ಕುಶಾಲನಗರ, ಜೂ. 10: ಅಕ್ರಮವಾಗಿ ನಂದಿ ಮರ ಸಾಗಾಟ ಮಾಡಿ ಮರದ ಮಿಲ್‍ಗೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ನಾಲ್ವರನ್ನು ಬಂಧಿಸಿ ಲಾರಿ ಮತ್ತು ಮರ ವಶಪಡಿಸಿಕೊಂಡ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.
ಸುಂಟಿಕೊಪ್ಪ ಸಮೀಪ ಬೊಯಿಕೇರಿ ಹೊರೂರು ಭಾಗದ ತೋಟವೊಂದರಿಂದ ದಾಖಲೆ ರಹಿತವಾಗಿ ಮರ ಸಾಗಿಸಿರುವ ಹಿನ್ನಲೆಯಲ್ಲಿ ಡಿಸಿಐಬಿ ಮತ್ತು ಕುಶಾಲನಗರ ಪೊಲೀಸರು ಜಂಟಿಯಾಗಿ ಮುಳ್ಳುಸೋಗೆ ಮಿಲ್‍ಗೆ ದಾಳಿ ಮಾಡಿ ಆರೋಪಿಗಳಾದ ಮುಳ್ಳುಸೋಗೆಯ ನಿಜಾಮುದ್ದಿನ್, ಚಾಲಕ ಹೊಸಕೋಟೆಯ ಹಂಸ, ಕೊಪ್ಪ ಗ್ರಾಮದ ನಿವಾಸಿ ಲತೀಫ್ ಮತ್ತು ಮಹಮ್ಮದ್ ಅಲಿ ಎಂಬವರನ್ನು ಬಂಧಿಸಿದ್ದಾರೆ. ಮರ ತುಂಬಿದ್ದ ಲಾರಿಯನ್ನು (ಕೆಎ.12.ಬಿ.3079) ವಶಪಡಿಸಿಕೊಳ್ಳಲಾಗಿದೆ.
ಲಾರಿಯಲ್ಲಿ ನಂದಿ ಮರದ 11 ಬೃಹತ್ ನಾಟಗಳನ್ನು ತೋಟದಿಂದ ಸ್ವಂತ ಉಪಯೋಗಕ್ಕೆಂದು ಅಕ್ರಮವಾಗಿ ಸಾಗಿಸಿ ಕುಶಾಲನಗರದ ಮುಳ್ಳುಸೋಗೆ ಮಿಲ್‍ಗೆ ತಂದಿದ್ದ ಸಂದರ್ಭ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ, ಡಿಸಿಐಬಿ ಇನ್ಸ್‍ಪೆಕ್ಟರ್ ನಾಗೇಶ್, ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದಲ್ಲಿ ಕುಶಾಲನಗರ ಠಾಣಾಧಿಕಾರಿ ಪಿ.ಜಗದೀಶ್, ಡಿಸಿಐಬಿಯ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಹಮೀದ್, ವೆಂಕಟೇಶ್, ಯೋಗೀಶ್, ನಿರಂಜನ್, ಅನಿಲ್, ವಸಂತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
.