ಕುಶಾಲನಗರ, ಜೂ. 11: ಬಿದ್ದು ಸಿಕ್ಕಿದ ಹಣದ ವಾರಸುದಾರರು ದೊರಕದ ಹಿನ್ನೆಲೆಯಲ್ಲಿ ಹಣವನ್ನು ಪರಿಸರ ಸಂರಕ್ಷಣೆಗೆ ಮೀಸಲಿಡಲು ಸ್ಥಳೀಯ ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ. ಕಳೆದ ತಿಂಗಳ ತಾ. 18 ರಂದು ಮಡಿಕೇರಿ ಗೌಡ ಸಮಾಜದ ಹೊರ ಆವರಣದಲ್ಲಿ ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಬಿ. ಜೋಯಪ್ಪ ಅವರಿಗೆ ನಗದು ರೂ. 6500 ಬಿದ್ದು ಸಿಕ್ಕಿತ್ತು. ಅದರ ವಾರಸುದಾರರು ಕಾಣದ ಹಿನ್ನೆಲೆಯಲ್ಲಿ ‘ಶಕಿ’್ತಯಲ್ಲಿ ನಗದು ಬಿದ್ದು ಸಿಕ್ಕಿರುವ ಬಗ್ಗೆ ಪ್ರಕಟಣೆ ನೀಡಿದ್ದು ವಾರಸುದಾರರು ಪೂರ್ಣ ಮಾಹಿತಿ ನೀಡಿ ಪಡೆದುಕೊಳ್ಳುವಂತೆ ಕೋರಿದ್ದರು. ಪ್ರಕಟಣೆ ಬೆನ್ನಲ್ಲೇ ಹಲವು ಕರೆಗಳು ಬಂದಿದ್ದು ಮಾಹಿತಿ ಸಮರ್ಪಕವಾಗಿಲ್ಲದ ಹಿನ್ನೆಲೆಯಲ್ಲಿ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸ್ನೇಹಿತರು ಸಲಹೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ದೊರಕಿದ ನಗದನ್ನು ಗಿಡ ನೆಡುವ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾ. 17 ರಂದು ಕಾವೇರಿ ಪರಿಸರ ರಕ್ಷಣಾ ಬಳಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಕುಶಾಲನಗರ ಮತ್ತು ಮಡಿಕೇರಿಯಲ್ಲಿ ನಡೆಯಲಿರುವ ಪರಿಸರ ಸಂರಕ್ಷಣಾ ಕಾರ್ಯಕ್ರಮದ ಆಯೋಜಕರಿಗೆ ಹಸ್ತಾಂತರಿಸಲು ನಿರ್ಧರಿಸಿರುವದಾಗಿ ಜೋಯಪ್ಪ ತಿಳಿಸಿದ್ದಾರೆ. -ಸಿಂಚು