ಮಡಿಕೇರಿ, ಜೂ. 10: ಮುಂಗಾರು ಮಳೆ ಕಾಲಿಡುವದು ಪ್ರಾಕೃತಿಕವಾಗಿ ಸಹಜವೇ ಆಗಿದ್ದರೂ, ಮಡಿಕೇರಿ ನಗರಸಭೆಯ ಹೊಣೆಗಾರಿಕೆಯ ನಿರ್ಲಕ್ಷ್ಯತನದಿಂದ ಸ್ಥಳೀಯ ನಾಗರಿಕರೊಂದಿಗೆ, ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯತ್ತ ಎಲ್ಲೆಡೆಯಿಂದ ಆಗಮಿಸುವ ಜನತೆ ತೀವ್ರ ತೊಂದರೆಗೆ ಸಿಲುಕುವಂತಾಗಿದೆ. ಒಂದು ರೀತಿಯಲ್ಲಿ ನಗರಸಭೆ ಆಡಳಿತ ಜವಾಬ್ದಾರಿ ಮರೆತು ಜನಸಾಮಾನ್ಯರನ್ನು ನರಕದೆಡೆಗೆ ತಳ್ಳಿರುವಂತೆ ಭಾಸವಾಗತೊಡಗಿದೆ.

ಇಲ್ಲಿ ಮುಖ್ಯವಾಗಿ ಕಳೆದ ವರ್ಷ, ಇಲ್ಲಿನ ಹಳೆಯ ಬಸ್ ನಿಲ್ದಾಣ ಮೇಲ್ಭಾಗದ ಬರೆ ಕುಸಿತದೊಂದಿಗೆ ಎದುರಾಗಿರುವ ತೊಂದರೆಗೆ ಈ ತನಕ ಪರ್ಯಾಯ ಕ್ರಮ ವಹಿಸದೆ ಜನಹಿತ ಕಡೆಗಣಿಸಿರುವದು ಸ್ಪಷ್ಟವೆಂದು ಸ್ಥಳೀಯರು ಬೊಟ್ಟು ಮಾಡಿದ್ದಾರೆ. ವರ್ತಕ ಸಮೂಹದೊಂದಿಗೆ ಖಾಸಗಿ ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಭರತ್ ಹಾಗೂ ಸಲಾಂ ಇತ್ತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಳೆಯ ಬಸ್ ನಿಲ್ದಾಣದ ಕಟ್ಟಡದೊಂದಿಗೆ ಶೌಚಾಲಯಗಳನ್ನು ಒಡೆದು ಹಾಕಿರುವ ನಗರಸಭೆ ಆಡಳಿತವು, ಕಳೆದ ಒಂಭತ್ತು ತಿಂಗಳಿನಿಂದ ಇಲ್ಲಿಗೆ ದೂರದ ಊರುಗಳಿಂದ ಬರುವ ಪ್ರಯಾಣಿಕರಿಗೆ ಬಿಸಿಲು-ಮಳೆಯಿಂದ ಕನಿಷ್ಟ ಆಸರೆಗೂ ವ್ಯವಸ್ಥೆ ರೂಪಿಸಿಲ್ಲವೆಂದು ಟೀಕಿಸಿದ್ದಾರೆ.

ಪರಿಣಾಮ ನೂರಾರು ಶಾಲಾ-ಕಾಲೇಜು ಹೆಣ್ಣುಮಕ್ಕಳ ಸಹಿತ ಮಹಿಳೆಯರು ನಿತ್ಯ ಬಸ್‍ನಲ್ಲಿ ಬಂದಿಳಿದು ತುರ್ತು ಕೆಲಸಗಳಿಗೆ ಪರದಾಡುವಂತಾಗಿದೆ ಎಂದು ನೆನಪಿಸಿದ್ದಾರೆ. ಅಲ್ಲದೆ ಗ್ರಾಮೀಣ ಜನತೆ, ವೃದ್ಧರು, ಹಿರಿಯ ನಾಗರಿಕರು ಬಿಸಿಲು ಹಾಗೂ ಮಳೆಯಲ್ಲಿ ಹಳೆಯ ಬಸ್ ನಿಲ್ದಾಣದ ಯಾವ ಕಡೆಯೂ ನಿಲುಗಡೆಗೆ ಸ್ಥಳವಿಲ್ಲದೆ ಗಂಟೆಗಟ್ಟಲೆ ಬಸ್ಸಿಗಾಗಿ ದೂರದ ಊರುಗಳಿಗೆ ತೆರಳಲು ಬಳಲುವಂತಾಗಿದೆ ಎಂದು ಉದಾಹರಿಸಿದ್ದಾರೆ.

ನೂತನ ನಿಲ್ದಾಣದಲ್ಲೂ ನರಕ: ಇನ್ನು ನಗರಸಭೆ ರೂ. 5 ಕೋಟಿ ವ್ಯಯ ಮಾಡಿ ಹೆಸರಿಗಷ್ಟೇ ನೂತನ ಬಸ್ ನಿಲ್ದಾಣ ಹೆಸರಿನಲ್ಲಿ ‘ಶೆಡ್’ವೊಂದನ್ನು ನಿರ್ಮಿಸಿದ್ದು, ಮಳೆಯ ನಡುವೆ ಇಲ್ಲಿ ನಿಂತುಕೊಳ್ಳಲು ಕೂಡ ಸಾಧ್ಯವಿಲ್ಲವೆಂದು ಗಮನ ಸೆಳೆದಿದ್ದಾರೆ. ಬಸ್ ಕಾರ್ಮಿಕರ ಸಹಿತ ಬಹಳಷ್ಟು ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ.

ಇನ್ನೊಂದೆಡೆ ಇಂದು ಈಗಷ್ಟೇ ಮಳೆಯ ಮುನ್ಸೂಚನೆ ಗೋಚರಿಸಿದ್ದು, ಮಡಿಕೇರಿ ನಗರದ ಯಾವ ರಸ್ತೆಯಲ್ಲಿಯೂ ಪಾದಚಾರಿಗಳು ಸಂಚರಿಸಲು ಅಸಾಧ್ಯವಾಗಿದೆ. ಎಲ್ಲೆಂದೆರಲ್ಲಿ ಕೆಸರು, ಗುಂಡಿ, ಹೊಂಡಗಳ ನಡುವೆ ವಾಹನಗಳ ಸಂಚಾರದಿಂದ ರಾಚುತ್ತಿರುವ ಕೊಳಕಿನ ನಡುವೆ ನರಕ ಅನುಭವಿಸುವಂತಾಗಿದೆ ಎಂದು ‘ಶಕ್ತಿ’ಯೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.