ವಿ.ಪಿ. ಶಶಿಧರ್

ಕುಶಾಲನಗರ, ಜೂ. 13: ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವದು ಅತ್ಯಂತ ಸ್ವಾಗತಾರ್ಹ ವಿಚಾರವಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ 1ನೇ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಅಗತ್ಯ ಮತ್ತು ಅನಿವಾರ್ಯವಾಗಿದೆ. ನಗರೀಕರಣ ಪ್ರಭಾವದಿಂದ ಮತ್ತು ಖಾಸಗಿ ಶಾಲೆಗಳ ಮೇಲಿನ ಪೋಷಕರ ವ್ಯಾಮೋಹದಿಂದ ಹಲವು ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ನೂತನ ತರಗತಿಯನ್ನು ಉದ್ಘಾಟಿಸಿದ ಕುಶಾಲನಗರ ಪ.ಪಂ. ಸದಸ್ಯ ಜಯವರ್ಧನ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇಂಗ್ಲೀಷ್ ಭಾಷೆ ಬಲ್ಲವರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಮಹತ್ವ ಕಾಣಬಹುದು. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೂಡ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರಕುವದರಿಂದ ಹೆಚ್ಚಿನ ಲಾಭವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್ ವಹಿಸಿದ್ದರು. ಬಾಲಕಿಯರ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪ, ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರಾಣಿ, ಶಿಕ್ಷಕಿ ಕಮಲ, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ ಫಾತಿಮಾ, ರುಬೀನಾ, ಶಿಕ್ಷಕ ವೃಂದ, ಪೋಷಕರು ಇದ್ದರು.