ಗುಡ್ಡೆಹೊಸೂರು, ಜೂ. 12: ಇಲ್ಲಿಗೆ ಸಮೀಪದ ಹೇರೂರು ಮತ್ತು ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಬಿರುಸಿನ ಕಾಮಗಾರಿ ನಡೆಸಲಾಗುತ್ತಿದೆ. ಇಟಾಚಿ ಯಂತ್ರವನ್ನು ಬಳಸಿ ಗಿಡ ನೆಡಲು ಅರಣ್ಯದೊಳಗೆ ದಾರಿ ಮಾಡಿಕೊಂಡು ಗುಂಡಿ ತೆಗೆಯುವ ಕಾಮಗಾರಿ ನಡೆಯಯತ್ತಿದೆ.
ಕಾಡು ಬೆಳೆಸುವದು ಗಿಡ ನೆಡುವದು ಒಳ್ಳೆಯ ಕೆಲಸವೆ. ಆದರೆ ಕಾಡು ಕಡಿದು ಮತ್ತೆ ಗಿಡ ನೆಡವದು ಯಾವ ಕೆಲಸ ಎಂಬದು ಸಂಬಂಧಪಟ್ಟ ಇಲಾಖಾ ಹಿರಿಯ ಅಧಿಕಾರಿಗಳೇ ತಿಳಿಸಬೇಕಾಗುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಆನೆಕಾಡು ಮೀಸಲು ಅರಣ್ಯ ಪ್ರದೇಶವಾದ ಆನೆಕಾಡು ತಿರುವಿನಲ್ಲಿ ಸುಮಾರು 10 ಏಕರೆ ಪ್ರದೇಶದಲ್ಲಿದ್ದ ಸಾವಿರಾರು ಮರಗಳು ಭಸ್ಮವಾದವು ಆ ಜಾಗ ಈಗಲೂ ಕ್ರಿಕೆಟ್ ಮೈದಾನವಾಗಿದೆ. ಅಲ್ಲಿ ಬೆಲೆ ಬಾಳುವ ಯಾವದೇ ಮರಗಳು ತಲೆ ಎತ್ತಲಿಲ್ಲ. ಆದರೆ ಇಲಾಖೆಯವರಿಗೆ ಈ ಜಾಗ ಬಿಟ್ಟು ದಟ್ಟ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸು ತ್ತಿರುವದರ ಉದ್ದೇಶ ಪ್ರಜ್ಞಾವಂತ ನಾಗರಿಕರು ಚಿಂತಿಸುವಂತಾಗಿದೆ.
ಸಾರ್ವಜನಿಕರ ಹಣ ಈ ರೀತಿ ಪೋಲಾಗು ತ್ತಿರುವದು ಎಷ್ಟು ಸರಿ? ಅತ್ತೂರು ಮೀಸಲು ಅರಣ್ಯದಲ್ಲಿ ಒಟ್ಟು 20 ಸಾವಿರ ಗುಂಡಿ ತೋಡಿ ಅಲ್ಲಿ ಗಿಡ ನಡೆಲಾಗುತ್ತದೆ ಎಂಬ ಮಾಹಿತಿ ತಿಳಿದಿದೆ. ಆದರೆ ಈ ಕಾಮಗಾರಿ ನೋಡಿದರೆ ನೀರಿನ ಮೇಲೆ ಹೋಮ ಮಾಡಿದಂತೆ. ಅಲ್ಲವೆ!.. ಹೇರೂರು ಗ್ರಾಮದ ನಿವಾಸಿ ಮತ್ತು ಅರಣ್ಯ ಇಲಾಖೆಯ ನಿವೃತ್ತ ವನಪಾಲಕರಾದ ಮಂದೋಡಿ ಚಿನ್ನಪ್ಪ ಅವರು ವರದಿಗಾರರ ಜೊತೆ ಮಾತನಾಢೀ, ಈ ರೀತಿಯ ಕಾಮಗಾರಿ ಮಾಡಿ ಜನರ ದುಡ್ಡು ಹೊಡೆಯುವ ತಂತ್ರ ಎಂಬದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಕೆಲವು ಇಲಾಖೆಗಳು ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂಬದು ಸಾರ್ವಜನಿಕರಲ್ಲಿ ಮೂಡುವ ಪ್ರಶ್ನೆಯಾಗಿದೆ.