ಸೋಮವಾರಪೇಟೆ, ಜೂ. 11: ಕನ್ನಡ ಸಾಹಿತ್ಯ ಪರಿಷತ್ನಿಂದ ಶಾಂತಳ್ಳಿಯಲ್ಲಿ ಆಯೋಜಿಸಲಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದ ವಿಚಾರಗೋಷ್ಠಿ ಕನ್ನಡ ಸಂಸ್ಕøತಿ, ಆಚಾರ ವಿಚಾರ, ಭಾಷಾ ಬೆಳವಣಿಗೆ, ಶಿಕ್ಷಣ, ನಾಗರಿಕರ ಸೇವೆ ಮುಂತಾದ ವಿಷಯಗಳ ಬಗ್ಗೆ ಚಿಂತನೆ ಹೆಚ್ಚುವಂತೆ ಮಾಡಿತು.
ಪ್ರಸ್ತುತ ಜೀವನ ಶೈಲಿಯಲ್ಲಿ ಮರೆಯಾಗುತ್ತಿರುವ ಸಂಸ್ಕøತಿ, ಸಂಪ್ರದಾಯ, ಹಬ್ಬಹರಿದಿನಗಳ ಸೊಗಡಿನ ಉಳಿವಿಗಾಗಿ ಮಹಿಳೆಯರ ಪಾತ್ರ ವಿಷಯದ ಬಗ್ಗೆ ಆಲೂರು-ಸಿದ್ದಾಪುರ ಮೊರಾರ್ಜಿ ವಸತಿ ಶಾಲಾ ಪ್ರಾಂಶುಪಾಲೆ ಭಾರತಿ ಅವರು ವಿಚಾರ ಮಂಡಿಸಿದರು.
ಅನಾದಿಕಾಲದಿಂದಲೂ ಮಹಿಳೆ ಸಂಸ್ಕøತಿಯ ರಕ್ಷಕಳಾಗಿದ್ದಾಳೆ. ಹೆಣ್ಣು ಮಗು ಎಂಬದು ಸಂಸ್ಕøತಿಯ ಬೆಳಕಾಗಿದೆ. ನಮ್ಮ ಹಬ್ಬ ಹರಿದಿನಗಳಿಗೆ ಮಹತ್ವವಿದ್ದು, ಅದನ್ನು ಅರಿತುಕೊಂಡು ಆಚರಿಸಬೇಕು. ತಾಯಂದಿರು ದೇಶ ಭಕ್ತಿಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು ಎಂದರು.
ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕರ ಕರ್ತವ್ಯ ಮತ್ತು ಸೇವೆ ವಿಷಯದ ಬಗ್ಗೆ ಅಂಕಣಕಾರ ಕಿರಣ್ಕುಮಾರ್ ವಿಷಯ ಮಂಡಿಸಿದರು. ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಗಿಡ ನೆಡುವದರ ಜತೆಗೆ ಪೋಷಣೆ ಮಾಡಬೇಕು. ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಬೇಕು. ಮಾನವ- ಪರಿಸರ ನಡುವಿನ ಸಂಘರ್ಷ ಬಿಗಡಾಯಿಸದಂತೆ ಎಚ್ಚರ ವಹಿಸಬೇಕು. ಅರಣ್ಯದಲ್ಲಿ ಮಾನವನ ಹಸ್ತಕ್ಷೇಪ ನಿಲ್ಲಿಸಬೇಕು. ಪ್ರಾಕೃತಿಕ ವಿಕೋಪ ಸಂದರ್ಭ ಆಡಳಿತ ಯಂತ್ರದೊಂದಿಗೆ ಸಂಪರ್ಕ ಸಾಧಿಸಿ, ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ವಿಚಾರಗೋಷ್ಠಿಯ ಅಧ್ಯಕ್ಷತೆ ಯನ್ನು ಹಿರಿಯ ಸಾಹಿತಿ ಊ.ರ. ನಾಗೇಶ್ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಪದಾಧಿಕಾರಿಗಳಾದ ನ.ಲ. ವಿಜಯ, ಅನಿತಾ ಶುಭಾಕರ್ ಉಪಸ್ಥಿತರಿದ್ದರು.
ಗೀತಗಾಯನ: ಸಮ್ಮೇಳನದಲ್ಲಿ ಆಯೋಜನೆಗೊಂಡಿದ್ದ ಗೀತಗಾಯನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಗಾಯಕರುಗಳಾಗಿ ದೀಪಿಕ ಸುದರ್ಶನ್, ಶ್ರೀಲಕ್ಷ್ಮೀ, ವಿದ್ಯಾಲಕ್ಷ್ಮೀ, ಕೆ.ಎಸ್. ಸುದೀಕ್ಷ, ವಿಜಯಕುಮಾರ್, ವಿಜಯ್ ಅವರುಗಳು ತಮ್ಮ ಕಂಠದಿಂದ ಶುಶ್ರಾವ್ಯವಾಗಿ ಗೀತೆಗಳನ್ನು ಪ್ರಸ್ತುತಪಡಿಸಿದರು.