ಶ್ರೀಮಂಗಲ, ಜೂ. 10: ಜಿಲ್ಲೆಯಲ್ಲಿ ಹಲವು ದಶಕದಿಂದ ಗಂಭೀರ ಸಮಸ್ಯೆ ಆಗಿರುವ ವನ್ಯ ಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟ, ಜನ- ಜಾನುವಾರುಗಳ ಜೀವ ಹಾನಿ ತಡೆಗೆ ಶಾಶ್ವತ ಯೋಜನೆ ರೂಪಿಸಲು ಸರ್ಕಾರ ಗಂಭೀರವಾಗಿ ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಕಾನೂನು ಹೋರಾಟ ನಡೆಸಲು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವದು ಅನಿವಾರ್ಯವಾಗಲಿದೆ ಎಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಎಚ್ಚರಿಸಿದ್ದಾರೆ.ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ಸಮಿತಿ ಆಶ್ರಯದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು. ವನ್ಯಪ್ರಾಣಿಗಳ ಹಾವಳಿ ದಿಢೀರಾಗಿ ಬಂದಂತ ಸಮಸ್ಯೆ ಅಲ್ಲ. ಹಲವು ದಶಕದಿಂದ ಈ ಸಮಸ್ಯೆ ಇದೆ. ವರ್ಷದಿಂದ ವರ್ಷಕ್ಕೆ ವನ್ಯ ಪ್ರಾಣಿಗಳು ಗ್ರಾಮಕ್ಕೆ ನುಗ್ಗಿ ಬೆಳೆ ನಷ್ಟ, ಜನ- ಜಾನುವಾರುಗಳ ಜೀವ ಹಾನಿ ಮಾಡುವ ಪ್ರಕರಣ ಹೆಚ್ಚಾಗುತ್ತಿz.É

ಆದರೆ ಸರ್ಕಾರಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಗಂಭೀರವಾಗಿ ಪ್ರಯತ್ನಿಸುತ್ತಿಲ್ಲ. ಕೊಡಗಿಗೆ ಅನಗತ್ಯ ಯೋಜನೆಗಳಿಗೆ ಕೋಟ್ಯಾಂತರ ಹಣ ವಿನಿಯೋಗಿಸಲು ಮುಂದಾಗಿರುವ ಸರ್ಕಾರ ಜನರ ದಿನನಿತ್ಯದ ಬದುಕಿಗೆ ಮಾರಕ ವಾಗಿರುವ ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟಲು ವೈಜ್ಞಾನಿಕವಾದ ಯೋಜನೆಯನ್ನು ರೂಪಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ಲಕ್ಯ್ಷ ತಾಳಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

(ಮೊದಲ ಪುಟದಿಂದ) ಸಂವಾದದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿ ಬಸಣ್ಣವರ್ ಅವರು ಬ್ರಹ್ಮಗಿರಿ ಅರಣ್ಯದ ಅಂಚಿನಲ್ಲಿ ಕಾಡಾನೆ ನುಸುಳುವದನ್ನು ತಡೆಗಟ್ಟಲು ಕಂದಕ ನಿರ್ಮಾಣ ಸಂದರ್ಭ ಬಂಡೆ ಕಲ್ಲುಗಳು ಸಿಕ್ಕುತಿದ್ದು ಎರಡು ಮೂರು ಅಡಿ ಮಾತ್ರ ಕಂದಕ ತೆಗೆಯಲು ಸಾಧ್ಯವಾಗುತ್ತಿದೆ. ಅಡಿಯಲ್ಲಿ ದೊಡ್ಡ ಬಂಡೆ ಕಲ್ಲುಗಳು ಇರುವದರಿಂದ ಕಂದಕ ಯೋಜನೆಗೆ ತೊಡಕಾಗಿದೆ ಎಂದು ಹೇಳಿದರು. ಇದಲ್ಲದೆ ಬ್ರಹ್ಮಗಿರಿ ಅರಣ್ಯದ ಅಂಚಿನಲ್ಲಿ ಹಲವು ಜಾಗದಲ್ಲಿ ಕಾಡಾನೆಗಳು ಅರಣ್ಯದಿಂದ ಗ್ರಾಮಕ್ಕೆ ನುಸುಳುತ್ತಿದ್ದು ಇದನ್ನು ತಡೆಗಟ್ಟಲು ಪ್ರಾಯೋಗಿಕವಾಗಿ ಮಂಚಳ್ಳಿ ವ್ಯಾಪ್ತಿಯಲ್ಲಿ ತೂಗು ಸೋಲರ್ ಬೇಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ನಿರ್ಮಿಸಲಾಗಿರುವ 120 ಮೀಟರ್ ಈ ಬೇಲಿ ಜಾಗದಲ್ಲಿ ಕಾಡಾನೆಗಳು ನುಸುಳುತಿಲ್ಲವೆಂದು ಮಾಹಿತಿ ನೀಡಿದರು. ಯಾವ ಜಾಗದಲ್ಲಿ ಕಾಡಾನೆಗಳು ಗ್ರಾಮಕ್ಕೆ ನುಸುಳುತ್ತಿವೆ ಎಂಬದನ್ನು ಈಗಾಗಲೇ ಗುರುತಿ¸ Àಲಾಗಿದ್ದು ಅಂತಹ ಸ್ಥಳಗಳಲ್ಲಿ ಕಾಡಾನೆ ನುಸುಳದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಸಾರ್ವಜನಿಕರ ಅಹವಾಲು ಕೇಳಿ ಮಾತಾನಾಡಿದ ಶ್ರೀಮಂಗಲ ಠಾಣಾಧಿಕಾರಿ (ಪ್ರಭಾರ) ಸಾಬು ಅವರು ನದಿ ತೋಡುಗಳಿಂದ ಮರಳನ್ನು ಸ್ವಂತ ಬಳಕೆಗೆ ತೆಗೆಯಲು ಯಾವದೇ ಅವಕಾಶ ಅಥವಾ ವಿನಾಯಿತಿ ನೀಡಲು ಕಾನೂನಿನಡಿ ಸಾಧ್ಯವಿಲ್ಲ. ಈ ಹಿಂದೆ ಮರಳು ಅಕ್ರಮ ಸಾಗಾಟ ಅಥವಾ ತೆಗೆಯುವ ಪ್ರಕರಣವನ್ನು ಪಿ.ಸಿ.ಆರ್. ಮೂಲಕ ಖಾಸಗಿ ಮೊಕದ್ದಮೆ ಮಾಡಲು ಆದೇಶವಿತ್ತು. ಆದರೆ ಇದೀಗ ಸುಪ್ರಿಂ ಕೋರ್ಟ್ ಆದೇಶದಂತೆ ಅಕ್ರಮ ಮರಳು ಸಾಗಾಟ ಅಥವಾ ತೆಗೆಯುವ ಪ್ರಕರಣವನ್ನು ಗಣಿ ಕಳವು ಪ್ರಕರಣದಡಿ ಕ್ರಿಮಿನಲ್ ಕೇಸ್ ಹಾಕಿ ಗಂಭೀರವಾಗಿ ಪರಿಗಣಿಸಲು ಆದೇಶವಿದೆ. ಮರಳು ಪ್ರಕರಣದ ಬಗ್ಗೆ ಸಡಿಲಿಕೆ ಸಾಧ್ಯವಿಲ್ಲ. ಸ್ವಂತ ಬಳಕೆಗೆ ಮರಳು ತೆಗೆಯುವ ಅವಕಾಶ ಕಲ್ಪಿಸುವ ಅಧಿಕಾರ ನಮ್ಮ ವ್ಯಾಪ್ತಿಗೆ ಇಲ್ಲ ಎಂದು ಹೇಳಿದರು.

ದಕ್ಷಿಣ ಕೊಡಗಿನ ಕೋತೂರು ಗ್ರಾಮದ ಲಕ್ಷಣ ತೀರ್ಥ ನದಿಯ ಯಾರ್ಡ್‍ನಲ್ಲಿ ಮರಳು ತೆಗೆಯಲು ಟೆಂಡರ್ ಆಗಿದ್ದು ಇದು ಹಲವು ಸಿವೀಲ್ ವ್ಯಾಜ್ಯದಿಂದ ವಿಳಂಬವಾಗಿದೆ ಈ ಸಮಸ್ಯೆ ಬಗೆ ಹರಿದರೆ ಸ್ಥಳೀಯರಿಗೆ ಮರಳು ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಗಾಂಜಾ ಹಾವಳಿಯಿಂದ ಯುವ ಸಮುದಾಯ ದುಶ್ಚಟಕ್ಕೆ ಬಲಿಯಾಗುತ್ತಿದೆ. ಈ ನಿಟ್ಟಿನಲ್ಲಿ ಇದರ ಹುಟ್ಟಡಗಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ, ಹುದಿಕೇರಿ ಪಟ್ಟಣದಲ್ಲಿ ಯಾವದೇ ಬಾರ್ ಅಥವಾ ಮಧ್ಯದ ಅಂಗಡಿ ಇಲ್ಲ. ಆದರೆ ಇಲ್ಲಿನ ಹಲವಾರು ಅಂಗಡಿಗಳಲ್ಲಿ ಮಧ್ಯ ಮಾರಾಟವಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳಿ. ಅಲ್ಲದೆ ಹುದಿಕೇರಿ ಸಮೀಪ ಹೈಸೂಡ್ಲೂರು ಜಂಕ್ಷನ್‍ನಲ್ಲಿ ಬಿರುನಾಣಿ ರಸ್ತೆಯಲ್ಲಿ ಬ್ಯಾರಿಕೇಡ್ ನಿರ್ಮಿಸುವ ಮೂಲಕ ವಾಹನ ಅಪಘಾತ ತಪ್ಪಿಸಲು ಮನವಿ ಮಾಡಿದರು.

ಕಂದಾಯ ಇಲಾಖೆಯ ವಿಚಾರಗಳ ¨ಗ್ಗೆ ಸಾರ್ವಜನಿಕರ ಅಹವಾಲಿಗೆ ಉತ್ತರಿಸಿದ ಗ್ರಾಮ ಲೆಕ್ಕಾಧಿಕಾರಿ ಬಸವಣ್ಣಗೌಡ ಅವರು ಶ್ರೀಮಂಗಲ ವ್ಯಾಪ್ತಿಯಲ್ಲಿ 4895 ಮಳೆ ನಷ್ಟದ ಪರಿಹಾರ ಕೋರಿ ಅರ್ಜಿ ಬಂದಿದ್ದು, ಇದರಲ್ಲಿ ಅರವತ್ತು ಅರ್ಜಿಗಳು ಆಧಾರ್ - ಬ್ಯಾಂಕ್ ಖಾತೆ ಜೋಡಣೆಯಾಗದೆ ಹಿಂದಕ್ಕೆ ಬಂದಿದ್ದು ಇದನ್ನು ಸರಿಪಡಿಸಲಾಗುತ್ತಿದೆ. ಬೆಳೆ ಪರಿಹಾರದಲ್ಲಿ ಹೆಚ್ಚು ಕಡಿಮೆ ಮೊತ್ತ ಉಂಟಾಗಲು ದೀರ್ಘಕಾಲಿಕ ಬೆಳೆ ಮತ್ತು ಮಳೆ ಆಶ್ರಿತ ಬೆಳೆಯೆಂದು ವಿಂಗಡಿಸಲಾಗಿರುವದು ಕಾರಣವಾಗಿದೆ. ಮಳೆ ಆಶ್ರಿತಕ್ಕೆ ಕಡಿಮೆ ಮೊತ್ತ ಹಾಗೂ ದೀರ್ಘಕಾಲಿಕಕ್ಕೆ ಹೆಚ್ಚಿನ ಪರಿಹಾರ ಬಂದಿದೆ ಎಂದು ಹೇಳಿದರು.

ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬೆಳೆ ಪರಿಹಾರದ ಗೊಂದಲ ನಿವಾರಿಸಿ ಹೆಚ್ಚಿನ ಪರಿಹಾರ ನೀಡುವದು, ಮರಳು ಸ್ವಂತ ಬಳಕೆಗೆ ತೆಗೆಯಲು ಅವಕಾಶ ಕಲ್ಪಿಸುವದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ತೀರ್ಮಾನಿಸ ಲಾಯಿತು. ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಬಾಚೀರ ಕಾಶಿ ಕಾರ್ಯಪ್ಪ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಮಾಣೀರ ವಿಜಯ್ ನಂಜಪ್ಪ, ಖಜಾಂಚಿ ಅಜ್ಜಿಕುಟ್ಟೀರ ಸುಬ್ರಮಣಿ, ತಾಲೂಕು ಉಪಾಧ್ಯಕ್ಷ ಬೊಟ್ಟಂಗಡ ಮಾಚಯ್ಯ, ಮಾಣೀರ ಮುತ್ತಪ್ಪ ಮತ್ತಿತರರು ಹಾಜರಿದ್ದರು.