ಮಡಿಕೇರಿ, ಜೂ. 12 : ಪ್ರಕೃತಿ ವಿಕೋಪ ಸಂಭವಿಸಿ 1 ವರ್ಷ ಕಳೆಯುತ್ತಿದ್ದರೂ ಇನ್ನೂ ಸಂತ್ರಸ್ತರಿಗೆ ಮನೆ, ಆಸ್ತಿ ನೀಡದಿರುವದು ಮಾನವೀಯ ಧರ್ಮವಲ್ಲ ಎಂದು ಕಿಡಿಕಾರಿರುವ ಸಂಸತ್ ಶೋಭಾ ಕರಂದ್ಲಾಜೆ, ಈ ಬಗ್ಗೆ ಮುಖ್ಮಮಂತ್ರಿಗಳ ಗಮನ ಸೆಳೆಯಲು ಶೀಘ್ರದಲ್ಲಿಯೇ ನಿಯೋಗ ತೆರಳುವದಾಗಿ ಘೋಷಿಸಿದ್ದಾರೆ.
ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದರೊಂದಿಗಿನ ಮಹತ್ವದ ಸಭೆಯನ್ನು ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿನ ಪ್ಲಾಂಟರ್ಸ್ ಕ್ಲಬ್ನಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಆಯೋಜಿಸಲಾಗಿತ್ತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಕೊಡಗಿನ ದುರಂತಕ್ಕೆ ಕೋಟಿಗಟ್ಟಲೆ ಹಣ ನೆರವಿನ ರೂಪದಲ್ಲಿ ಲಭಿಸಿದ್ದರೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕೋಟಿ ಕೋಟಿ ಹಣ ಲಭಿಸಿದ್ದರೂ ಸರ್ಕಾರ ಕೊಡಗಿನ ಸಂತ್ರಸ್ತರಿಗೆ ಹೆಕ್ಟೇರ್ಗೆ ಕೇವಲ ರೂ. 36 ಸಾವಿರ ಪರಿಹಾರ ನೀಡುತ್ತಿರುವದು ಖಂಡಿತಾ ಮಾನವೀಯತೆಯಲ್ಲ ಎಂದು ಆಕ್ಷೇಪಿಸಿದರು.
ಕಾಫಿ ಬೆಳೆಗಾರರೊಂದಿಗೆ ಕಾಫಿ ಜಿಲ್ಲೆಗಳ ಸಂಸದರು ಸದಾ ಇರುತ್ತೇವೆ ಎಂದು ಭರವಸೆ ನೀಡಿದ ಅವರು, ಕಾಳುಮೆಣಸಿಗೆ ಕನಿಷ್ಟ ರೂ. 375 ಬೆಲೆ ದೊರಕಬೇಕಾದರೆ ರಾಜ್ಯ ಸರ್ಕಾರ ತನ್ನ ಆರ್.ಎಂ.ಸಿ. ತೆರಿಗೆಯನ್ನು ಹಿಂಪಡೆಯಲಿ ಎಂದು ಸಲಹೆ ನೀಡಿದರು. ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲದ ಎಪಿಎಂಸಿ, ಆರ್.ಎಂ.ಸಿ ತೆರಿಗೆಯನ್ನು ರಾಜ್ಯ ಸರ್ಕಾರ ವಿಧಿಸಿದ್ದು ಮುಖ್ಯ ಮಂತ್ರಿಗಳಿಗೆ ಈ ಬಗ್ಗೆಯೂ ಮನವರಿಕೆ ಮಾಡಿಕೊಟ್ಟು ಬೆಳೆಗಾರರಿಗೆ ಪ್ರಯೋಜನ ಕಲ್ಪಿಸಲಾಗುತ್ತದೆ ಎಂದು ಸಂಸದೆ ಹೇಳಿದರು. ಭಾರತಕ್ಕೆ ಕಳ್ಳ ಮಾರ್ಗದಿಂದ ಬರುತ್ತಿರುವ ಕಾಳುಮೆಣಸಿನ ಆಮದನ್ನು ತಡೆಗಟ್ಟಲು ಇದೇ 17 ರಿಂದ ಪ್ರಾರಂಭವಾಗುವ
(ಮೊದಲ ಪುಟದಿಂದ) ಲೋಕಸಭಾ ಅಧಿವೇಶನÀದಲ್ಲಿ ಗಮನ ಸೆಳೆಯಲಾಗುತ್ತದೆ ಎಂದು ಅವರು ಭರವಸೆ ನೀಡಿದರು. ಕಾಫಿ ಮಂಡಳಿಯಲ್ಲಿ ಈಗಿರುವ ಕಾರ್ಯದರ್ಶಿ ಇರುವಷ್ಟು ದಿನಗಳು ಮಂಡಳಿ ಉದ್ದಾರವಾಗದು ಎಂದು ಶೋಭಾಕರಂದ್ಲಾಜೆ ಕಾರ್ಯದರ್ಶಿ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು. ಚುನಾವಣೆ ಮುಗಿದಾಕ್ಷಣ ಪಕ್ಷ ರಾಜಕೀಯ ಮುಕ್ತಾಯವಾಗಿದೆ. ಹೀಗಾಗಿ ಕಾಫಿ ಜಿಲ್ಲೆಗಳ ಸಂಸದರು ಒಗ್ಗಟ್ಟಾಗಿ ಕಾಫಿ ಉದ್ಯಮದ ಸಂಕಷ್ಟ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಶೋಭಾ ಕರಂದ್ಲಾಜೆ ಭರವಸೆ ನೀಡಿದರು. ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೊಡಗಿನಲ್ಲಿ ಜಲಪ್ರಳಯದಿಂದಾಗಿ ಆಸ್ತಿ ಕಳೆದುಕೊಂಡವರಿಗೆ ರಾಜ್ಯದ ಮುಖ್ಯಮಂತ್ರಿಗಳು ತಮ್ಮಲ್ಲಿರುವ 98 ಕೋಟಿ ರೂ.ಗಳನ್ನು ವಿಳಂಬರಹಿತವಾಗಿ ವಿವೇಚನಾ ಕೋಟದಡಿ ಬಿಡುಗಡೆಗೊಳಿಸಬೇಕು; ಕೇಂದ್ರ ಸರ್ಕಾರ ಕೊಡಗಿನ ಸಂತ್ರಸ್ತರಿಗೆ ಎಲ್ಲಾ ರೀತಿಯ ಆರ್ಥಿಕ ನೆರವನ್ನು ನೀಡಿದ್ದು ರಾಜ್ಯ ಸರ್ಕಾರ ಮಾತ್ರ ವಿಳಂಬ ಧೋರಣೆ ತಳೆದಿದೆ ಎಂದು ಟೀಕಿಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಬೇಕೆಂದೂ ಪ್ರತಾಪ್ ಸಿಂಹ ಸಲಹೆ ನೀಡಿದರು. ಸುಂಟಿಕೊಪ್ಪದಿಂದ ಜೋಡುಪಾಲದವರೆಗಿನ ಹೆದ್ದಾರಿ ದುರಸ್ತ ಕಾರ್ಯ ಕೂಡ ಕೇಂದ್ರ ಸರ್ಕಾರದಿಂದಲೇ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನೇಪಾಳದಿಂದ ಭಾರತಕ್ಕೆ ಆಮದಾಗುತ್ತಿರುವ ಕಾಳುಮೆಣಸು ತಡೆಗೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ , ಈ ಮೂಲಕ ಕಾಳುಮೆಣಸು ದರ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದ ಪ್ರತಾಪ್ ಸಿಂಹ, ಕಳೆದ 5 ವರ್ಷಗಳಲ್ಲಿ ಕರ್ನಾಟಕದ ಕಾಫಿ ಜಿಲ್ಲೆಗಳಿಗೆ ಕಸ್ತೂರಿರಂಗನ್ ವರದಿಯಿಂದ ಯಾವದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕೂಡ ಕಸ್ತೂರಿರಂಗನ್ ವರದಿಯಿಂದ ಸಮಸ್ಯೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದರು. ಕಾಫಿ ಮಂಡಳಿಗೆ ಬೆಳೆಗಾರರ ಬೇಡಿಕೆಯಂತೆ ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿಸಲಾಗಿದೆಯಾದರೂ ಆ ಅಧ್ಯಕ್ಷರಿಗೆ ದೊರಕಬೇಕಾದ ಅಧಿಕಾರ, ಕೆಲವು ಅಧಿಕಾರಿಗಳ ಲಾಭಿಯಿಂದಾಗಿ ಇನ್ನೂ ದೊರಕಿಲ್ಲ. ಇದೀಗ ಎಲ್ಲಾ ಸಂಸದರು ಈ ನಿಟ್ಟಿನಲ್ಲಿ ಗಮನ ಹರಿಸಿ ಕಾಫಿ ಮಂಡಳಿ ಅಧ್ಯಕ್ಷರಿಗೆ ಸೂಕ್ತ ಅಧಿಕಾರ ದೊರಕಿಸುತ್ತೇವೆ ಎಂದೂ ಪ್ರತಾಪ್ ಸಿಂಹ ಹೇಳಿದರು.
ಕಾಫಿ ಬೆಳೆಗಾರರೂ ಆಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನಾನೂ ಬೆಳೆಗಾರನ ಮಗನಾಗಿ ಕಾಫಿ ಸಮಸ್ಯೆಯನ್ನು ಚೆನ್ನಾಗಿ ತಿಳಿದಿರುವೆ. ಹೀಗಾಗಿ ಕಾಫಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರದೊಂದಿಗೆ ವ್ಯವಹರಿಸುವೆ. ಸಂಸತ್ತಿನಲ್ಲೂ ಸಮಸ್ಯೆಯ ಬಗ್ಗೆ ಪ್ರಾಮಾಣಿಕವಾಗಿ ಚರ್ಚಿಸುವೆ ಎಂದು ಹೇಳಿದರು. ಕಾಳುಮೆಣಸಿನ ಸಮಸ್ಯೆಯನ್ನು ಕೂಡಲೇ ಪರಿಹರಿಸದೇ ಹೋದಲ್ಲಿ ಕಾಫಿ ಬೆಳೆ ಕುಸಿತದಿಂದಾಗಿ ಕಂಗೆಟ್ಟಿರುವ ಬೆಳೆಗಾರ ಕಾಳುಮೆಣಸಿನ ಮೇಲೂ ಭರವಸೆ ಕಳೆದುಕೊಂಡು ಮತ್ತಷ್ಟು ಅತಂತ್ರ ಸ್ಥಿತಿ ತಲಪುತ್ತಾನೆ. ಹೀಗಾಗದಂತೆ ಕಾಫಿ ಜಿಲ್ಲೆಗಳ ಸಂಸದರು ಗಮನಹರಿಸುತ್ತೇವೆ ಎಂದು ಭರವಸೆ ನುಡಿಯಾಡಿದರು.
ಕೃಷಿ ಇಲಾಖೆಯಿಂದ ಯಾವೆಲ್ಲಾ ಸೌಲಭ್ಯಗಳು, ಸವಲತ್ತುಗಳು ಕೃಷಿಕರಿಗೆ ದೊರಕುತ್ತಿವೆಯೋ ಆ ಎಲ್ಲಾ ಸೌಲಭ್ಯಗಳೂ ಕಾಫಿ ಬೆಳೆಗಾರರಿಗೂ ದೊರಕುವಂತಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ವ್ಯವಹರಿಸುವದಾಗಿಯೂ ತೇಜಸ್ವಿ ಸೂರ್ಯ ಹೇಳಿದರು. ಕಾಫಿ ಬೆಳೆಗಾರ ಎಂದರೆ ಶ್ರೀಮಂತರು ಎಂಬ ಪೂರ್ವಗ್ರಹಪೀಡಿತ ಭಾವನೆ ದೂರವಾಗಿ ಕಾಫಿ ಕೃಷಿಕರ ನೈಜ ಸಮಸ್ಯೆ ಸರ್ಕಾರಕ್ಕೆ ತಲುಪಿಸಲ ಸಂಸದರಾಗಿ ತಾವೆಲ್ಲಾ ಬದ್ಧರಾಗಿರುವದಾಗಿ ತೇಜಸ್ವಿ ಸೂರ್ಯ ಭರವಸೆ ನೀಡಿದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಭಾರತಕ್ಕೆ 41 ಸಾವಿರ ಕೋಟಿ ರೂ. ಆದಾಯ ನೀಡಿರುವ ಕಾಫಿ ಬೆಳೆಗಾರರಿಗೆ ಸೇರಿದ 8 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುವದು ಸರ್ಕಾರದ ಕರ್ತವ್ಯವಾಗಬೇಕು. ಕಾಫಿ ಬೆಳೆಗಾರರಿಗೆ ಈ ಮೂಲಕ ನೈಜ ನ್ಯಾಯ ದೊರಕಿಸಬೇಕು ಎಂದು ಅಭಿಪ್ರಾಯಪಟ್ಟರು. ಕಾಫಿ ಬೆಳೆಗಾರರೊಂದಿಗೆ ಕಾಫಿ ಕಾರ್ಮಿಕರಿಗೂ ಆರ್ಥಿಕ ಶಕ್ತಿ ನೀಡುವ ನಿಟ್ಟಿನಲ್ಲಿ ರಾಜ್ಯದ ಕಾಫಿ ಜಿಲ್ಲೆಗಳ ಸಂಸದರು ಮುಂದಿನ ದಿನಗಳಲ್ಲಿ ರಾಜಕೀಯ ಬೇಧವಿಲ್ಲದೇ ಕೈಜೋಡಿಸುತ್ತಾರೆ ಎಂದು ಭರವಸೆ ನೀಡಿದರು.
ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡರು ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರೆ ಕಾಫಿ ಸಮಸ್ಯೆಯನ್ನು ಪರಿಹರಿಸಲು ಮತ್ತಷ್ಟು ಬಲ ಬರುತ್ತಿತ್ತು ಎಂದು ಸ್ಮರಿಸಿಕೊಂಡ ಪ್ರಜ್ವಲ್, ಮಹಿಳಾ ಸಂಸದರಾಗಿರುವ ಶೋಭಾಕರಂದ್ಲಾಜೆ ಈಗ ಕಾಫಿ ಹೋರಾಟದ ನೇತೃತ್ವ ವಹಿಸುವಂತಾಗಲಿ ಎಂದರಲ್ಲದೇ, ಲೋಕಸಭೆಯಲ್ಲಿ ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಖಂಡಿತಾ ಪ್ರಶ್ನೆ ಕೇಳುವೆ ಎಂದು ಭರವಸೆ ನುಡಿಯಾಡಿದರು. ಕಾಫಿ ಬೆಳೆಗಾರರಿಗೆ ಕಿಂಚಿತ್ತೂ ನೋವುಂಟಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇನ್ನು ಮುಂದೆ ರಾಜ್ಯದ ಕಾಫಿ ಜಿಲ್ಲೆಗಳ ಸಂಸದರದ್ದು ಎಂದೂ ಪ್ರಜ್ವಲ್ ರೇವಣ್ಣ ಹೇಳಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ಮಾತನಾಡಿ, ಮಂಡಳಿ ಕಾರ್ಯದರ್ಶಿ ಮಂಡಳಿಯಲ್ಲಿ ದಬ್ಬಾಳಿಕೆ ನಡೆಸುತ್ತಿದ್ದು, ಕೂಡಲೇ ಈ ಕಾರ್ಯದರ್ಶಿಯನ್ನು ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್ ಕಾಫಿ ಉದ್ಯಮದ ಸಮಸ್ಯೆಗಳ ಬಗ್ಗೆ ಮಾತನಾಡಿ, ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಸಾಲವನ್ನು ಕೇಂದ್ರ ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು. ಈ ಮೂಲಕ ಕಾಫಿ ಬೆಳೆಗಾರರನ್ನು ಸಾಲಗಾರ ಮುಕ್ತರನ್ನಾಗಿಸಬೇಕು ಎಂದೂ ಆಗ್ರಹಿಸಿದರು.
ಪ್ರಕೃತಿ ವಿಕೋಪದಿಂದ ಅಪಾರ ಕೃಷಿ ಜಮೀನು ಕಳೆದುಕೊಂಡ ಕೊಡಗಿನ ಕಾಫಿ ತೋಟ ಮಾಲೀಕರಿಗೆ ಕಾಫಿ ಮಂಡಳಿ ಇದೀಗ ಸಲ್ಲಿಸಿರುವ ಪ್ರಸ್ತಾವನೆಯಂತೆ ಹಾನಿಗೊಳಗಾದ ಕಾಫಿ ಕೃಷಿ ಜಮೀನಿಗೆ ಹೆಕ್ಟೇರ್ ಗೆ ಕನಿಷ್ಟ 18 ಲಕ್ಷ ರೂ. ಪರಿಹಾರ ನೀಡುವಂತಾಗಬೇಕು. ಸಂಸದರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದೂ ತೀರ್ಥಮಲ್ಲೇಶ್ ಕೊಡಗಿನ ಸಂತ್ರಸ್ತ ಭೂಮಾಲೀಕರ ಪರವಾಗಿ ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಯಾವದೇ ಪ್ರಗತಿ ಯೋಜನೆ ಜಾರಿ ಸಂದರ್ಭ ಕಾಫಿ ಕೃಷಿಗೆ ಧಕ್ಕೆಯಾಗದಂತೆ ಗಮನ ಹರಿಸಬೇಕು. ಕಾಫಿ ಬೆಳೆಗಾರರು ಅಬಿವೃದ್ಧಿಗೆ ವಿರೋಧಿಗಳಲ್ಲ. ಆದರೆ, ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಕಾಫಿ ಸೇರಿದಂತೆ ನಿಸರ್ಗಕ್ಕೆ ಧಕ್ಕೆ ಉಂಟು ಮಾಡದ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕಾಫಿ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಕಾಫಿ ಬೆಳೆಗಾರ ಜಿಲ್ಲೆಗಳ ಸಂಸದರು ವ್ಯವಹರಿಸಬೇಕು. ವಿದೇಶಗಳಿಂದ ಕಳಪೆ ಗುಣಮಟ್ಟದ ಕಾಫಿಯನ್ನು ಭಾರತಕ್ಕೆ ಬಾರದಂತೆ ತಡೆದು ಭಾರತದ ಕಾಫಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕೆಂದು ಒತ್ತಾಯಿಸಿದರು.
ಕಳಪೆ ಕಾಳುಮೆಣಸು ಭಾರತಕ್ಕೆ ಬರುವ ಸಂದರ್ಭ ಇದನ್ನು ತಡೆಯಲು ಬೆಳೆಗಾರರ ಒಕ್ಕೂಟ ಕೈಗೊಂಡ ಹೋರಾಟಕ್ಕೆ ಕಾಫಿ ಬೆಳೆಗಾರ ಜಿಲ್ಲೆಗಳ ಸಂಸದರು ಕೈಜೋಡಿಸಿದ್ದು ಹೋರಾಟಕ್ಕೆ ಹೆಚ್ಚಿನ ಬಲ ತಂದಿತ್ತು ಎಂದು ತೀರ್ಥಮಲ್ಲೇಶ್ ಸ್ಮರಿಸಿದರು. ನೇಪಾಳ ಗಡಿಯಿಂದ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿರುವದನ್ನು ತಡೆದದ್ದೇ ಆದಲ್ಲಿ ಕಾಳುಮೆಣಸು ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದು ತೀರ್ಥಮಲ್ಲೇಶ್ ಹೇಳಿದರು.
ಕಾಫಿ ಬೆಳೆ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಫಿ ತೋಟಗಳಿಂದ ಅರಣ್ಯಕ್ಕಟ್ಟಬೇಕು. ಕಾಫಿ ಕೃಷಿ ಪ್ರದೇಶಕ್ಕೆ ಕಾಡಾನೆಗಳು ಬಾರದಂತೆ ತಡೆಗಟ್ಟಲು 450 ಕಿ.ಮೀ. ಅಂದಾಜು ವ್ಯಾಪ್ತಿಯಲ್ಲಿ ಕಾಡಾನೆ ತಡೆಗೆ ರೈಲ್ವೇ ಹಳಿ ತಡೆಬೇಲಿ ನಿರ್ಮಿಸಬೇಕು.ಕಾಡಾನೆ ಧಾಳಿಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಆಸ್ತಿ ನಷ್ಟಕ್ಕೆ ನೈಜ ಮೌಲ್ಯ ನೀಡಬೇಕು ಎಂದು ತೀರ್ಥಮಲ್ಲೇಶ್ ಕಾಫಿ ಬೆಳೆಗಾರರ ಪರವಾಗಿ ಸಂಸದರನ್ನು ಒತ್ತಾಯಿಸಿದರು. ಕಾಫಿ ಬೆಳೆಗಾರರ ಜೀವನಕ್ಕೆ ಧಕ್ಕೆಯಾಗುವಂಥ ಕಸ್ತೂರಿರಂಗನ್ ವರದಿಯನ್ನು ಯಾವದೇ ಕಾರಣಕ್ಕೂ ಕಾಫಿ ಜಿಲ್ಲೆಗಳಲ್ಲಿ ಜಾರಿಗೊಳಿಸಲು ಕಾಫಿ ಜಿಲ್ಲೆಗಳಿಗೆ ಸೇರಿದ ಸಂಸದರು ಅವಕಾಶ ನೀಡಬಾರದು ಎಂದು ಸಂಸದರಿಗೆ ತೀರ್ಥಮಲ್ಲೇಶ್ ಒತ್ತಾಯಿಸಿದರು.
ಕಾಫಿ ಉದ್ಯಮವು ಹಲವಾರು ವರ್ಷಗಳಿಂದ ಬೆಲೆ ಇಳಿಕೆ. ಹವಾಮಾನ ವೈಪರಿತ್ಯ, ಕಾರ್ಮಿಕರ ಭವಣೆ, ವನ್ಯಜೀವಿಗಳ ಉಪಟಳ, ಬ್ಯಾಂಕ್ ಗಳ ಕಾಟ, ಬೆಳೆವಿಮೆ, ಭೂ ಒತ್ತುವರಿ ಸಮಸ್ಯೆಗಳಿಂದ ನಲುಗುತ್ತಿದೆ. 10 ವರ್ಷಗಳಿಂದ ಕಾಫಿ ಬೆಲೆಯಲ್ಲಿ ಯಾವದೇ ಬದಲಾವಣೆಯಾಗದೇ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಾರ್ಮಿಕರ ವೇತನ, ರಸಗೊಬ್ಬರ ಮತ್ತು ಯಂತ್ರೋಪಕರಣಗಳ ಬೆಲೆ ಹೆಚ್ಚಾಗುತ್ತಲೇ ಇದೆ. ಕಾಫಿಯ ಉಪಬೆಳೆಯಾದ ಕಾಳುಮೆಣಸು ಆಮದಿನಿಂದಾಗಿ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಇಂಥ ಹಲವಾರು ಸಂಕಷ್ಟದಲ್ಲಿ ಕಾಫಿ ತೋಟ ನಿರ್ವಹಿಸಲಾಗದ ಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ. ಈ ಸಮಸ್ಯೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೂ ಆದಾಯ ಕಡಿಮೆಯಾಗುತ್ತಿದೆ. ಇಂಥ ಸಮಸ್ಯೆಗಳ ಬಗ್ಗೆ ಸಂಸದರು ಕೇಂದ್ರ ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಂತೆಯೂ ತೀರ್ಥಮಲ್ಲೇಶ್ ಕರ್ನಾಟಕ ಬೆಳೆಗಾರರ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಿದರು. ಶಶಿರೇಖ ಪ್ರಾರ್ಥಿಸಿ, ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚ. ಅನಂತಸುಬ್ಬರಾವ್ ಸ್ವಾಗತಿಸಿದರು.
ಸಭೆಯಲ್ಲಿ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್, ವಿಧಾನಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್, ಗೋಪಾಲಸ್ವಾಮಿ, ಮಾಜಿ ಸಂಸದ ಎಚ್.ಎಂ.ವಿಶ್ವನಾಥ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಜಯರಾಂ, ಅತ್ತಿಕಟ್ಟೆ ಜಗನ್ನಾಥ್, ಸುಬ್ಬೇಗೌಡ, ಉಪಾಸಿಯ ಉಪಾಧ್ಯಕ್ಷ ಜೆಫ್ತಿ ರೆಬಿಲ್ , ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿರಿಷ್ ವಿಜೇಂದ್ರ , ಕರ್ನಾಟಕ ಬೆಳೆಗಾರರ ಒಕ್ಕೂಟದ ಕೊಡಗು ಘಟಕದ ಅಧ್ಯಕ್ಷ ಎನ್.ದಿನೇಶ್ ಪಾಲ್ಗೊಂಡಿದ್ದರು. ನೂತನವಾಗಿ ಲೋಕಸಭೆಗೆ ಆಯ್ಕೆಯಾದ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಪ್ರಜ್ಲಲ್ ರೇವಣ್ಣ ಅವರನ್ನು ಈ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರ ಪರವಾಗಿ ಅಭಿನಂದಿಸಲಾಯಿತು. ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು ಸಭೆಯಲ್ಲಿ ಪಾಲ್ಗೊಂಡಿದ್ದು ಸಭಾಂಗಣ ಕಿಕ್ಕಿರಿದಿತ್ತು.