ಕೂಡಿಗೆ, ಜೂ. 10: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳಿಗೆ ನಡೆಸಿದ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ) ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯ ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಅಳುವಾರ ಗ್ರಾಮದ ಡಿ.ಆರ್. ಫಣೀಂದ್ರ ರಾಷ್ಟ್ರೀಯ ಮಟ್ಟದಲ್ಲಿ 36ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾನೆ.ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್(ಮೊದಲ ಪುಟದಿಂದ) ಚಿಕ್ಕಅಳುವಾರದ ರಮೇಶ್ ಮತ್ತು ಕೆ.ಎಸ್.ಮಧುರ ದಂಪತಿಯ ಪುತ್ರರಾಗಿರುವ ಡಿ.ಆರ್.ಫಣೀಂದ್ರ ಹಾಸನದ ಮಾವಿನಕೆರೆ ನವೋದಯ ವಿದ್ಯಾಲಯದಲ್ಲಿ ಎಸ್‍ಎಸ್‍ಎಲ್‍ಸಿ ಅಭ್ಯಾಸ ನಡೆಸಿ, ಮಹಾರಾಷ್ಟ್ರದ ಪುಣೆಯಲ್ಲಿ ದಕ್ಷಣಾ ಪೌಂಡೇಶನ್ ಜವಹರ ನವೋದಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿ ನಂತರ ನೀಟ್ ಪರೀಕ್ಷೆ ಬರೆದಿದ್ದ. ಡಿ.ಆರ್.ಫಣೀಂದ್ರ ಅವರ ತಂದೆ ರಮೇಶ್ ಆಲೂರು ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿದ್ದು, ತಾಯಿ ಮಧುರ ಕೆಪಿಟಿಸಿಎಲ್ ಕಿರಿಯ ಇಂಜಿನಿಯರ್ ಆಗಿದ್ದಾರೆ. ಇವರು ಪ್ರಸ್ತುತ ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ವಾಸವಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಆರ್.ಫಣೀಂದ್ರ ವಿಜ್ಞಾನ ವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡಿ ವೈದ್ಯನಾಗಿ ಸಮಾಜದ ಕಡುಬಡವರಿಗೆ ವೈದ್ಯಕೀಯ ಸೇವೆ ಮಾಡುವ ಆಸೆ ನನಗಿದೆ ಎಂದರು.