ಮಡಿಕೇರಿ, ಜೂ. 11: ಕರ್ನಾಟಕ ರಾಜ್ಯ ಫೆನ್ಸಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಫೆನ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಕೊಡಗು ಜಿಲ್ಲೆಯ ಯುವ ಫೆನ್ಸಿಂಗ್ ಪಟುಗಳು (ಕತ್ತಿವರಸೆ) ಹಲವು ಪದಕಗಳನ್ನು ಗಳಿಸಿ ಸಾಧನೆ ತೋರಿದ್ದಾರೆ.
20 ವರ್ಷ ಹಾಗೂ 17 ವರ್ಷ ವಯೋಮಿತಿಯೊಳಗಿನ ಸ್ಪರ್ಧೆಯಲ್ಲಿ ಸೆಟರ್ ವಿಭಾಗದಲ್ಲಿ ಕೊಡಂದೆರ ಅಯ್ಯಪ್ಪ ಎರಡು ಚಿನ್ನದ ಪದಕ, ಸೀನಿಯರ್ ವಿಭಾಗ ಹಾಗೂ 20ರ ವಯೋಮಿತಿಯೊಳಗಿನ ಸ್ಪರ್ಧೆಯಲ್ಲಿ ಇಪಿ ವಿಭಾಗದಲ್ಲಿ ಕೆಚ್ಚೆಟ್ಟೀರ ವಿಜಯ್ ಉತ್ತಯ್ಯ ಎರಡು ಚಿನ್ನದ ಪದಕ ಗಳಿಸಿದ್ದಾರೆ.
ಸೀನಿಯರ್ ಹಾಗೂ 20ರ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ (ಫಾಯಿಲ್) ಚೆಪ್ಪುಡೀರ ಶಾವರಿ ಪೂಣಚ್ಚ ಒಂದು ಬೆಳ್ಳಿ ಹಾಗೂ ಕಂಚು, 14 ವರ್ಷ ವಯೋಮಿತಿಯೊಳಗಿನ ಇಪಿ ವಿಭಾಗದ ಸ್ಪರ್ಧೆಯಲ್ಲಿ ಚೆಂಬಾಂಡ ತಮ್ಮಯ್ಯ ಕಂಚು, ಬಾಲಕಿಯರ ವಿಭಾಗದ ಫಾಯಿಲ್ ಸ್ಪರ್ಧೆಯಲ್ಲಿ ಪೆಮ್ಮುಡಿಯಂಡ ಟೆನ್ಸಿ ತಂಗಮ್ಮ ರಜತ ಪದಕ ಗಳಿಸುವ ಮೂಲಕ ಕೊಡಗು ಜಿಲ್ಲೆಯ ಈ ಯುವ ಫೆನ್ಸಿಂಗ್ (ಕತ್ತಿವರಸೆ) ಪಟುಗಳು ಉತ್ತಮ ಸಾಧನೆ ತೋರಿ ಗಮನ ಸೆಳೆದಿದ್ದಾರೆ.
ಈ ಹಿಂದೆಯೂ ಫೆನ್ಸಿಂಗ್‍ನಲ್ಲಿ ಸಾಧನೆ ತೋರಿರುವ ಕೆಚ್ಚೆಟ್ಟೀರ ವಿಜಯ್ ಉತ್ತಯ್ಯ ಹಾಗೂ ಕೊಡಂದೆರ ಅಯ್ಯಪ್ಪ ತಲಾ ಎರಡು ಚಿನ್ನದ ಪದಕ ಗಳಿಸಿ ಪಾರುಪತ್ಯ ತೋರಿರುವದು ವಿಶೇಷವಾಗಿದೆ. ವಿಜಯ್ ಕೆಚ್ಚೆಟ್ಟೀರ ರವಿದೇವಯ್ಯ ಹಾಗೂ ರೇಷ್ಮಾ ದಂಪತಿಯ ಪುತ್ರನಾಗಿದ್ದರೆ, ಅಯ್ಯಪ್ಪ ಕೊಡಂದೆರ ಹಾಗೂ ಸರಿತಾ ದಂಪತಿಯ ಪುತ್ರ. ಚೆಂಬಾಂಡ ತಮ್ಮಯ್ಯ, ಸಂತೋಷ್ ಹಾಗೂ ಸಂಜನಾ ದಂಪತಿಯ ಪುತ್ರ. ಟೆನ್ಸಿ ಪೆಮ್ಮುಡಿಯಂಡ ಹ್ಯಾರಿ ಹಾಗೂ ಡೈಸಿ ದಂಪತಿಯ ಪುತ್ರಿಯಾಗಿದ್ದು, ಶಾವರಿ ಪೂಣಚ್ಚ ಹಾಗೂ ಸವಿತಾ ದಂಪತಿಯ ಪುತ್ರಿ.