ಚೆಟ್ಟಳ್ಳಿ, ಜೂ. 13: ಕುಶಾಲನಗರ ವ್ಯಾಪ್ತಿಯಲ್ಲಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಮಾದಕ ವಸ್ತುಗಳನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ವಿಪರೀತವಾಗಿ ಗಾಂಜಾ ವ್ಯಸನಿಗಳು ಹೆಚ್ಚುತ್ತಿದ್ದು, ಗಾಂಜಾದ ಅಮಲಿನಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹರೆಯದ ಯುವಕರು ಕೆಲವು ಕಾಲೇಜುಗಳಿಗೆ ಗಾಂಜಾ ಸರಬರಾಜು ಮಾಡುವ ಕೆಲಸಕ್ಕೆ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಜನವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ.

ಒಂದೆಡೆ ಮಾದಕ ವಸ್ತುಗಳಿಗೆ ಯುವಕರು ಬಲಿಯಾಗುತ್ತಿದ್ದರೇ ಮತ್ತೊಂದೆಡೆ ಕಾಲೇಜು ವಿದ್ಯಾರ್ಥಿಗಳು, ಇಪ್ಪತ್ತರ ಹರೆಯದ ಯುವಕರು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವದು ವಿಪರ್ಯಾಸ.

ಅಲ್ಲಲ್ಲಿ ಗುಂಪುಕಟ್ಟಿ ನಿಲ್ಲುವ ಗಾಂಜಾ ವ್ಯಸನಿಗಳು, ತಮ್ಮತಮ್ಮಲ್ಲೇ ಗೊಂದಲ ಗಲಾಟೆ ಗಳನ್ನು ಮಾಡಿಕೊಳ್ಳುವದು, ಸಾರ್ವಜನಿಕರಿಗೆ ಕಿರುಕುಳ ನೀಡುವದು, ಗಾಂಜಾ ಅಮಲಿನಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಾಯಿಸುವ ಮೂಲಕ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜನವಲಯದಲ್ಲಿ ಆಕ್ರೋಶ ವ್ಯಕ್ತಗೊಳ್ಳತೊಡಗಿದೆ. - ಇಸ್ಮಾಯಿಲ್