ಸೋಮವಾರಪೇಟೆ, ಜೂ. 12: ಕಳೆದ ಸಾಲಿನ ಮಳೆಹಾನಿ ಪರಿಹಾರವನ್ನು ಕೃಷಿಕರಿಗೆ ಕೂಡಲೇ ವಿತರಿಸದಿದ್ದರೆ ತಾಲೂಕು ಬಂದ್‍ಗೆ ಕರೆ ನೀಡಲಾಗುವದು ಎಂದು ತಾಲೂಕಿನ ರೈತಪರ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿ ಖಜಾಂಚಿ ಕೆ.ಎಂ.ದಿನೇಶ್, ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಆಸ್ತಿಪಾಸ್ತಿ ಹಾನಿಯೊಂದಿಗೆ ಕೃಷಿ ಫಸಲು ಹಾನಿಯಾಗಿದೆ. ಪರಿಹಾರಕ್ಕಾಗಿ ಅರ್ಜಿ ಕೊಟ್ಟು ಹನ್ನೊಂದು ತಿಂಗಳು ಕಳೆದರೂ, ಶೇ. 90 ರಷ್ಟು ಕೃಷಿಕರಿಗೆ ಬೆಳೆಹಾನಿ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.

ತಾಲೂಕಿನ ಕೆಲ ರೈತರಿಗೆ ಕಾಟಾಚಾರಕ್ಕೆ ಪರಿಹಾರ ನೀಡಲಾಗಿದೆ. ಕೆಲವರಿಗೆ ಒಂದೆರಡು ಸಾವಿರ ಪರಿಹಾರ ನೀಡಲಾಗಿದೆ. ಹೆಚ್ಚಿನ ಆಸ್ತಿಪಾಸ್ತಿ, ಬೆಳೆನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಿಲ್ಲ ಎಂದು ದೂರಿದ ಅವರು, ಪರಿಹಾರ ವಿತರಿಸಲು ರೂ. 6 ಕೋಟಿ ಹಣವಿದೆ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ. ಆದರೆ ಪರಿಹಾರ ವಿತರಿಸುತ್ತಿಲ್ಲ. ಕೇವಲ ಭರವಸೆ ನೀಡುವದರಲ್ಲೇ ಕಾಲಕಳೆಯುತ್ತಿದ್ದಾರೆ. ಜಿಲ್ಲಾಡಳಿತ ರೈತರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಕೂಡಲೇ ಪರಿಹಾರ ನೀಡದಿದ್ದರೆ ಬಂದ್ ಕರೆ ನೀಡಲಾಗುವದು ಎಂದು ಎಚ್ಚರಿಸಿದರು.

ಪರಿಹಾರ ನೀಡುವದರಲ್ಲೂ ಕಂದಾಯ ಇಲಾಖೆ ತಾರತಮ್ಯ ಮಾಡುತ್ತಿದೆ. ನಿಜವಾದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ದಯಾನಂದ,ತಾಲೂಕು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಕೆ.ಪಿ. ಬಸಪ್ಪ ದೂರಿದರು.

ತಾಲೂಕು ಕಚೇರಿಯಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಪ್ರಶ್ನೆ ಮಾಡಿದರೆ ಅರ್ಜಿಗಳೇ ನಾಪತ್ತೆಯಾಗುತ್ತವೆ. ಶಾಂತಳ್ಳಿ ಯ ಕಂದಾಯ ಇಲಾಖೆಯಲ್ಲಿ ಸೂಕ್ತ ಸಮಯದಲ್ಲಿ ಸಿಬ್ಬಂದಿಗಳೇ ಇರುವದಿಲ್ಲ. ಇದರಿಂದ ಜನರಿಗೆ ಅನಾನುಕೂಲವಾಗಿದೆ ಎಂದರು.

ಗೋಷ್ಠಿಯಲ್ಲಿ ಕೂತಿ ಗ್ರಾಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪರಮೇಶ್, ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಟಿ. ಜೋಯಪ್ಪ ಇದ್ದರು.