ಮಡಿಕೇರಿ, ಜೂ. 12: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಾಗೂ ಬುದ್ಧ ಪೂರ್ಣಿಮೆಯ ಅಂಗವಾಗಿ ಮಡಿಕೇರಿಯ ಆಜಾದ್ ನಗರದಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಬಟ್ಟೆ ವಿತರಣೆ ಮಾಡಲಾಯಿತು.
ಜಿಲ್ಲಾಸ್ಪತ್ರೆಯ ಉಪ ವೈದ್ಯಾಧಿಕಾರಿ ಡಾ. ದೇವದಾಸ್ ವೃದ್ಧಾಶ್ರಮದ ಹಿರಿಯರಿಗೆ ವಾರಕ್ಕೊಂದು ಬಾರಿ ವೈದ್ಯಕೀಯ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಕೆ. ವೀರಭದ್ರಯ್ಯ ಮಾತನಾಡಿ, ಡಾ. ಅಂಬೇಡ್ಕರ್ ಜಯಂತಿಯ ಪ್ರಯುಕ್ತ 19 ವರ್ಷಗಳಿಂದ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯರಿಗೆ ಬಟ್ಟೆಗಳನ್ನು ವಿತರಿಸಿಕೊಂಡು ಬರುತ್ತಿದ್ದೇವೆ ಎಂದರು.
ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಮಿತಿ ವತಿಯಿಂದ ಡಾ. ದೇವದಾಸ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಲ್ಲದೆ 17 ಮಂದಿ ಹಿರಿಯ ನಾಗರಿಕರಿಗೆ ಬಟ್ಟೆ ವಿತರಣೆ ಮಾಡಲಾಯಿತು. ಸಮಿತಿಯ ತಾಲೂಕು ಸಂಚಾಲಕ ದೀಪಕ್, ವೃದ್ಧಾಶ್ರಮದ ಮುಖ್ಯಸ್ಥ ಸತೀಶ್, ಪ್ರಮುಖರಾದ ಖಲೀಲ್ ಹಾಜರಿದ್ದರು.