ಮಡಿಕೇರಿ, ಜೂ. 12: ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಉತ್ತಮ ಸ್ಥಿತಿಯಲ್ಲಿದ್ದು, ಈ ಕ್ಷೇತ್ರವನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತೆ ಗಣ್ಯರು ಕರೆ ನೀಡಿದ್ದಾರೆ.ಇಲ್ಲಿನ ಕೊಹಿನೂರು ರಸ್ತೆಯಲ್ಲಿರುವ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ಕಟ್ಟಡದಲ್ಲಿ ತೆರೆಯಲಾಗಿರುವ ನೂತನ ಕಚೇರಿಯ ಉದ್ಘಾಟನೆ ಇಂದು ನೆರವೇರಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ರಾಜ್ಯ ಸಹಕಾರಿ ಮಾಜಿ ಸಚಿವ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಅಡಗೂರು ಹೆಚ್. ವಿಶ್ವನಾಥ್ ಅವರು ಸಹಕಾರ ಕ್ಷೇತ್ರ ಬೆಳೆದಷ್ಟು ಜನರಿಗೆ ಅನುಕೂಲವಾಗಲಿದೆ. ಪರಸ್ಪರ ಸಹಕಾರ ಇಲ್ಲದ ಕ್ಷೇತ್ರವೇ ಇಲ್ಲ; ನಮಗೆ ಗೊತ್ತಿಲ್ಲದೆ ಸಹಕಾರ ಕೊಡುತ್ತಿರುತ್ತೇವೆ. 2002ರಲ್ಲಿ ಸಹಕಾರ ಸಚಿವನಾಗಿದ್ದಾಗ ವಾಣಿ ಜ್ಯೋದ್ಯಮಿಗಳ ಸಂಘವನ್ನು ಉದ್ಘಾಟಿಸಿದ್ದು, ಇದೀಗ ಸಂಘ ಬೆಳೆದು ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿರುವದು ಸಂತೋಷದ ವಿಷಯವೆಂದು ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭ ಸಾವಿರಾರು ಮಂದಿಗೆ ಆತಿಥ್ಯ ನೀಡಿದ್ದ; ಜಗತ್ತನ್ನೇ ತನ್ನತ್ತ ಸೆಳೆದಿರುವ ಪುಟ್ಟ ಕೊಡಗು ಜಿಲ್ಲೆ ಕಳೆದ ಬಾರಿಯ ಭೀಕ ರತೆಯಲ್ಲಿ ಕಳೆದೇ ಹೋಯಿತೆಂದು ಭಾವಿಸಲಾಗಿತ್ತು. ಆದರೆ ತಾಯಿ ಕಾವೇರಿ ಆಶೀರ್ವಾದಿಂದ ಚೇತರಿಸಿ ಕೊಂಡಿದೆ. ಇಲ್ಲಿನ ಬದುಕು, ಸಂಸ್ಕøತಿ, ಇರೋವರೆಗೂ ಕೊಡಗು ಚಿರಾಯು ವಾಗಿರುತ್ತದೆ ಎಂದು ಹೇಳಿದರು. ಸಹಕಾರ ಸಂಘ ವ್ಯಾಪಾರಸ್ತರ ಕಣ್ಮಣಿಯಾಗಿ, ಆರ್ಥಿಕ ಬದುಕಿನ ಸೆಲೆಯಾಗಲಿ ಎಂದು ಆಶಿಸಿದರು.

ಮಾಜಿ ಕಾನೂನು ಸಚಿವ, ಸಹಕಾರಿ ಧುರೀಣ ಯಂ.ಸಿ. ನಾಣಯ್ಯ ಅವರು ಮಾತನಾಡಿ, ಸಹಕಾರಿ ಕ್ಷೇತ್ರ ಕೊಡಗಿನಲ್ಲಿ ಬೆಳೆದಷ್ಟು ಬೇರೆ ಎಲ್ಲಿಯೂ ಬೆಳೆದಿಲ್ಲವೆಂಬ ಹೆಮ್ಮೆಯ ವಿಚಾರವಾಗಿದೆ ಎಂದರು. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಇರಬಾರದೆಂದು ಹೇಳಿದ ಅವರು, ಪ್ರಸ್ತುತ ರಾಜಕೀಯಕ್ಕೆ ಪ್ರವೇಶಿಸಲು ಸಹಕಾರಿ ಕ್ಷೇತ್ರ ಮೊದಲ ಮೆಟ್ಟಿಲಾಗಿರುವದು ವಿಷಾದನೀಯ. ಸಹಕಾರ ಸಂಘದ ಚುನಾವಣೆಯಲ್ಲಿ ಮತಕ್ಕಾಗಿ ಹಣ ಹಂಚುವದು ಒಳ್ಳೆಯ ಬೆಳವಣಿಗೆಯಲ್ಲವೆಂದು ಹೇಳಿದರು.

ಸಹಕಾರ ಸಂಘಗಳು ಸಾಲ ನೀಡುವಲ್ಲಿ ಯಾವದೇ ಹೊಂದಾಣಿಕೆ ಇರಬಾರದು, ಆಡಿಟ್ ಮಾಡುವ ಸಂದರ್ಭ

(ಮೊದಲ ಪುಟದಿಂದ) ಆಡಿಟರ್‍ಗಳು ಸಂಘಕ್ಕೆ ಭೇಟಿ ನೀಡದೆ ಕಾರ್ಯದರ್ಶಿಗಳನ್ನು ಹೊಟೇಲ್‍ಗಳಿಗೆ ಕರೆಸಿಕೊಂಡು ವರದಿ ತಯಾರು ಮಾಡುವದು ಸರಿಯಾದ ಕ್ರಮವಲ್ಲ.

ಇಂತಹ ಬೆಳವಣಿಗೆಯಿಂದಲೇ ಎರಡು ಸಂಘಗಳಲ್ಲಿ ದುರುಪಯೋಗ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ವಾಣಿಜ್ಯೋದ್ಯಮಿಗಳ ಸಂಘದಲ್ಲಿ 1800 ಮಂದಿ ಸದಸ್ಯರಿದ್ದು, ನಿರಖು ಠೇವಣಿ ಕೇವಲ 8 ಕೋಟಿ ಮಾತ್ರ ಇದೆ. ಸಾಲ ಪಡೆಯಲು ಮಾತ್ರ ಸಂಘದ ಸದಸ್ಯರಾಗಿರುವದಲ್ಲ ನಿರಖು ಠೇವಣಿ ಇರಿಸಿ, ಸಂಘವನ್ನು ಬೆಳೆಸುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಕೊಡಗು ತನ್ನದೇ ಆದ ಮೇಲ್ಪಂಕ್ತಿ ಹಾಕಿಕೊಂಡಿದೆ. ಸಮಯಕ್ಕೆ ಸರಿಯಾಗಿ ಪಡೆದ ಸಾಲವನ್ನು ಹಿಂತಿರುಗಿ ಕಟ್ಟುವ ಪ್ರಜ್ಞೆ ಇಲ್ಲಿಯ ಜನರಿಗೆ ಹಿರಿಯರಿಂದಲೇ ಬಂದಿದೆ. ಎಲ್ಲ ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿವೆ ಎಂದು ಹೇಳಿದರು. ಇದೀಗ ವಾಣಿಜ್ಯೋದ್ಯಮಿಗಳ ಸಂಘವು ನಗರದ ಹೃದಯ ಭಾಗದಲ್ಲಿ ಸ್ವಂತ ಕಟ್ಟಡ ಖರೀದಿಸಿರುವದು ಶ್ಲಾಘನೀಯ; ಸಂಘ ವ್ಯಾಪಾರಸ್ತರಿಗೆ ಮಾತ್ರ ಸೀಮಿತವಾಗಿರದೆ ಅಪೇಕ್ಷತರಿಗೆ ಅನುಕೂಲ ವಾಗುವಂತಿರಲಿ. ಸಹಕಾರಿ ಸಂಘಗಳಲ್ಲಿ ಮಾತ್ರ ಸುಲಭದಲ್ಲಿ ಸಾಲ ದೊರೆಯುತ್ತದೆ. ಇದರ ಉಪಯೋಗ ಎಲ್ಲರಿಗೂ ಆಗಲಿ ಎಂದು ಹೇಳಿದರು. ಸಹಕಾರ ಕ್ಷೇತ್ರವನ್ನು ಉಳಿಸಿ ಬೆಳಸುವದರೊಂದಿಗೆ ಸಂಘದ ಸಭಾಂಗಣವನ್ನು ಅಪೇಕ್ಷಿಸುವ ಬಡವರ್ಗದವರಿಗೆ ಕಡಿಮೆ ಬಾಡಿಗೆ ರೂಪದಲ್ಲಿ ನೀಡಿ ಸಹಕರಿಸಿ ಎಂದು ಮನವಿ ಮಾಡಿಕೊಂಡರಲ್ಲದೆ, ಸಂಘ ರಾಷ್ಟ್ರ ಪ್ರಶಸ್ತಿಗಳಿಸುವಂತಾಗಲಿ ಎಂದು ಆಶಿಸಿದರು.

ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ 15 ವರ್ಷಗಳ ಹಿಂದೆ ಉತ್ತಮ ಚಿಂತನೆಯೊಂದಿಗೆ ಆರಂಭವಾದ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ. ಇಲ್ಲಿ ಎಲ್ಲ ಜಾತಿ, ಪಕ್ಷದವರು ಇದ್ದಾರೆ. ಆದರೆ ಯಾವದೇ ರಾಜಕೀಯವಿಲ್ಲ, ಒಗ್ಗಟ್ಟಿದೆ, ಇದು ಇದೇ ರೀತಿ ಮುಂದುವರಿಯಬೇಕು. ಯಾವದೇ ಸಂಸ್ಥೆ ಲಾಭದಲ್ಲಿರುವಾಗ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇರುತ್ತದೆ. ಆದರೆ ಚೇಂಬರ್‍ನಲ್ಲಿ ಅದು ಇಲ್ಲ. ಇಲ್ಲಿನ ಸಹಕಾರಿ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಲಿ ಎಂದು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್ ಅವರು, ಸಂಘವನ್ನು ಸ್ಥಾಪಿಸಿದ ಸ್ಥಾಪಕಾಧ್ಯಕ್ಷ ಜಿ. ರಾಜೇಂದ್ರ ಸೇರಿದಂತೆ ಮುನ್ನಡೆಸಿಕೊಂಡು ಬಂದ ಅಧ್ಯಕ್ಷರುಗಳ ಕೊಡುಗೆ ಯನ್ನು ಸ್ಮರಿಸಿದರು. 2016ರಲ್ಲಿ ಸ್ವಂತ ಕಟ್ಟಡ ಖರೀದಿಸಿ ಇದೀಗ ಕಚೇರಿ ಹಾಗೂ ಸಭಾಂಗಣ ನಿರ್ಮಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲ ವಾಗಲಿದೆ. ಸಹಕಾರ ಸಂಘಗಳಲ್ಲಿ ಕೆಲಸ ಮಾಡಲು ಬರುವವರಲ್ಲಿ ಕೆಲಸ ಮಾಡುವ ಮನೋಲ್ಲಾಸ ಇರಬೇಕೆಂದು ಹೇಳಿದ ಸಂಘದ ಕಾರ್ಯಕ್ರಮಗಳಲ್ಲಿ ಎಲ್ಲ ಸದಸ್ಯರುಗಳು ಚರ್ಚೆಯಲ್ಲಿ ಭಾಗಿಯಾಗಿ ಸಲಹೆಗಳನ್ನು ನೀಡಬೇಕೆಂದು ಮನವಿ ಮಾಡಿದರು. ಸನ್ಮಾನ ಇದೇ ಸಂದರ್ಭದಲ್ಲಿ 2002ರಲ್ಲಿ ವಾಣಿಜ್ಯೋದ್ಯಮಿಗರ ಸಹಕಾರ ಸಂಘದ ಸ್ಥಾಪನೆಗೆ ಕಾರಣಕರ್ತರಾದ ಸ್ಥಾಪಕಾಧ್ಯಕ್ಷ ಜಿ. ರಾಜೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ವನಿತ, ಸಹಕಾರ ಸಂಘಗಳ ಉಪನಿಬಂಧಕ ರವಿಕುಮಾರ್, ನಿರ್ದೇಶಕರುಗಳು ಉಪಸ್ಥಿತರಿದ್ದರು. ಮುನೀರ್ ಅಹ್ಮದ್ ನಿರೂಪಿಸಿದರೆ, ಮಾಜಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಸ್ವಾಗತಿಸಿದರು. ಎಂ.ಎಂ. ಲಿಯಾಕತ್ ಆಲಿ ಪ್ರಾರ್ಥಿಸಿದರು.