ಕೂಡಿಗೆ, ಜೂ. 12: ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಿಲ್ಲಾ ಕೃಷಿ ಇಲಾಖೆ ಇವರ ಆಶ್ರಯದಲ್ಲಿ ಎನ್.ಪಿ.ಓ.ಪಿ. ಮಾನದಂಡಗಳ ಪ್ರಕಾರ ಸಾವಯವ ಪ್ರಮಾಣನದ ಬಗ್ಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವು ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಆರಂಭಗೊಂಡಿತು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯ ರಾಜ್ಯ ನಿರ್ದೇಶಕ ಕೆ.ರಾಮಪ್ಪ ಅವರು ಉದ್ಘಾಟಿಸಿ, ಮಾತನಾಡಿ, ರಾಜ್ಯದಲ್ಲಿನ ಬೀಜೋತ್ಪಾದನ ಸಂಸ್ಥೆ ಮತ್ತು ಸಾವಯವ ಸಂಸ್ಥೆ ಜತೆಗೂಡಿ ಪ್ರಸ್ತುತ ಕರ್ನಾಟಕ ರಾಜ್ಯದ ಸಾವಯವ ಪ್ರಮಾಣನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಇದೀಗ ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ಸಾವಯವ ವಸ್ತುಗಳನ್ನು ಖರೀದಿಸಲು ಪ್ರಮಾಣೀಕರಿಸುವದು ಬಹು ಮುಖ್ಯವಾಗಿರುತ್ತದೆ. ಪ್ರಮಾಣೀಕರಿಸುವ ಉದ್ದೇಶದಿಂದ ಈ ತರಬೇತಿಯನ್ನು ರಾಜ್ಯದ ಎಲ್ಲಾ ಸಾವಯವ ಸಂಸ್ಥೆಯ ಅಧಿಕಾರಿಗಳಿಗೂ, ಕೃಷಿ ಇಲಾಖೆಯ ತಾಲೂಕು, ಹೋಬಳಿ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಸಾವಯವ ಪ್ರಮಾಣನ ಫೆಡರೇಷನ್ ಸ್ಥಾಪನೆ ಮಾಡುವದರ ಮೂಲಕ ರಾಜ್ಯದ ಎಲ್ಲಾ ರೈತರಿಗೆ ಅನುಕೂಲವಾಗುವಂತೆ ಸಾವಯವ ಉತ್ಪನ್ನಗಳ ಬಗ್ಗೆ ನಂಬಿಕೆ ಬರುವ ಮತ್ತು ಖರೀದಿಸುವ ಗ್ರಾಹಕರಿಗೆ ಸಮರ್ಪಕವಾಗಿ ಸದುಪಯೋಗವಾಗುವಂತೆ ಕ್ರಮಕೈಗೊಳ್ಳಲು ಚಿಂತಿಸಲಾಗಿದೆ ಎಂದರು.

ದೇಶದಲ್ಲೇ ಸಾವಯವ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅವುಗಳನ್ನು ಪ್ರಮಾಣೀಕರಿಸುವದು ಕೂಡಾ ಮುಖ್ಯವಾಗಿರುತ್ತದೆ. ಮಾರುಕಟ್ಟೆಯಲ್ಲಿ ಪ್ರಮಾಣೀಕರಿಸಿದ ಪರಿಷ್ಕøತ ಸಾವಯವ ವಸ್ತುಗಳು ಬಂದಾಗ ಗ್ರಾಹಕರಿಗೂ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು.

ಸಾವಯವ ವಸ್ತುಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಿರುವದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಾನುಸಾರ ಪ್ರಥಮವಾಗಿ ಪ್ರಮಾಣೀಕರಿಸಲು ಸಂಬಂಧಪಟ್ಟ ಅಧಿಕಾರಿಗಳಗೆ ತರಬೇತಿ ನೀಡಲಾಗುತ್ತಿದ್ದು, ರೈತರು ಬೆಳೆದ ಸಾವಯವ ಬೆಳೆಗಳನ್ನು ತರಬೇತಿ ಪಡೆದ ಅಧಿಕಾರಿಗಳು ಪ್ರಮಾಣೀಕರಿಸಿದ್ದಲ್ಲಿ ಬೆಳೆಗೆ ಉತ್ತಮ ಬೆಲೆ ದೊರೆಯುತ್ತದೆ. ಗ್ರಾಹಕರಿಗೂ ಸಾವಯವ ವಸ್ತುಗಳು ಸದುಪಯೋಗವಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು ಮಾತನಾಡಿ, ಕೃಷಿ ಇಲಾಖೆಯ ವತಿಯಿಂದ ಸಾವಯವ ಗೊಬ್ಬರ ಮತ್ತು ಸಾವಯವ ಯೋಜನೆಗಳಿದ್ದು, ಸಾವಯವ ಉತ್ಪನ್ನಗಳನ್ನು ಬಳಸಿಕೊಂಡು ರೈತರು ಬೆಳೆಗಳನ್ನು ಬೆಳೆದಲ್ಲಿ ಉತ್ತಮ ಬೆಳೆ ಹಾಗೂ ಲಾಭವನ್ನು ಗಳಿಸಲು ಸಹಕಾರಿಯಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯ ಜಂಟಿ ನಿರ್ದೇಶಕಿ ತಾರಾಮಣಿ ಮಾತನಾಡಿ, ಈ ಸಂಸ್ಥೆಯ ವತಿಯಿಂದ ಮುಂದಿನ ಯೋಜನೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಯಲ್ಲಿ ತೊಡಗಲು ರೈತರಿಗೆ ಉತ್ತೇಜನ ನೀಡುವದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಬೇಕಾಗುವ ಅನುದಾನ ಬಿಡುಗಡೆ ಮಾಡುತ್ತಿರುವದರಿಂದ ಈ ಯೋಜನೆಯ ಪ್ರಯೋಜನ ರೈತರಿಗೆ ತಲಪಬೇಕಾಗಿದೆ. ಆಧುನಿಕ ಕೃಷಿ ಪದ್ಧತಿಯಲ್ಲಿ ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಸಮರ್ಪಕವಾಗಿ ಬಳಸಿ ಸಾವಯವ ಕೃಷಿಯನ್ನೇ ಅವಲಂಭಿಸಿ ಆರೋಗ್ಯ ಮತ್ತು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಈ ಯೋಜನೆ ಸಹಕಾರಿಯಾಗುತ್ತದೆ ಎಂದರು.

ರಾಜ್ಯ ಮಟ್ಟದ ಈ ಕಾರ್ಯಾ ಗಾರದಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಿಂದ ತಾಲೂಕು ಮತ್ತು ಹೋಬಳಿ ಮಟ್ಟದ ಸುಮಾರು 125ಕ್ಕೂ ಅಧಿಕ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಈ ಕಾರ್ಯಾಗಾರವು ಮೂರು ದಿನಗಳ ಕಾಲ ನಡೆಯಲಿದೆ.

ವೇದಿಕೆಯಲ್ಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಗೌರಿ, ಸಹಾಯಕ ನಿರ್ದೇಶಕರಾದ ಪರಶಿವಮೂರ್ತಿ ಮತ್ತಿತರರು ಇದ್ದರು.

ತರಬೇತಿದಾರರಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಸುರೇಶ್, ರವೀಂದ್ರ, ಪರಿಶಿವಮೂರ್ತಿ ತರಬೇತಿ ನೀಡುತ್ತಿದ್ದಾರೆ.