ಮಡಿಕೇರಿ, ಜೂ. 10: ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದರೊಂದಿಗಿನ ಮಹತ್ವದ ಸಭೆ ತಾ. 12 ರಂದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿನ ಪ್ಲಾಂಟರ್ಸ್ ಕ್ಲಬ್‍ನಲ್ಲಿ ಮಧ್ಯಾಹ್ನ 3.30 ಗಂಟೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಆಯೋಜಿಸಲಾಗಿದೆ.

ಸಭೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶೋಭಾಕರಂದ್ಲಾಜೆ, ಪ್ರಜ್ವಲ್ ರೇವಣ್ಣ, ತೇಜಸ್ವಿ ಸೂರ್ಯ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಸಿ.ಟಿ. ರವಿ, ಎಂ.ಪಿ. ಕುಮಾರಸ್ವಾಮಿ, ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್, ವಿಧಾನಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ್, ಗೋಪಾಲಸ್ವಾಮಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇ ಗೌಡ ಪಾಲ್ಗೊಳ್ಳಲಿದ್ದಾರೆ. ನೂತನ ವಾಗಿ ಲೋಕಸಭೆಗೆ ಆಯ್ಕೆಯಾದ ಸಂಸದರನ್ನು ಈ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರ ಪರವಾಗಿ ಅಭಿನಂದಿಸಿ ಸಂಸದ ರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾಫಿ ಉದ್ಯಮವು ಹಲವಾರು ವರ್ಷಗಳಿಂದ ಬೆಲೆ ಇಳಿಕೆ. ಹವಾಮಾನ ವೈಪರಿತ್ಯ, ಕಾರ್ಮಿಕರ ಭವಣೆ, ವನ್ಯಜೀವಿಗಳ ಉಪಟಳ, ಬ್ಯಾಂಕ್‍ಗಳ ಕಾಟ, ಬೆಳೆ ವಿಮೆ, ಭೂ ಒತ್ತುವರಿ ಸಮಸ್ಯೆಗಳಿಂದ ನಲುಗುತ್ತಿದೆ. 10 ವರ್ಷಗಳಿಂದ ಕಾಫಿ ಬೆಲೆಯಲ್ಲಿ ಯಾವದೇ ಬದಲಾವಣೆಯಾಗದೇ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿ ದ್ದಾರೆ. ಕಾರ್ಮಿಕರ ವೇತನ, ರಸಗೊಬ್ಬರ ಮತ್ತು ಯಂತ್ರೋಪ ಕರಣಗಳ ಬೆಲೆ ಹೆಚ್ಚಾಗುತ್ತಲೇ ಇದೆ. ಕಾಫಿಯ ಉಪಬೆಳೆಯಾದ ಕಾಳುಮೆಣಸು ಆಮದಿನಿಂದಾಗಿ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಇಂಥ ಹಲವಾರು ಸಂಕಷ್ಟದಲ್ಲಿ ಕಾಫಿ ತೋಟ ನಿರ್ವಹಿಸಲಾಗದ ಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ. ಈ ಸಮಸ್ಯೆ ಯಿಂದಾಗಿ ಸರ್ಕಾರದ ಬೊಕ್ಕಸಕ್ಕೂ ಆದಾಯ ಕಡಮೆಯಾಗುತ್ತಿದೆ. ಇಂಥ ಸಮಸ್ಯೆಗಳ ಬಗ್ಗೆ ಸಂಸದರ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತದೆ.

ಕರ್ನಾಟಕ ಬೆಳೆಗಾರರ ಒಕ್ಕೂಟವು ಎಲ್ಲಾ ಬೆಳೆಗಾರರಿಗೂ ಸಂಸದರೊಂದಿಗೆ ಚರ್ಚಿಸಲು ಈ ಸಭೆಯ ಮೂಲಕ ವೇದಿಕೆ ಸೃಷ್ಟಿಸಿದ್ದು, ಬೆಳೆಗಾರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಸ್.ಮುರಳೀಧರ್ ಬಕ್ಕರವಳ್ಳಿ ಕೋರಿದ್ದಾರೆ.