ಕುಶಾಲನಗರ, ಜೂ. 12: ಕುಶಾಲನಗರ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಬದಿಯಲ್ಲಿರುವ ಕಟ್ಟಡದ ಭೂಮಿಯೊಳಗೆ ಹುದುಗಿರುವ ವಿಗ್ರಹ ಹೊರತೆಗೆಯಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯೊಬ್ಬಳು ಉಪವಾಸ ಸತ್ಯಾಗ್ರಹ ಹೂಡಿರುವ ಘಟನೆ ನಡೆದಿದೆ.
ಪ್ರಸ್ತುತ ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿ ಕಾರ್ಯ ನಿರ್ವಹಿಸುತ್ತಿರುವ ಬಾಡಿಗೆ ಕಟ್ಟಡದ ಹಿಂಭಾಗದಲ್ಲಿದ್ದ ಕಟ್ಟಡದ ಕೆಳಭಾಗದಲ್ಲಿ 16-17ನೇ ಶತಮಾನದ ದೇವರ ವಿಗ್ರಹ ಹುದುಗಿದೆ, ಇದನ್ನು ತಕ್ಷಣ ಹೊರತೆಗೆಯಬೇಕು ಎಂದು ಒತ್ತಾಯಿಸಿರುವ ಮಹಿಳೆ ಮುಬೀನ್ ತಾಜ್ ಪ್ರತಿಭಟನೆ ಕೈಗೊಂಡಿದ್ದಾರೆ.
ಕೆಲವು ವರ್ಷಗಳ ಕಾಲ ತಾನು ಬಾಡಿಗೆಗೆ ನಡೆಸುತ್ತಿದ್ದ ಶಾಲೆಯ ತರಗತಿ ಕೊಠಡಿಯ ಭೂಮಿಯೊಳಗೆ ಮಹಾಕಾಳಿ ವಿಗ್ರಹ ಇದೆ. ಅದನ್ನು ಹೊರತೆಗೆಸಬೇಕೆನ್ನುವುದು ಮಹಿಳೆಯ ವಾದವಾಗಿದೆ. ಇದಕ್ಕೆ ಸಂಬಂಧಿಸಿದಂತೆ 2017 ರಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದರು.
ಇದೀಗ ಮತ್ತೊಮ್ಮೆ ತನ್ನ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಬೀನ್ ತಾಜ್ ಪಂಚಾಯಿತಿ ಕಚೇರಿಯೊಳಗೆ ಕುಳಿತು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್, ಉಪವಾಸ ಕೂತಿರುವ ಮಹಿಳೆ ಮುಬೀನ್ ತಾಜ್ ಮನವಿಯ ಬಗ್ಗೆ ಈ ಹಿಂದಿನಿಂದಲೇ ಹಲವು ಬಾರಿ ಸ್ಥಳದ ಕಡತಗಳನ್ನು ಪರಿಶೀಲಿಸಲಾಗಿದೆ. ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಭೂಮಿಯಾಗಿದ್ದು ತಮ್ಮ ಕಚೇರಿಗೂ ಈ ಪ್ರಕರಣಕ್ಕೂ ಯಾವದೇ ರೀತಿಯ ಸಂಬಂಧ ಇರುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.