*ಗೋಣಿಕೊಪ್ಪಲು, ಜೂ. 10 : ಕಸ್ತೂರಿ ರಂಗನ್ ವರದಿ ಬಗೆಯ ಆತಂಕವನ್ನು ನಿವಾರಿಸುತ್ತೇವೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ತಾಲೂಕು ಬಿಜೆಪಿ ಮಂಡಳ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕೊಡಗಿನ ಅಭಿವೃದ್ಧಿ ನನ್ನ ಕನಸು, ಇಲ್ಲಿನ ಬೆಳೆಗಳಾದ ಕಾಫಿ, ಕರಿ ಮೆಣಸುಗಳಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಸಿಗುವಂತೆ ಮಾಡುವುದು ನನ್ನ ಮುಂದಿನ ಕನಸು. ಕೊಡಗಿನ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲೆ ಅಭಿವೃದ್ಧಿ ಕಾಣಬೇಕಾದರೆ ಉತ್ತಮ ರಸ್ತೆ, ರೈಲ್ವೆ ವ್ಯವಸ್ಥೆಗಳು ಬೇಕು. ಹೀಗಾಗಿ ಕೊಡಗಿನಲ್ಲಿ ಅಂತರ್ ರಾಷ್ಟ್ರೀಯ ಹೆದ್ದಾರಿಯನ್ನು ಮೈಸೂರಿನಿಂದ ತಲಕಾವೇರಿಯವರೆಗೆ ಮತ್ತು ಕರಿಕೆಯಿಂದ ಕುಟ್ಟದವರೆಗೆ ಅಭಿವೃದ್ಧಿ ಪಡಿಸಲಾಗುವದು. ಮೈಸೂರಿನಿಂದ ಕುಶಾಲನಗರದ ವರೆಗೆ ರೈಲ್ವೆ ಮಾರ್ಗಕ್ಕೆ ಈಗಾಗಲೇ ಅನುಧಾನ ಬಿಡುಗಡೆಗೊಂಡಿದೆ. ಕಾಮಗಾರಿ ಶ್ರೀಘ್ರದಲ್ಲೇ ಪ್ರಾರಂಭಿಸಲಾಗುವದು. ಜಿಲ್ಲೆಯಲ್ಲಿ ರಸ್ತೆ ಹಾಗೂ ರೈಲ್ವೆ ಮಾರ್ಗಗಳಿಂದ
(ಮೊದಲ ಪುಟದಿಂದ) ಯಾವದೇ ಪರಿಸರ ಹಾನಿ ಉಂಟಾಗುವದಿಲ್ಲ. ಅಭಿವೃದ್ಧಿಗೆ ವಿರೋಧಿಸದೆ ಜಿಲ್ಲೆಯ ಜನತೆಯು ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಈ ಬಾರಿಯ ಗೆಲವು ನನ್ನ ಗೆಲುವಲ್ಲ, ಕಾರ್ಯಕರ್ತರ ಶ್ರಮದ ಫಲ. ಜಿಲ್ಲೆಯ ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು, ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸುತ್ತೇನೆ. ಜಿಲ್ಲೆಯ ಜನತೆಯೊಡನೆ ಸದಾ ಸಂಪರ್ಕದಲ್ಲಿದ್ದು, ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಹೇಳಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ನಿರೀಕ್ಷೆಗೂ ಮೀರಿ ಲೋಕಸಭಾ ಕ್ಷೇತ್ರದ ಗೆಲವು ಸಾಧಿಸಿದ್ದೇವೆ. ಇದು ಜಿಲ್ಲೆಯ ಜನತೆ ಬಿಜೆಪಿ ಪಕ್ಷಕ್ಕೆ ತೋರಿದ ವಿಶ್ವಾಸವಾಗಿದೆ. ಜನರ ವಿಶ್ವಾಸಕ್ಕೆ ದ್ರೋಹವಾಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳನ್ನು ಬಳಸಿ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆ ಗಳನ್ನು ಜನರಿಗೆ ನೇರವಾಗಿ ತಲಪಿಸುವದು ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯವಾಗಿದೆ. ಜನಪ್ರತಿನಿಧಿಗಳಿಗೆ ಇರುವಷ್ಟೇ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಎಡಬಿಡಂಗಿ ಸರ್ಕಾರದಲ್ಲಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೊಂದು ದೊಡ್ಡ ಸವಾಲಾಗಿದೆ. ಅಭಿವೃದ್ಧಿ ಕಾರ್ಯಗಳು ನಡೆಯಲು ತೊಡಕಾಗುತ್ತಿದೆ. ಈ ಎಡಬಿಡಂಗಿ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನೀಲ್ ಸುಬ್ರಮಣಿ ಮಾತನಾಡಿ ಭ್ರಷ್ಟ ಆಡಳಿತದಿಂದ ಬೇಸತ್ತು ಹೋಗಿದ್ದ ಜನತೆ ಬಿಜೆಪಿ ಪಕ್ಷದ ಬಗ್ಗೆ ಭರವಸೆ ಹೊಂದಿ ಎರಡು ಭಾರಿ ಮೋದಿ ಸರ್ಕಾರವನ್ನು ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ ಬಹುಮv Àದಿಂದ ಗೆಲವು ಸಾಧಿಸಿದ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಜವಾಬ್ದಾರಿಯಿದೆ. ಎಚ್ಚರದಿಂದ ಪ್ರತಿಯೊಬ್ಬ ಕಾರ್ಯಕರ್ತನು ಪಕ್ಷ ನಿಷ್ಠೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಜನರು ಮೋದಿ ಸರ್ಕಾರದ ಬಗೆಗಿಟ್ಟ ಭರವಸೆ ಈಡೇರಲಿದೆ ಎಂದರು.
ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ಭೀಮಯ್ಯ ಪ್ರಾಸ್ತವಿಕ ನುಡಿಯಲ್ಲಿ ಇದು ಒಬ್ಬನ ಗೆಲವಲ್ಲ. ಪ್ರತಿಯೊಬ್ಬ ಕಾರ್ಯಕರ್ತನ ಗೆಲುವಾಗಿದೆ ಎಂದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಟ್ಟಣದ ಮುಖ್ಯ ಬೀದಿಯಲ್ಲಿ ಕಾರ್ಯಕರ್ತರು ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದವರೆಗೆ ವಿಜಯೋತ್ಸವದ ಮೆರವಣಿಗೆ ನಡೆಸಿದರು.
ವೇದಿಕೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿಯಕ್ಪೂವಂಡ ಬೋಪಣ್ಣ, ವೀರಾಜಪೇಟೆ ತಾ.ಪಂ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ, ರಾಜ್ಯ ಬಿಜೆಪಿ ಸದಸ್ಯೆ ರೀನಾ ಪ್ರಕಾಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ವರ್ತಕರ ಪ್ರಕೋಷ್ಟ ಅಧ್ಯಕ್ಷ ಕಾಡೇಮಾಡ ಗಿರೀಶ್ ಗಣಪತಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ಸತೀಶ್, ಮಾಚಿಮಂಡ ಸುವೀನ್ ಗಣಪತಿ, ಮಾಜಿ ಜಿಲ್ಲಾಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಲಾಲಾ ಭೀಮಯ್ಯ, ಕುಂಬೆಯಂಡ ಗಣೇಶ್ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಅಜಿತ್ ಕರುಂಬಯ್ಯ, ಮಹಿಳಾ ಮೋರ್ಚಾದ ಚೇಂದಂಡ ಸುಮಿ ಸುಬ್ಬಯ್ಯ, ಆರ್.ಎಂ.ಸಿ. ಅಧಕ್ಷ ಆದೇಂಗಡ ವಿನು ಚಂಗಪ್ಪ, ಹಿರಿಯರಾದ ಚೋಟು ಕಾವೇರಪ್ಪ ಹಾಜರಿದ್ದರು.