ವೀರಾಜಪೇಟೆ, ಜೂ.12: ಸರ್ಕಾರವು ಸಾರ್ವಜನಿಕರ ಬಳಕೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಬಳಕೆಗೆ ಉಪಯೋಗವಂತೆ ಕಟ್ಟಡಗಳು,ರಸ್ತೆ ಮತ್ತು ಮೂಲಭೂತ ಸೌಕರ್ಯ ಒದಗಿಸಲಾಗಿದೆಯಾದರೂ ಅವುಗಳ ನಿರ್ವಹಣೆಯನ್ನು ಮಾಡುವಲ್ಲಿ ಎಡುವುತ್ತಿದೆ ಎಂಬದಕ್ಕೆ ಜೀವಂತ ಸಾಕ್ಷಿಯಂತಿವೆ ಮಲೆತಿರಿಕೆ ಬೆಟ್ಟದಲ್ಲಿರುವ ಸಮಸ್ಯೆಗಳು.

ವೀರಾಜಪೇಟೆ ನಗರದ ಕಳಶಪ್ರಾಯದಂತಿರುವ ಮಲೆ ಮಹಾದೇಶ್ವರ ದೇವಸ್ಥಾನಕ್ಕೆ ಸಾಗುವ ಮಾರ್ಗ ಮೆಲೆತಿರಿಕೆ ಬೆಟ್ಟ ಪಟ್ಟಣ ಪಂಚಾಯಿತಿ ವಾರ್ಡ್ ಸಂಖ್ಯೆ 4 ರಲ್ಲಿದ್ದು, ಇಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಕೂಲಿಯನ್ನು ಅವಲಂಬಿಸಿಕೊಂಡು 150 ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದು 784 ಮತದಾರರಿದ್ದಾರೆ. ಇಲ್ಲಿ ಚಿಣ್ಣರಿಗಾಗಿ ಸುಮಾರು 18 ವರ್ಷಗಳಿಂದ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಅಂಗನವಾಡಿಯನ್ನು ನಡೆಸಲಾಗುತ್ತಿದೆ. ಈ ಹಿಂದೆ ಅಂಗನವಾಡಿ ಕೇಂದ್ರವು 2001 ರಿಂದ 2003 ರ ವರೆಗೆ ಬಾಡಿಗೆ ಮನೆಯಲ್ಲಿ ಕಾರ್ಯಾರಂಭಗೊಂಡು ನಂತರದಲ್ಲಿ 2003-04 ರಲ್ಲಿ ಜನಪ್ರತಿನಿಧಿಗಳ ಅನುದಾನದಲ್ಲಿ ನಿರ್ಮಾಣವಾದ ಸಮುದಾಯ ಭವನದ ಕಟ್ಟಡದಲ್ಲಿ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ಅಂಗನವಾಡಿಗೆ ಪ್ರತ್ಯೇಕ ಕಟ್ಟಡ ಇಲ್ಲದ ಬಗ್ಗೆ ಸ್ಥಳೀಯ ಅಡಳಿತವಾಗಲಿ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಂಡಿಲ್ಲ. ಎಂದು ಸ್ಥಳೀಯರು ಅರೋಪಿಸುತ್ತಾರೆ.

ಕಳೆದ ವರ್ಷ ಬಿದ್ದ ಮಹಾಮಳೆಗೆ ತಾತ್ಕಾಲಿಕ ಅಂಗನವಾಡಿಯ ಮೇಲ್ಚಾವಣಿ ಹೆಂಚುಗಳು ಹಾರಿಹೋಗಿವೆ. ಅಲ್ಲದೆ ಕಟ್ಟಡದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೀಗೆ ಶಿಥಿಲಾವಸ್ಥೆಯಲ್ಲಿರುವ ತಾತ್ಕಾಲಿಕ ಅಂಗನವಾಡಿ ಕಟ್ಟಡದಲ್ಲಿ 10-14 ಮಂದಿ ಚಿಣ್ಣರು ದಾಖಲಾಗಿದ್ದು ಎಂದಿಗೂ 5ರಿಂದ 8 ಮಕ್ಕಳು ನಿರಂತರವಾಗಿ ಆಗಮಿಸುತ್ತಿದ್ದಾರೆ. ಕೆಲವು ದಿನಗಳಿಂದ ಎಡಬಿಡದೆ ಬೀಳುತ್ತಿರುವ ಮಳೆಗೆ ಮೆಲ್ಚಾವಣಿಯ ಹೆಂಚುಗಳಿಂದ ಮಳೆನೀರು ಸೋರುತಿದ್ದು ಮಕ್ಕಳು ಭಯದ ನೆರಳಿನಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗನವಾಡಿಯ ಸ್ಥಿತಿಗತಿಗಳ ಬಗ್ಗೆ ಜನಪತ್ರಿನಿಧಿಗಳಿಗೆ ಮತ್ತು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಕಾರ್ಯಪ್ರವೃತರಾಗಿಲ್ಲ. ಎಂದು ಅಂಗನವಾಡಿ ಕಾರ್ಯಕರ್ತರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಮಾರ್ಗ ಶೋಚನೀಯ

ಮಲೆತಿರಿಕೆ ಬೆಟ್ಟಕ್ಕೆ ತೆರಳುವ ಮಾರ್ಗವು ಶೋಚನೀಯ ಸ್ಥಿತಿಯಲ್ಲಿದೆ ಈ ಮಾರ್ಗದಲ್ಲಿ ದಿನ ನಿತ್ಯ 100 ಕ್ಕೂ ಅಧಿಕ ವಾಹನಗಳು ಒಂದೆಡೆಯಿಂದ ಇನ್ನೊಂದೆÀಡೆಗೆ ಸಂಚಾರ ಮಾಡುತ್ತಿವೆ. 15 ವರ್ಷಗಳ ಹಿಂದೆ ಡಾಂಬರ್ ಕಂಡ ರಸ್ತೆಯಲ್ಲಿ ಇಂದು ಬೃಹತ್ ಗಾತ್ರದ ಗುಂಡಿಗಳಾಗಿವೆ. ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯನ್ನು ದುರಸ್ತಿ ಮಾಡಲು ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಅಟೋ ಚಾಲಕ ಅಶೋಕ್ ಪತ್ರಿಕೆಗೆ ತಿಳಿಸಿದ್ದಾರೆ.

ವಿದ್ಯುತ್ ಬವಣೆ

ಮಲೆತಿರಿಕೆ ಬೆಟ್ಟಕ್ಕೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ಮಂಡಳಿಯಿಂದ ಬೀದಿ ದೀಪ ಅಳವಡಿಕೆಯಾಗಿದ್ದರೂ ಬೀದಿದೀಪ ಒಂದು ದಿನ ಉರಿದರೆ ಹತ್ತು ದಿನ ಉರಿಯುವದಿಲ್ಲ ಇದರಿಂದಾಗಿ ನಿವಾಸಿಗಳು ಕಾರ್ಗತ್ತಲಿನಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ವಿದ್ಯುತ್ ಮಂಡಳಿಗೆ ಈ ಬಗ್ಗೆ ಮನವಿ ಮತ್ತು ದೂರು ಸಲ್ಲಿಸಿದರೂ ಸ್ಪಂದಿಸದೆ ಚೆಸ್ಕಾಂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಸ್ಥಳೀಯರಾದ ಸತೀಶ್ ಪತ್ರಿಕೆಯೊಂದಿಗೆ ದೂರಿದ್ದಾರೆ.

ಶಿಥಿಲಗೊಂಡ ನೀರಿನ ಟ್ಯಾಂಕ್

ಬೆಟ್ಟದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್ ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ನಗರ ಪ್ರದೇಶದಲ್ಲಿ ವಾಸ ಮಾಡುವ ಸಾರ್ವಜನಿಕರು ಬಳಕೆ ಮಾಡುತ್ತಿದ್ದಾರೆ. ನೀರಿನ ತೊಟ್ಟಿಯು ಶಿಥಿಲಗೊಂಡು ಹಲವು ವರ್ಷಗಳು ಕಳೆದಿವೆ ನೀರಿನ ತೊಟ್ಟಿಯು ಬಿರುಕುಬಿಟ್ಟಿದ್ದು ಬಿರುಕಿನಿಂದ ಬೃಹತ್ ಪ್ರಮಾಣದಲ್ಲಿ ಕುಡಿಯುವ ನೀರು ಭೂಮಿಯ ಒಡಲು ಸೇರುತಿದೆ ನೀರಿನ ತೊಟ್ಟಿಯನ್ನು ದುರಸ್ತಿಗೊಳಿಸಿದಲ್ಲಿ ಕುಡಿಯುವ ನೀರು ಪೋಲಾಗದಂತೆ ತಡೆಹಿಡಿಯಬಹುದು ಮತ್ತು ಸಮರ್ಪಕವಾಗಿ ಕುಡಿಯುವ ನೀರಿನ ಬಳಕೆ ಮಾಡಬಹುದಾಗಿದೆ ಈ ಬಗ್ಗೆ ಇಲಾಖೆಯು ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳಿಯರು ಹೇಳುತ್ತಾರೆ.

ಮಲೆತಿರಿಕೆ ಬೆಟ್ಟದಲ್ಲಿರುವ ಅಂಗನವಾಡಿ ಕೇಂದ್ರ ದುರಸ್ತಿಗೊಳಿಸಲು ಪಟ್ಟಣ ಪಂಚಾಯಿತಿ ಕಛೇರಿಗೆ ಮನವಿ ಸಲ್ಲಿಸಿದ್ದೇನೆ ಅಧಿಕಾರಿಗಳು ಸಬೂಬು ಹೇಳಿಕೊಂಡು ಕಾಲ ಹರಣ ಮಾಡುತ್ತಿದ್ದಾರೆ ಮನವಿಗೆ ಸ್ಪಂದನೆ ನೀಡುತ್ತಿಲ್ಲಾ ರಸ್ತೆಯ ಬಗ್ಗೆ ಈಗಗಾಲೇ ರೂ. 10 ಲಕ್ಷ ಬಿಡುಗಡೆಯಾಗಿದ್ದು ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಪರಿಣಾಮ ರಸ್ತೆ ಕಾಮಗಾರಿಯು ಸ್ಥಗಿತಗೊಂಡಿದೆ ಹದಗೆಟ್ಟ ರಸ್ತೆಯ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಅರಂಭಿಸಲಾಗುತ್ತದೆ ಎಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಪ.ಪಂ. ಚುನಾಯಿತ ಪ್ರತಿನಿಧಿ ಸುಶ್ಮಿತಾ ತಿಳಿಸಿದ್ದಾರೆ.

-ಕೆ.ಕೆ.ಎಸ್.