ಸೋಮವಾರಪೇಟೆ, ಜೂ. 11: ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲೆ ಮತ್ತು ತಾಲೂಕು ಘಟಕದ ವತಿಯಿಂದ ಶಾಂತಳ್ಳಿ ಶ್ರೀಕುಮಾರ ಲಿಂಗೇಶ್ವರ ದೇವಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗಳಿಂದ ಮೂಡಿಬಂದ ಕವಿಗೋಷ್ಠಿ, ಕವಿಯಾಂತರಾಳದ ಸಂವೇದನೆಗಳಿಗೆ ಅಕ್ಷರದ ರೂಪ ಕೊಟ್ಟು ಸಾಹಿತ್ಯಾ ಸಕ್ತರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಲೇಖಕಿ ಶ.ಗ. ನಯನತಾರಾ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸ ಲಾಗಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳು, ನೆಲ, ಜಲ, ಭಾಷೆ, ರೈತ, ಪರಿಸರ, ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದಂತೆ ತಮ್ಮ ಭಾವನೆಗಳಿಗೆ ಅಕ್ಷರದ ರೂಪಕೊಟ್ಟು ಸಭಿಕರ ಎದುರು ಪ್ರಸ್ತುತಪಡಿಸಿದರು.

ಹಿರಿಯ ಕವಿಗಳಾದ ಹೆಚ್.ಬಿ. ಜಯಮ್ಮ ಅವರು ‘ಬಾಣ ಹೂಡುವವರು’ ಎಂಬ ಕವನದಲ್ಲಿ ರಾಮಾಯಣದ ಪ್ರಸಂಗಗಳನ್ನು ಎದುರಿಗೆ ತಂದರು. ಎಲ್.ಎಂ. ಪ್ರೇಮ ಅವರು ‘ಚಾಯ್‍ವಾಲ’ ಕವನದಲ್ಲಿ ಬಡ ಟೀ ವ್ಯಾಪಾರಿ ತನ್ನ ಸಾಮಥ್ರ್ಯದಿಂದ ಬೆಳೆದು ಯಶಸ್ಸು ಸಾಧಿಸುವ ಬಗ್ಗೆ ಬೆಳಕು ಚೆಲ್ಲಿದರು. ‘ನಾನು ಕವಿಯಾಗಬೇಕು’ ಎಂಬ ಶೀರ್ಷಿಕೆಯ ಕವನ ವಾಚಿಸಿದ ಕೆ.ಪಿ. ಪುಟ್ಟಣ್ಣ ಆಚಾರ್ಯ ಅವರು ಕನ್ನಡ ನಾಡು ನುಡಿಯ ಸಂರಕ್ಷಣೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ರಾಧಿಕಾ ಕಾಳಪ್ಪ ಅವರು ‘ಅನ್ನದಾತ’ ಕವನದಲ್ಲಿ ರೈತರ ಬದುಕು ಬವಣೆಗಳನ್ನು ಕಣ್ಣೆದುರು ಕಟ್ಟಿಕೊಟ್ಟರು. ಸುಶೀಲ ಹಾನಗಲ್ಲು ಅವರು ‘ಮರಗಿಡ ಕಡಿಯಬೇಡಿ’ ಎಂಬ ಕವನದಲ್ಲಿ ಪ್ರಕೃತಿ ರಕ್ಷಣೆಯ ಬಗ್ಗೆ ಕಾಳಜಿ ತೋರಿಸಿದರು. ಶಿವಕುಮಾರ್ ತೊರೆನೂರು ಅವರು ತಮ್ಮ ಕವನ ‘ಕರಿಯೇ ಹರಿ’ಯಲ್ಲಿ ರೈತರ ಬದುಕು,ಸಂಕಷ್ಟದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ಕವಿತ ಅವರು ‘ನಾನು’ ಎಂಬ ಕವನದಲ್ಲಿ ಮನುಷ್ಯನ ಅಹಂ ಬಗ್ಗೆ ಮನೋಜ್ಞ ಪದಗಳ ಮೂಲಕ ವಿವರಿಸುವ ಪ್ರಯತ್ನ ನಡೆಸಿದರು. ಎಲಿಜಬೆತ್ ಲೋಬೋ ಅವರು ತಮ್ಮ ಕವನದಲ್ಲಿ ಕಳೆದ ಸಾಲಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ, ನಂತರ ಎದುರಾದ ಸಂಕಷ್ಟಗಳನ್ನು ಅಕ್ಷರಗಳಲ್ಲಿ ತೆರೆದಿಟ್ಟರು. ಪ್ರಕೃತಿ ರಮಣೀಯ ಸೌಂದರ್ಯ ಹೊಂದಿರುವ ಶಾಂತಳ್ಳಿಯ ಸೊಬಗನ್ನು ಕವಿ ಕೆ.ಪಿ. ಸುದರ್ಶನ್ ಅವರು ‘ಶಾಂತಳ್ಳಿಯ ಮಹಾತ್ಮೆ’ ಕವನದಲ್ಲಿ ಪ್ರಸ್ತುತಪಡಿಸಿದರು. ಹಿರಿಯ ಕವಿಗಳಾದ ನ.ಲ. ವಿಜಯ ಅವರು ಸೋಮವಾರಪೇಟೆ ಪಟ್ಟಣದಲ್ಲಿರುವ ಸಂಪಿಗೆ ಕಟ್ಟೆಯ ಮರ ಮಾತನಾಡಿದರೆ ಹೇಗಿರುತ್ತದೆ ಎಂಬದನ್ನು ತಮ್ಮ ‘ನಮ್ಮೂರಿನ ಸಂಪಿಗೆ ಮರ ಸಂವೇದನೆಯಲ್ಲಿ ಮಾತನಾಡಿದಾಗ’ ಎಂಬ ಕವನದಲ್ಲಿ ಮನೋಜ್ಞವಾಗಿ ಬಿಂಬಿಸಿದರು. ನಂದನ ಮಧುಸೂಧನ್ ಅವರು ‘ಮರಗಿಡ ಕಡಿಯದಿರಿ’ ಎಂದು ಪ್ರಕೃತಿ ಸಂರಕ್ಷಣೆಯ ಬಗ್ಗೆ ಸಭಿಕರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಕಸಾಪ ಜಿಲ್ಲಾ ನಿರ್ದೇಶಕ ನಾಗರಾಜಶೆಟ್ಟಿ, ತಿಲೋತ್ತಮೆ ನಂದಕುಮಾರ್, ರಾಣಿ ರವೀಂದ್ರ, ಗ್ರಾ.ಪಂ. ಸದಸ್ಯೆ ರೇಖಾ ತಿಮ್ಮಯ್ಯ ಉಪಸ್ಥಿತರಿದ್ದರು. ದೀಪಿಕ ಸುದರ್ಶನ್, ಎಂ.ಎ. ರುಬೀನಾ, ರಾಚುಶ್ಯಾಂ ಅವರುಗಳು ಕವಿಗೋಷ್ಠಿ ನಿರ್ವಹಿಸಿದರು.