ಮಡಿಕೇರಿ, ಜೂ. 11: ಇತ್ತೀಚೆಗೆ ಮಡಿಕೇರಿ ತಾಲೂಕಿನ ಕೆಲವು ಹಾಗೂ ವೀರಾಜಪೇಟೆ ತಾಲೂಕಿನ ಕೆಲವು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಬಗ್ಗೆ ಯಾವದೇ ಆತಂಕ ಪಡಬೇಕಿಲ್ಲ ಎಂದು ಜನತೆಗೆ ಅಭಯ ನೀಡಿದ್ದಾರೆ.
ಈಚೆಗೆ ನಡೆದ ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಸದಸ್ಯ ಬಾನಂಡ ಪ್ರಥ್ಯು ಅವರು, ಇತ್ತೀಚೆಗೆ ಕೆಲವು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಈ ಬಗ್ಗೆ ಮಾಹಿತಿ ಇದೆಯಾ? ಭೂಕಂಪನ ವನ್ನು ಪತ್ತೆ ಹಚ್ಚಲು ದಕ್ಷಿಣ ಕೊಡಗಿನಲ್ಲಿ ಯಾವದಾದರೂ ಸಾಧನ ಇದೆಯಾ? ಕಳೆದ ವರ್ಷ ಇದೇ ಸಮಯದಲ್ಲಿ ಮಕ್ಕಂದೂರು ಮುಂತಾದೆಡೆ ಭೂಕಂಪನ ಆಗಿತ್ತು. ನಂತರದಲ್ಲಿ ಸಾಕಷ್ಟು ಕಷ್ಟ ನಷ್ಟ ಉಂಟಾಗಿದೆ ಎಂದು ಗಮನ ಸೆಳೆದರು. ಪ್ರತಿಕ್ರಿಯಿಸಿದ ಸಿಇಓ ಲಕ್ಷ್ಮಿಪ್ರಿಯ ಅವರು, ದಕ್ಷಿಣ ಕೊಡಗಿನಲ್ಲಿ ಯಾವದೇ ಸಾಧನ ಇಲ್ಲ. ಹಾರಂಗಿಯಲ್ಲಿ ರಿಕ್ಟರ್ ಮಾಪಕ ಇದ್ದು, ಭೂಕಂಪನವಾದರೆ ಅಲ್ಲಿ ದಾಖಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಪ್ರತಿಕ್ರಿಯಿಸಿದ ಸಂಬಂಧಿಸಿದ ಅಧಿಕಾರಿ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನ ಕೆಲವೆಡೆಗಳಲ್ಲಿ ಭೂಕಂಪನ ಆಗಿರುವ ಬಗ್ಗೆ ಜನರು ಅನುಭವಗಳನ್ನು ಹೇಳಿ ದ್ದಾರೆ. ಆದರೆ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ ಒಂದಕ್ಕಿಂತ ಕಡಿಮೆ ಇದ್ದಲ್ಲಿ ದಾಖಲಾಗುವದಿಲ್ಲ. ಇದರಿಂದ ಯಾವದೇ ಅಪಾಯವೂ ಇಲ್ಲ. ಭೂಮಿ ಕಂಪಿಸಿದ ಸಂದರ್ಭದಲ್ಲಿ ಭಾರೀ ಗುಡುಗು ಸಿಡಿಲಿನ ಆರ್ಭಟವಿತ್ತೆಂದು ಗ್ರಾಮದ ಹಿರಿಯರು ಅನುಭವ ಹೇಳಿಕೊಂಡಿದ್ದಾರೆ. ಗುಡುಗಿನ ಸದ್ದಿಗೆ ಬಾಗಿಲು, ಕಿಟಕಿ, ಪಾತ್ರೆಗಳು ಅಲುಗಾಡಿರುವ ಸಾಧ್ಯತೆಯೂ ಇರಬಹುದು ಭೂಕಂಪನ ಆಗಿರುವ ಸಾಧ್ಯತೆ ಕಡಿಮೆ ಎಂದು ಹೇಳಿದರು.
ಸಿಇಓ ಲಕ್ಷ್ಮಿಪ್ರಿಯ ಅವರು ಈ ಸಂದರ್ಭದಲ್ಲಿ ಮಾತನಾಡಿ, ಈ ಬಾರಿ ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಜನರ ರಕ್ಷಣೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎನ್ಡಿಆರ್ಎಫ್ ತಂಡದವರು ಜಿಲ್ಲೆಗೆ ಆಗಮಿಸಿದ್ದು, ಗ್ರಾಮ ಮಟ್ಟದಲ್ಲಿ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗಿದೆ.
ಮಂಗಳೂರಿನಿಂದಲೂ ಮತ್ತೊಂದು ತಂಡ ಬರಲಿದೆ. ಅಲ್ಲದೇ ಆಯಾ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ತಾ.ಪಂ., ಜಿ.ಪಂ. ಪ್ರತಿನಿಧಿಗಳಿಗೆ ಜಿಲ್ಲಾಡಳಿತದ ಮೂಲಕ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರುಗಳು, ಅಧಿಕಾರಿಗಳು ಭಾಗವಹಿಸಿದ್ದರು.