ಮಡಿಕೇರಿ, ಜೂ. 12: ಕೊಡಗು ಜಿಲ್ಲೆಗೆ ಈಗಷ್ಟೇ ಮುಂಗಾರು ಮಳೆಯ ಪ್ರವೇಶವಾಗಿದ್ದು, ತುಂತುರು ಮಳೆ ಹನಿಯುವದರೊಂದಿಗೆ ಗಾಳಿ ಕಾಣಿಸಿಕೊಂಡಿದೆ. ಈ ಆರಂಭಿಕ ದಿನಗಳಲ್ಲೇ ಅಲ್ಲಲ್ಲಿ ಸಮಸ್ಯೆಗಳು ಎದುರಾಗುವದರೊಂದಿಗೆ ಅನಾಹುತಗಳಿಗೂ ಎಡೆಯಾಗಿದೆ. ಜೀವನದಿ ಕಾವೇರಿಯ ಸಂಗಮ ಕ್ಷೇತ್ರಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿಯಿಂದಾಗಿ ಕೆಸರುಮಯ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದೆಡೆ ಈ ಪುಣ್ಯ ತೀರ್ಥ ಕ್ಷೇತ್ರವೂ ಸೇರಿದಂತೆನಾಪೋಕ್ಲು, ಕರಿಕೆ ಸುತ್ತಮುತ್ತ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ಸಾರ್ವಜನಿಕರು ತೊಂದರೆಯಲ್ಲಿ ಸಿಲುಕಿದ್ದಾರೆ.ಈಗಿನ ತುಂತುರು ಮಳೆ ಯಿಂದಾಗಿ ಭಾಗಮಂಡಲದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆಯಿಲ್ಲದೆ, ಮೇಲ್ಸೇತುವೆಯ ಮಣ್ಣಿನಿಂದಾಗಿ ಇಡೀ ಪಟ್ಟಣ ಕೆಸರಿನ ಕೊಂಪೆಯಂತಾಗಿದೆ. ಮಳೆನೀರು ಸರಾಗ ಹರಿಯಲು ಅವಕಾಶ ವಾಗದಿರುವ ಪರಿಣಾಮ ರಸ್ತೆಯಲ್ಲೇ ಮಣ್ಣುಮಿಶ್ರಿತ ಕೆಸರಿನಿಂದಾಗಿ ಇತ್ತ ಬರುವ ಯಾತ್ರಾರ್ಥಿಗಳ ಸಹಿತ ಸ್ಥಳೀಯರು ಬವಣೆ ಪಡುವಂತಾಗಿದೆ.

ಕತ್ತಲಲ್ಲಿ ಭಾಗಮಂಡಲ

ಇಲ್ಲಿ ಕೆಸರಿನ ಸಮಸ್ಯೆ ನಡುವೆ ಕಳೆದ ಎರಡು ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಪಟ್ಟಣ ಕತ್ತಲಲ್ಲಿ ಮುಳುಗಿದೆ.

(ಮೊದಲ ಪುಟದಿಂದ) ಶಾಲಾ ವಿದ್ಯಾರ್ಥಿಗಳು ಅಗತ್ಯ ದಾಖಲೆ ಪಡೆಯಲು ತೊಂದರೆಯಾಗುತ್ತಿದೆ. ಆನ್‍ಲೈನ್ ಮೂಲಕವೇ ದಾಖಲಾತಿಗಳನ್ನು ಪಡೆಯಬೇಕಿದ್ದು, ವಿದ್ಯುತ್ ಕಡಿತದಿಂದಾಗಿ ಕಿರಿಕಿರಿ ಅನುಭವಿಸುವಂತಾಗಿದೆ. ಹತ್ತು ಹಲವು ಸಮಸ್ಯೆಗಳಲ್ಲಿ ಸಿಲುಕಿ ಮಳೆಗಾಲದ ಆರಂಭದಲ್ಲಿಯೇ ಜನಸಾಮಾನ್ಯರು ಪರದಾಡುವಂತಾಗಿದೆ.

ಭಾಗಮಂಡಲ ಪಟ್ಟಣದಲ್ಲಿ ಆಟೋ ನಿಲ್ದಾಣದ ಸುತ್ತಮುತ್ತ ರಸ್ತೆ ಕೆಸರುಮಯವಾಗಿದೆ. ನಾಪೋಕ್ಲು ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿದೆ. ಸಂತೆ ಮಾರುಕಟ್ಟೆ ಯಿಂದ ಹರಿದುಬರುವ ಮಳೆ ನೀರು ಹೊಟೇಲ್ ಒಂದರ ಬಳಿ ಪಕ್ಕದ ಗದ್ದೆಗೆ ಸೇರಬೇಕಿತ್ತು. ಒಳಚರಂಡಿ ಇಲ್ಲದೆ ರಸ್ತೆಯಲ್ಲಿ ಹರಿದು ಅಲ್ಲಲ್ಲಿ ವಾಹನಗಳು ಹೂತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ - ಕಾಲೇಜು ವಿದ್ಯಾರ್ಥಿಗಳು ಕೆಸರು ಮಯ ರಸ್ತೆಯಲ್ಲಿ ನಡೆಯಬೇಕಾಗಿದೆ. ನಾಪೋಕ್ಲು ರಸ್ತೆಯಲ್ಲಿ ಸಂಪೂರ್ಣ ಕೆಸರು ತುಂಬಿದ್ದು, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಭಾಗಮಂಡಲದಲ್ಲಿರುವ ಅಂಗಡಿಗಳ ಮುಂದೆ ಕೆಸರು ಮಣ್ಣು ತುಂಬಿದ್ದು, ನಿತ್ಯ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಳ್ಳಬೇಕಿದೆ.

ಕಂದಾಯ ಅಧಿಕಾರಿಗಳ ಭೇಟಿ

ಕರಿಕೆ: ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಮರ ಉರುಳಿಬಿದ್ದು ನಷ್ಟ ಸಂಭವಿಸಿದ ಮನೆಗಳನ್ನು ಕಂದಾಯಾ ಧಿಕಾರಿಗಳು ಪರಿಶೀಲನೆ ನಡೆಸಿದರು. ಕೆಲ ದಿನದ ಹಿಂದೆ ‘ಶಕ್ತಿ’ಯಲ್ಲಿ ವರದಿ ಬಂದ ಹಿನ್ನಲೆಯಲ್ಲಿ ಮಡಿಕೇರಿ ತಹಶೀಲ್ದಾರ್ ಕುಸುಮ ಅವರ ನಿರ್ದೇಶನದಂತೆ ಗ್ರಾಮ ಲೆಕ್ಕಾಧಿಕಾರಿ ಪ್ರಭಾಕಾರ್, ಗ್ರಾಮ ಸಹಾಯಕ ಜನಾರ್ಧನ ಇವರುಗಳು ಚೆತ್ತುಕಾಯ ಹದಿಮೂರನೇ ಮೈಲು ನಿವಾಸಿ ಕೆ.ಜಿ.ಪಾರ್ವತಿ, ರಾಜು ಅಗಸ್ಟೀನ್, ಕೆ.ಡಿ.ಬಾಲಕೃಷ್ಣ, ಸುಕುಮಾರ, ಜಾನಕಿ ರಾಘವ ಎಂಬವರ ಮನೆಗಳನ್ನು ಪರಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಕಳೆದ ರಾತ್ರಿ ಬೃಹತ್ ಕಾಡು ಮರವೊಂದು ಎಳ್ಳುಕೊಚ್ಚಿ ಪೊಂಗಾನ ನಿವಾಸಿ ಜಾನಕಿ ರಾಘವ ಎಂಬವರ ಮನೆಮೇಲೆ ಉರುಳಿಬಿದ್ದ ಪರಿಣಾಮ ಮನೆಯ ಮೇಲ್ಚಾವಣಿಯ ಶೀಟುಗಳು ಜಖಂಗೊಂಡಿದ್ದು ಅಂದಾಜು ಇಪ್ಪತ್ತು ಸಾವಿರ ರೂಪಾಯಿಯಷ್ಟು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ಜಿ.ಬಿಪಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕತ್ತಲಲ್ಲಿ ಕರಿಕೆ

ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕರಿಕೆ ಗ್ರಾಮಸ್ಥರು ಕತ್ತಲಲ್ಲಿ ಪರದಾಡು ವಂತಾಗಿದೆ. ಇದರಿಂದಾಗಿ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಓರ್ವ ಅನುಭವಿ ಮಾರ್ಗಾದಾಳುವನ್ನು ಚೇರಂಬಾಣೆಗೆ ವರ್ಗಾವಣೆ ಮಾಡಲಾಗಿದ್ದು ಕೂಡಲೇ ವಿದ್ಯುತ್ ಇಲಾಖೆ ಗ್ರಾಮಕ್ಕೆ ಹೆಚ್ಚಿನ ಅನುಭವಿ ಸಿಬ್ಬಂದಿಗಳನ್ನು ನಿಯೋಜಿಸಿ ವಿದ್ಯುತ್ ಮಾರ್ಗಕ್ಕೆ ತಗುಲಿಕೊಂಡಿರುವ ಗಿಡ- ಗಂಟಿಗಳನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮನೆ - ಅಂಗನವಾಡಿಗೆ ಹಾನಿ

*ಗೋಣಿಕೊಪ್ಪಲು, ಜೂ. 12 : ತೀವ್ರಗೊಂಡ ಬಿರುಗಾಳಿಯಿಂದಾಗಿ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಜಖಂಗೊಂಡಿರುವ ಘಟನೆ ತಿತಿಮತಿಯಲ್ಲಿ ಮಂಗಳವಾರ ರಾತ್ರಿ ಜರುಗಿದೆ. ಸುಕುಮಾರ ಅವರಿಗೆ ಸೇರಿದ ಮನೆಯ ಪಕ್ಕದಲ್ಲಿ ಇದ್ದ ಮರದ ರೆಂಬೆ ಮುರಿದು ಮನೆ ಮೇಲೆ ಬಿದ್ದುದರಿಂದ ಮನೆಯಗೋಡೆ ಕುಸಿದು ಚಾವಣಿ ಕೂಡ ಜಖಂಗೊಂಡಿದೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಸ್ಥಳಕ್ಕೆ ಗ್ರಾಮ ಲೆಕ್ಕಿಗ ಯಶವಂತ್ ಭೇಟಿ ನೀಡಿ ಪರಿಶೀಲಿಸಿದರು. ಶೇ.40 ರಷ್ಟು ಮನೆಗೆ ಹಾನಿಯಾಗಿದೆ. ಇಲಾಖೆವತಿಯಿಂದ ಲಭಿಸುವ ಪರಿಹಾರವನ್ನು ಕೂಡಲೆ ಒದಗಿ¸ Àಲಾಗುವದು ಎಂದು ಅವರು ತಿಳಿಸಿ ದರು. ಇದೇ ರೀತಿ ಪೊನ್ನಪ್ಪಸಂತೆ ಹಾಗೂ ಕೋಣನಕಟ್ಟೆ ನಡುವಿನ ಮಾರ್ಗದ ಮಧ್ಯದಲ್ಲಿಯೂ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ತಂತಿ ತುಂಡಾಗಿದೆ. ಮತ್ತೊಂದು ಮರ ಕೋಣನಕಟ್ಟೆ ಹಾಗೂ ಮಾಯಮುಡಿ ನಡುವೆ ರಸ್ತೆಯಲ್ಲಿ ಬಿದ್ದು ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮರವನ್ನು ತೆರವುಗೊಳಿಸಿದ ಬಳಿಕ ಸಂಚಾರ ಆರಂಭಗೊಂಡಿತು.

ಗೋಣಿಕೊಪ್ಪಲು ಸುತ್ತಮುತ್ತ ಎರಡು ದಿನಗಳಿಂದ ಗಾಳಿ ತೀವ್ರಗೊಂಡಿದ್ದು ಅಲ್ಲಲ್ಲೆ ಮರಗಳು ಬೀಳುತ್ತಿವೆ. ಇದರಿಂದ ಕೆಲವು ಕಡೆ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಮೋಡ ಕವಿದ ವಾತಾವರಣದಲ್ಲಿ ಬಿರುಗಾಳಿಯೊಂದಿಗೆ ಮಳೆ ತುಂತುರಾಗಿ ಬೀಳುತ್ತಿದೆ.

ಬಾಡಗ ಬಾಣಂಗಾಲ

ಸಿದ್ದಾಪುರ : ಮರ ಬಿದ್ದು, ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಭಾಗಶಃ ಹಾನಿಯಾಗಿದ್ದು, ಅದೃಷ್ಟ ವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಡಗ ಬಾಣಂಗಾಲ ಮಠದಲ್ಲಿ ನಡೆದಿದೆ.

ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ ಬಾಣಂಗಾಲದ ಅಂಗನವಾಡಿ ಕೇಂದ್ರದ ಬಳಿಯಲ್ಲಿ ಇದ್ದ ಮರವೊಂದು ಬುಧವಾರ ಬೆಳಗ್ಗಿನ ಜಾವ ಅಂಗನವಾಡಿ ಕೇಂದ್ರದ ಮೇಲೆ ಬಿದ್ದಿದೆ. ಪರಿಣಾಮ ಅಂಗನವಾಡಿ ಕೇಂದ್ರ ಹೆಂಚುಗಳು ಹಾಗೂ ಕೌಕೋಲುಗಳು ಮುರಿದಿದ್ದು, ಭಾಗಶಃ ಹಾನಿಯಾಗಿದೆ. ಸಾಮಾನ್ಯವಾಗಿ ಮಕ್ಕಳು ಅಂಗನವಾಡಿಗೆ ಬೆಳಗ್ಗೆ 9 ಗಂಟೆಗೆ ಬರುತ್ತಿದ್ದು, ಬೆಳಗ್ಗಿನ ಜಾವ ಘಟನೆ ಸಂಭವಿಸಿದ ಕಾರಣ ಅಪಾಯ ತಪ್ಪಿದೆ.

ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಬಾನುಪ್ರಿಯ, ಪಿ.ಡಿ.ಓ ರಾಜೇಶ್, ಗ್ರಾ.ಪಂ ಸದಸ್ಯರಾದ ಬಿ.ಡಿ ಮುತ್ತಪ್ಪ, ಉಮೇಶ್ ಭೇಟಿ ನೀಡಿ ಪರಿಶೀಲಿಸಿದರು.

ಸಿದ್ದಾಪುರ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕರಡಿಗೋಡು, ಗುಹ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದೆ. ಮಳೆಯ ಹಿನ್ನೆಲೆಯಲ್ಲಿ ಕಂದಾಯ ಪರಿವೀಕ್ಷಕ ಅನಿಲ್ ಮಾತನಾಡಿ, ಈಗಾಗಲೇ ಇಲಾಖೆಯ ವತಿಯಿಂದ ನದಿ ದಡದ ಎಲ್ಲ ನಿವಾಸಿಗಳಿಗೂ ಮುಂಜಾಗೃತ ಕ್ರಮವಾಗಿ ನೋಟೀಸ್ ನೀಡಲಾಗಿದ್ದು, ಸಜ್ಜಾಗಿದೆ. ಮಳೆಗಾಲದ ಅಪಾಯದ ಮುನ್ಸೂಚನೆ ಇದ್ದಲ್ಲಿ ಕಂದಾಯ ಇಲಾಖೆಯನ್ನು ಸಂಪರ್ಕಿಸಲು ಕೋರಿದ್ದಾರೆ.

ವೀರಾಜಪೇಟೆ ವ್ಯಾಪಕ ಮಳೆ

ವೀರಾಜಪೇಟೆ : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಇಲ್ಲಿನ ದೊಡ್ಡಟ್ಟಿ ಚೌಕಿ ಬಳಿ ಮನೆಯೊಂದರ ಹಿಂಬದಿಯ ಬರೆ ಕುಸಿಯುತ್ತಿದ್ದು, ಮನೆ ಅಪಾಯದ ಅಂಚಿನಲ್ಲಿದೆ. ಮನೆಯ ಸುತ್ತ ಕಲ್ಲಿನಿಂದ ಕಟ್ಟಿದ ತಡೆಗೋಡೆ ಇಂದು ಬೆಳಿಗ್ಗೆ ಕುಸಿದು ಭಾರೀ ಸದ್ದು ಮಾಡಿದೆ.

ಇಲ್ಲಿನ ನೆಹರೂನಗರದಲ್ಲಿ ರಸ್ತೆಯ ಮೇಲೆ ಮರ ಉರುಳಿದ್ದು ವಾಹನ ಸಂಚಾರಕ್ಕೆ ಯಾವದೇ ಅಡಚಣೆಯಾಗಿಲ್ಲ. ಸುಂಕದ ಕಟ್ಟೆ ಹಾಗೂ ಅರಸುನಗರದಲ್ಲಿ ಹರಿಯುವ ತೋಡಿನ ಮೇಲೆ ಬರೆ ಕುಸಿದು ತೋಡು ಕೆಲವು ಗಂಟೆಗಳ ಬಂದ್ ಆಗಿದ್ದನ್ನು ಪಟ್ಟಣ ಪಂಚಾಯಿತಿ ಜೆ.ಸಿ.ಬಿ ಮೂಲಕ ಮಣ್ಣನ್ನು ತೆರವುಗೊಳಿಸಿತು.

ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ಎಂ.ಸಿ.ಚಂದ್ರಕಲಾ ಎಂಬುವರಿಗೆ ಸೇರಿದ ಮಣ್ಣಿನ ಬರೆ ಕುಸಿತದಿಂದ ಅಪಾಯದ ಅಂಚಿನಲ್ಲಿರುವ ಮನೆಯ ಸ್ಥಳಕ್ಕೆ ಇಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಾಡ್, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್ ಭೇಟಿ ನೀಡಿ ಮಹಜರು ನಡೆಸಿದರು. ತಾಲೂಕು ಕಚೇರಿಯಿಂದ ರೆವಿನ್ಯೂ ಇನ್ಸ್‍ಪೆಕ್ಟರ್ ಸಿಬ್ಬಂದಿಗಳು ಭೇಟಿ ನೀಡಿ ಮನೆ ಅಪಾಯದ ಅಂಚಿನಲ್ಲಿರುವ ಕುರಿತು ತಾಲೂಕು ತಹಶೀಲ್ದಾರ್ ಅವರಿಗೆ ವರದಿ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ವೀರಾಜಪೇಟೆಗೆ 2.3ಇಂಚು ಮಳೆ ಸುರಿದಿದೆ.

ಸೋಮವಾರಪೇಟೆ

ಮೋಡ ಕವಿದ ವಾತಾವರಣ ವಿದ್ದರೂ ಸೋಮವಾರಪೇಟೆಯಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ. ಕೆಲವೊಮ್ಮೆ ತುಂತುರು ಮಳೆ ಬಿದ್ದರೆ, ಮರುಕ್ಷಣವೇ ಬಿಸಿಲು, ನಂತರ ಮೋಡ ಕವಿದ ವಾತಾವರಣ ನಿರ್ಮಾಣಗೊಳ್ಳುತ್ತಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿಕ ವರ್ಗ ಆಗಸ ದಿಟ್ಟಿಸುತ್ತಿದೆ.

ಕಳೆದೆರಡು ದಿನ ತುಂತುರು ಮಳೆ ಬಿದ್ದು, ಮಳೆಗಾಲದ ಸನ್ನಿವೇಶ ನಿರ್ಮಿಸಿದ್ದರೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ಬೇಗೆ ಉಂಟಾಗಿ ಮಳೆಗಾಲ ಪ್ರಾರಂಭದ ಸೂಚನೆಯನ್ನು ದೂರ ತಳ್ಳಿತು.ಸಾಧಾರಣವಾಗಿ ಕಳೆದ ಮೂರು ದಿನಗಳಿಂದ ಆಗಾಗ್ಗೆ ಕವಿಯುವ ಮೋಡ, ತುಂತುರು ಮಳೆ, ಬಿಸಿಲಿನ ವಾತಾವರಣ ಕಂಡುಬರು ತ್ತಿದ್ದು, ಕೃಷಿ ಕಾರ್ಯಗಳಿಗೂ ಅನಿಶ್ಚಿತತೆ ಕಾಡುತ್ತಿದೆ. ಕಾಫಿ ತೋಟಗಳಿಗೆ ಗೊಬ್ಬರ ಹಾಕುವ ಕೆಲಸ ಇನ್ನೂ ಬಾಕಿ ಉಳಿದಿದ್ದು, ಶೇ.30 ರಷ್ಟು ಮಂದಿ ಮಾತ್ರ ಈವರೆಗೆ ಕೆಲಸ ಪೂರ್ಣಗೊಳಿಸಿದ್ದಾರೆ.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮಳೆಯ ಕಣ್ಣಾಮುಚ್ಚಾಲೆ ಕಂಡುಬರುತ್ತಿದೆ. ಉತ್ತಮ ಮಳೆ ಬಿದ್ದು ಭೂಮಿ ಹದವಾದರೆ ಗೊಬ್ಬರ ಹಾಕಿದ್ದು ಫಲದಾಯಕವಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ತೋಟದಲ್ಲಿ ಬಿದ್ದಿರುವ ತರಗೆಲೆಗಳೂ ಸಹ ಶೀತಗೊಂಡಿಲ್ಲ. ಈ ಸನ್ನಿವೇಶದಲ್ಲಿ ಗೊಬ್ಬರ ಹಾಕಲು ಕೃಷಿಕರು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ವರ್ಷ ಈ ವೇಳೆಗಾಗಲೇ ಸೋಮವಾರಪೇಟೆ ವಿಭಾಗಕ್ಕೆ 10 ರಿಂದ 15 ಇಂಚಿನಷ್ಟು ಮಳೆಯಾಗಿದ್ದು, ಪ್ರಸಕ್ತ ವರ್ಷಾರಂಭದಿಂದ ಈವರೆಗೆ ನಾಲ್ಕೈದು ಇಂಚಿನಷ್ಟು ಮಾತ್ರ ಮಳೆ ಸುರಿದಿದೆ. ಹೂ ಮಳೆಯೂ ಸಹ ಮೂರರಿಂದ ನಾಲ್ಕು ಬಾರಿ 20, 30 ಸೆಂಟ್ಸ್‍ನಷ್ಟು ಬಿದ್ದಿರುವದರಿಂದ ಕಾಫಿ ಗಿಡಗಳಲ್ಲಿ 2 ರಿಂದ 3 ಬಾರಿ ಹೂ ‘ಸೆಟ್’ ಆಗಿದೆ. ಕಾಫಿ ಕಾಯಿಗಳು ಇದೀಗ ಬಲಿಯಲಾರಂಭಿಸಿದ್ದು, ಈ ಸಮಯದಲ್ಲಿ ಮಳೆಯೊಂದಿಗೆ ಗೊಬ್ಬರ ನೀಡಿದರೆ ಉತ್ತಮ ಫಸಲು ಪಡೆಯಬಹುದಾಗಿದೆ. ಆದರೆ ಅವಶ್ಯಕ ಮಳೆಯಾಗದೇ ಇರುವದರಿಂದ ನೀರಿನ ಸೌಲಭ್ಯ ಹೊಂದದೇ ಇರುವ ಬೆಳೆಗಾರರು ಸಮಸ್ಯೆ ಎದುರಿಸುವಂತಾಗಿದೆ.

ಇನ್ನು ಮಳೆ ಕೊರತೆಯಿಂದ ಬಹುತೇಕ ಕಡೆಗಳಲ್ಲಿ ಗದ್ದೆಗಳ ಉಳುಮೆ ಕಾರ್ಯವೂ ಮುಂದೂq Àಲ್ಪಟ್ಟಿದೆ. ಕಳೆದ ವರ್ಷ ಹರಗ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 28 ಇಂಚು ಮಳೆ ಬಿದ್ದಿದ್ದು, ಈ ವರ್ಷ ಕೇವಲ 4 ಇಂಚು ಮಾತ್ರ ಮಳೆಯಾಗಿದೆ. ಆದರೂ ಸಹ ಕೆಲ ರೈತರು ಟಿಲ್ಲರ್ ಮೂಲಕ ಗದ್ದೆಗಳನ್ನು ಉತ್ತಿದ್ದು, ಕೃಷಿಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಳೆದ ವರ್ಷ ಈ ಹೊತ್ತಿಗೆ ಸಸಿಮಡಿಗಳ ತಯಾರಿ ಯಾಗಿತ್ತು. ಈ ವರ್ಷ ಹಲವಷ್ಟು ಮಂದಿ ಗದ್ದೆಯನ್ನೇ ಉತ್ತಿಲ್ಲ. ಕನಿಷ್ಟ 3 ಇಂಚು ಮಳೆಯಾದರೆ ಉಳುಮೆ ಕಾರ್ಯ ಬಿರುಸುಗೊಳ್ಳಲಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ದಟ್ಟ ಮೋಡಗಳು ಆವರಿಸಿದರೂ ನಿರೀಕ್ಷಿತ ಮಳೆಯಾಗು ತ್ತಿಲ್ಲ. ಸುಡು ಬಿಸಿಲು ದೂರವಾಗಿ ತಂಪಾದ ವಾತಾವರಣ ವಿದ್ದು, ಆಗಾಗ್ಗೆ ಗಾಳಿಯ ಆರ್ಭಟ ಕಂಡುಬರುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ಪಟ್ಟಣ ಸೇರಿದಂತೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕೆಲಕಾಲ ಬಿರುಸಿನ ನಡುವೆÀ ಮಳೆ ಸುರಿಯಿತು.

ನಾಪೆÇೀಕ್ಲು : ಮುಂಗಾರು ಆರಂಭವಾಗುತ್ತಿದ್ದಂತೆಯೇ ರಸ್ತೆಗಳಲ್ಲಿ ನೀರು ಸಂಗ್ರಹವಾಗಿದ್ದು, ವಾಹನ ಸಂಚಾರಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ನಾಪೆÇೀಕ್ಲು - ಕಕ್ಕಬ್ಬೆಯ ಮುಖ್ಯ ರಸ್ತೆಯ ಕೋಟೇರಿಯ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದು, ಲಘು ವಾಹನಗಳ ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ಅವ್ಯವಸ್ಥೆಗೆ ಅವೈಜ್ಞಾನಿಕ ರಸ್ತೆ ಮತ್ತು ಮೋರಿ ನಿರ್ಮಾಣವೇ ಕಾರಣ ಎನ್ನುತ್ತಾರೆ ಸಾರ್ವಜನಿಕರು. ಆದುದರಿಂದ ಮಳೆ ಪ್ರಮಾಣ ಹೆಚ್ಚಾಗುವ ಮುನ್ನ ಲೋಕೋಪಯೋಗಿ ಇಲಾಖೆ ಇದಕ್ಕೆ ಸೂಕ್ತ ಕ್ರಮಕೈಗೊಂಡು ಮುಂದೆ ಉಂಟಾಗಬಹುದಾದ ಅನಾಹುತವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕುಶಾಲನಗರ

ಕುಶಾಲನಗರ ಮತ್ತು ಸುತ್ತಮುತ್ತ ಬುಧವಾರ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಬಿದ್ದ ಬಗ್ಗೆ ವರದಿಯಾಗಿದೆ. ಬೆಳಗ್ಗಿನಿಂದಲೇ ಶೀತಗಾಳಿ ಬೀಸುವದರೊಂದಿಗೆ ವಾತಾವರಣ ಬಹುತೇಕ ತಂಪಾಗಿತ್ತು. ಯಾವದೇ ರೀತಿಯ ಅನಾಹುತದ ಬಗ್ಗೆ ವರದಿಯಾಗಿಲ್ಲ.

-ವರದಿ: ಸುನಿಲ್, ದಿನೇಶ್, ವಾಸು, ಸುಧೀರ್, ರಾಜ್ ಕುಮಾರ್, ವಿಜಯ್, ಸಿಂಚು, ಪ್ರಭಾ, ದುಗ್ಗಳ.