜರಾಯಪಟ್ಟಣ ಪಂಚಾಯಿತಿ ಹಾಗೂ ರಿವರ್ ರ್ಯಾಫ್ಟಿಂಗ್ ಮಂದಿಯ ಮಧ್ಯೆ ಮುಸುಕಿನ ಗುದ್ದಾಟ ನಡೆದು ಕಳೆದ ವರ್ಷ ಪ್ರವಾಸಿಗರು ಮತ್ತು ರಿವರ್ ರ್ಯಾಫ್ಟಿಂಗ್ ಕಡೆಯ ಯುವಕರ ನಡುವೆ ಹೊಡೆದಾಟವಾಗಿ ಪ್ರವಾಸಿಗನೊಬ್ಬ ದುರ್ಮರಣಕ್ಕೀಡಾದ ಘಟನೆ ಯೊಂದಿಗೆ ದುಬಾರೆಗೆ ಒಂದು ಕಪ್ಪು ಚುಕ್ಕಿ ಅಂಟಿಕೊಂಡಿತ್ತು.

ಇದನ್ನು ಪ್ರಮುಖವಾಗಿ ಇಟ್ಟುಕೊಂಡ ಜಿಲ್ಲಾಡಳಿತ ವ್ಯವಸ್ಥಿತ ಕಾನೂನು ರೂಪುಗೊಳ್ಳುವವರೆಗೆ ರ್ಯಾಫ್ಟಿಂಗ್ ಅನ್ನೇ ಬಂದ್ ಮಾಡಿ ಆದೇಶ ಹೊರಡಿಸಿತ್ತು. ಇದರಿಂದ ನೂರಾರು ಮಂದಿ ಕಾರ್ಮಿಕರು ಹಾಗೂ ಮಾಲೀಕರು ಬೀದಿ ಪಾಲಾದದ್ದು ಮಾತ್ರವಲ್ಲ; ಕೊಡಗಿನ ಪ್ರವಾಸೋದ್ಯಮದ ಮೇಲೂ ಭಾರೀ ಪರಿಣಾಮವನ್ನುಂಟುಮಾಡಿತ್ತು. ನಂತರದ ದಿನಗಳಲ್ಲಿ ಜಿಲ್ಲಾಡಳಿತ ಈ ವಿಷಯಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿ ಹಲವು ಸಭೆ ನಡೆಸಿ ಸ್ಪಷ್ಟ ರೂಪುರೇಷೆಯನ್ನು ನಿಗದಿಪಡಿಸಿತು.

ಈ ವೇಳೆ ಅಂದಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್

(ಮೊದಲ ಪುಟದಿಂದ) ವರಿಷ್ಠಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅಗ್ನಿ ಶಾಮಕದಳ, ಲೋಕೋಪ ಯೋಗಿ ಸೇರಿದಂತೆ ದುಬಾರೆ ರ್ಯಾಫ್ಟಿಂಗ್ ನಿರ್ವಹಣಾ ಸಮಿತಿ ಯೊಂದು ರಚನೆ ಗೊಂಡಿತ್ತು. ಪ್ರಸಕ್ತ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೂಡ ಸಭೆಗಳು ನಡೆದಿತ್ತು.

ಮಾರ್ಗಸೂಚಿ: ಈ ಸಮಿತಿಯು ದುಬಾರೆ ರ್ಯಾಫ್ಟಿಂಗ್ ಅಸೋಸಿ ಯೇಶನ್ ಪ್ರತಿನಿಧಿ ಒಳಗೊಂಡಂತೆ ಸಾಕಷ್ಟು ಚರ್ಚಿಸಿ; ಸ್ವಯಂ ಉದ್ಯೋಗ, ಸ್ಥಳೀಯ ರ್ಯಾಫ್ಟಿಂಗ್ ಮಾಲೀಕರು, ಸಿಬ್ಬಂದಿ, ಪ್ರವಾಸಿಗರ ಸುರಕ್ಷತೆ, ನದಿ ಪಾತ್ರದೊಂದಿಗೆ ಪರಿಸರದ ಉಳಿವು ಸೇರಿದಂತೆ ಒಂದಿಷ್ಟು ನಿಯಮಗಳನ್ನು ರೂಪಿಸಿ, ಸ್ವತಃ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರ್ಯಾಫ್ಟಿಂಗ್ ನಿರ್ವಹಣೆಗೆ ಯೋಜನೆ ರೂಪಿಸಿತ್ತು.

ಇದಾದನಂತರ ನಂಜರಾ ಯಪಟ್ಟಣ ಹಾಗೂ ಗುಡ್ಡೆಹೊಸೂರು ಗ್ರಾ.ಪಂ. ಸಹಿತ ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಜಿಲ್ಲಾಡಳಿತ, ಕಾರವಾರದ ಬಂದರು ಮತ್ತು ಒಳಸಾರಿಗೆ ಇಲಾಖೆ, ಗೋವಾದ ನ್ಯಾಷನಲ್ ರ್ಯಾಫ್ಟಿಂಗ್ ಟ್ರೈನಿಂಗ್ ಸೆಂಟರ್ ಸೇರಿದಂತೆ ಎಲ್ಲೆಡೆ ಅನುಮತಿ ಪಡೆದು ಈ ಚಟುವಟಿಕೆಯನ್ನು ಪುನರಾರಂಭಿಸಲು ಸಂಘದವರು ಮುಂದಾದರಾದರೂ ಹಲವು ಕಾನೂನುಗಳು ಮತ್ತೆ ತೊಡಕಾದವು.

ಒಂದು ಸಂದರ್ಭದಲ್ಲಿ ರಿವರ್ ರ್ಯಾಫ್ಟಿಂಗ್ ಅಸೋಸಿಯೇಷನ್‍ಗೆ ರ್ಯಾಫ್ಟಿಂಗ್ ನಡೆಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿತಾದರೂ, ಸಂಘದ ಸದಸ್ಯರಲ್ಲೇ ಬಾರದ ಒಪ್ಪಂದದಿಂದ ಮತ್ತೆ ದೋಣಿಗಳು ನೆಲದಲ್ಲೇ ಉಳಿದುಕೊಂಡವು. ಹಲವು ತಿಂಗಳ ಬಳಿಕ ಜಿಲ್ಲಾಡಳಿತ ಮತ್ತೆ ಸಭೆ ನಡೆಸಿದ ಸಂದರ್ಭ ಅವಕಾಶಕ್ಕೆ ಅನುಮತಿ ನೀಡಬಾರದೆಂದು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ, 1891ರ ಬ್ರಿಟೀಷ್ ಕಮಿಷನರ್ ಆದೇಶ ಪ್ರಕಾರ ದುಬಾರೆಯು ರಕ್ಷಿತ ಅರಣ್ಯದ ಹದ್ದುಬಸ್ತು ಪ್ರದೇಶವೆಂದೂ, ಕಾವೇರಿ ಹೊಳೆಯ ಕೂಡ ಈ ಸರಹದ್ದಿನಲ್ಲಿ ಹರಿಯುವ ಹಿನ್ನೆಲೆ ಅರಣ್ಯ ಇಲಾಖೆಯ ಅಧೀನವೆಂದು ವಾದಿಸಿತು.ಅಲ್ಲದೆ, ಇಲ್ಲಿ ಖಾಸಗಿ ಯವರಿಗೆ ಯಾವದೇ ಚಟುವಟಿಕೆಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲವೆಂದೂ; ಕಾವೇರಿ ಹೊಳೆಯಲ್ಲಿ ‘ಮಹಶೀರ್ ಮೀನು’ ಗಳಿಗೂ ರ್ಯಾಫ್ಟಿಂಗ್ ನಡೆಸುವದರಿಂದ ತೊಂದರೆಯಾಗಲಿದೆ ಎಂದು ಆಕ್ಷೇಪಣಾ ಪತ್ರದಲ್ಲಿ ಉಲ್ಲೇಖಿಸಿತು. ಈ ಬೆಳವಣಿಗೆಗಳಿಂದ ಜಿಲ್ಲಾಡಳಿತ ರಿವರ್ ರ್ಯಾಫ್ಟಿಂಗ್ ಒಟ್ಟು ಜವಾಬ್ದಾರಿಯನ್ನು ಅರಣ್ಯ ಇಲಾಖೆಯೇ ವಹಿಸಿಕೊಳ್ಳುವಂತೆ ಆದೇಶಿಸಿತು.

ಹಿಂದೆ ಅನುಮತಿಗೆ ಆಕ್ಷೇಪಣೆ ಸಲ್ಲಿಸಿದ್ದ ಅರಣ್ಯ ಇಲಾಖೆಯೇ ಇದೀಗ ರಿವರ್ ರ್ಯಾಫ್ಟಿಂಗ್ ನಡೆಸಲು ಆಸಕ್ತಿಯುಳ್ಳವರಿಂದ ಅರ್ಜಿಗಳನ್ನು ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸಿದ್ದು, ಸಂಘ ಹಾಗೂ ಇಲಾಖೆಯ ನಡುವೆ ಅಸಮಾಧಾನದ ಹೊಗೆ ಮತ್ತೆ ಮೇಲಕ್ಕೆದ್ದಿದೆ.

ಈ ಬಗ್ಗೆ ಅರಣ್ಯ ಉಪ ಸಂರಕ್ಷಣಾಧಿಕಾರಿಯನ್ನು ಸಂಪರ್ಕಿಸಿ ದಾಗ ಸಂಘದವರು ನಮ್ಮ ನಿಯಮಗಳಿಗೆ ಬದ್ಧರಾಗಿಲ್ಲದ್ದರಿಂದ ಅವರಿಗೆ ನಿರಾಕ್ಷೇಪಣಾ ಪತ್ರ ನೀಡಲು ಹಿಂದೇಟು ಹಾಕಿದ್ದುದಾಗಿ ಸ್ಪಷ್ಟಪಡಿಸಿ ದರು. ಆದರೆ ಇದೀಗ ಯಾವ ಸಂಘ ಸಂಸ್ಥೆಗಳು ಇಲಾಖೆಯ ಮಾರ್ಗಸೂಚಿ ಗಳನ್ನು ಅನುಸರಿಸಿ ಮುಂದಕ್ಕೆ ಬರುತ್ತಾರೋ ಅಂತವರ ಅರ್ಜಿ ಗಳನ್ನು ಪರಿಗಣಿಸುವ ದಾಗಿಯೂ ಅವರು ವಿವರಣೆ ಇತ್ತರು.

ಆದರೆ, ರ್ಯಾಫ್ಟಿಂಗ್ ಅಸೋಸಿ ಯೇಷನ್‍ನ ಪದಾಧಿಕಾರಿಗಳ ನೋವೇ ಬೇರೆ ರೀತಿಯದ್ದು. ಅವರ ಹೇಳಿಕೆಯಂತೆ ಸಾಕಷ್ಟು ರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಪರಿಣಿತರಿಂದ ತರಬೇತಿಯನ್ನು ಪಡೆದುಕೊಳ್ಳಲಾಗಿದೆ, ಜೀವರಕ್ಷಕ ಕವಚಗಳನ್ನು ಖರೀದಿಸಲಾಗಿದೆ, ಮುಳುಗು ತಜ್ಞರನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಆಧುನಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ, ಪಂಚಾಯಿತಿ, ಅಗ್ನಿಶಾಮಕ ದಳ ಹಾಗೂ ಸಂಬಂಧಿತ ಇತರ ಇಲಾಖೆಗಳ ಅನುಮತಿಯನ್ನು ಪಡೆದುಕೊಳ್ಳಲಾಗಿದೆ.

ಆದರೆ ಯಾವದೋ ಕಾಲದ ಕಾನೂನನ್ನು ಮುಂದಿಟ್ಟುಕೊಂಡು ನಿರಾಕ್ಷೇಪಣಾ ಪತ್ರ ನೀಡಲು ಹಿಂದೇಟು ಹಾಕುತ್ತಿರುವದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ ತಮ್ಮ ಆರ್ಥಿಕ ಪರಿಸ್ಥಿತಿ ಡೋಲಾಯಮಾನದಲ್ಲಿದೆ. ಜೊತೆಯಲ್ಲಿ ಈ ಉದ್ಯಮವನ್ನು ನಂಬಿದ್ದ ಮಂದಿಯ ಬದುಕು ನಿರ್ಗತಿಕ ಸ್ಥಿತಿಗೆ ಬಂದಿದೆ ಎಂದು ನೊಂದು ನುಡಿಯಾಡುತ್ತಾರೆ.