ಶನಿವಾರಸಂತೆ, ಜೂ. 12: ಪಟ್ಟಣದ ಮುಖ್ಯ ರಸ್ತೆಯಿಂದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಗೆ ಹೋಗುವ ಕಾನ್ವೆಂಟ್ ರಸ್ತೆ ನಾಲ್ಕೈದು ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟಿದೆ.

ರಸ್ತೆಯುದ್ದಕ್ಕೂ ಹಳ್ಳ, ಗುಂಡಿಗಳಾಗಿದ್ದು, ಮಳೆ ಬಂದಾಗ ನೀರು ನಿಂತು ರಸ್ತೆಯಲ್ಲಿ ತಿರುಗಾಡುವ ವಿದ್ಯಾರ್ಥಿಗಳು, ಜನರ ಮೇಲೆ ಕೆಸರಿನ ಅಭಿಷೇಕ ವಾಗುತ್ತದೆ. ರಸ್ತೆಯ ಎರಡೂ ಬದಿ ಗಳಲ್ಲಿ 100 ಮನೆಗಳಿವೆ.

ವಿದ್ಯಾಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದು, ಇದೇ ರಸ್ತೆಯಲ್ಲಿ ತಿರುಗಾಡಬೇಕು. ವಿದ್ಯಾಸಂಸ್ಥೆಯ 5 ಬಸ್‍ಗಳು ಸೇರಿದಂತೆ ಸುಮಾರು 500 ಕ್ಕೂ ವಿವಿಧ ವಾಹನಗಳು ನಿತ್ಯ ಸಂಚರಿಸುತ್ತವೆ.

ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.