ಮಡಿಕೇರಿ, ಜೂ. 10: 2019ರ ಲೋಕಸಭಾ ಚುನಾವಣೆ ಮುಕ್ತಾಯ ಗೊಂಡು ದೇಶದ ಮುಂದಿನ ಐದು ವರ್ಷಗಳ ಆಡಳಿತದ ಕುರಿತಾದ ವಿಚಾರ ಈಗಾಗಲೇ ನಿರ್ಧಾರವಾಗಿದೆ. ಈ ಬಾರಿ ನಡೆದ ಚುನಾವಣೆ ದೇಶಾದ್ಯಂತ ತೀವ್ರ ಕುತೂಹಲ ಸೃಷ್ಟಿಸಿತ್ತು. ಅದರಲ್ಲೂ ಕರ್ನಾಟಕ ರಾಜ್ಯದಲ್ಲಂತೂ ಮತ್ತೊಂದು ರೀತಿಯ ಸನ್ನಿವೇಶವಿದ್ದುದು ಎಲ್ಲರಿಗೂ ಅರಿವಿದೆ.

ಕರ್ನಾಟಕದಲ್ಲಿ ಕಳೆದ ವರ್ಷವಷ್ಟೆ ವಿಧಾನಸಭಾ ಚುನಾವಣೆ ನಡೆದಿದ್ದು ಇಲ್ಲಿ ಬಿಜೆಪಿ ಅಧಿಕ ಸ್ಥಾನಗಳಿಸಿತ್ತಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ರಾಜಕೀಯ ನಡೆಯಿಂದಾಗಿ ಬಿಜೆಪಿ ರಾಜ್ಯದಲ್ಲಿ ಸರಕಾರ ರಚಿಸುವಲ್ಲಿ ವಿಫಲವಾಗಿತ್ತು. ಬಿಜೆಪಿಯನ್ನು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವದರಿಂದ ತಪ್ಪಿಸಲು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತದಲ್ಲಿದೆ. ಆರಂಭದಲ್ಲಿ ದೋಸ್ತಿ ವಿಚಾರ ಉತ್ತಮ ರೀತಿಯಲ್ಲೇ ಇತ್ತಾದರೂ ನಂತರದ ದಿನಗಳಲ್ಲಿ ಆಂತರಿಕ ಕಿತ್ತಾಟಗಳು ಶುರುವಿಟ್ಟುಕೊಂಡು ರಾಜ್ಯ ರಾಜಕೀಯ ಮುಂದೇ ನಾಗಲಿದೆ ಎಂಬ ಕುತೂಹಲದ ನಡುವೆಯೇ ಲೋಕಸಭೆಗೆ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ‘ದೋಸ್ತಿ ಕಲಹ’ ತುಸು ತಣ್ಣಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಯೊಂದಿಗೆ ಚುನಾವಣೆಯನ್ನು ಎದುರಿಸಲು ಮುಂದಾದವು...

ಇದೀಗ ಫಲಿತಾಂಶ ಪ್ರಕಟಗೊಂಡು 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನ ಬಿಜೆಪಿಗೆ ಒಲಿದಿರುವದು ಈಗಿನ ಬೆಳವಣಿಗೆ ಇದಾದ ಬಳಿಕ ಮತ್ತೆ ದೋಸ್ತಿಗಳ ‘ಪೈಟ್’ ಶುರುವಾದಂತಿದೆ.

ಇದು ರಾಜ್ಯ ರಾಜಕೀಯದ ಸನ್ನಿವೇಶವಾದರೆ ಇತ್ತ ಕೊಡಗು ಜಿಲ್ಲೆಯಲ್ಲಿ ಮತ್ತೊಂದು ರೀತಿಯ ಪರಿಸ್ಥಿತಿ ಗೋಚರಿಸುತ್ತಿದೆ. ರಾಜ್ಯದಲ್ಲಿ ಮಿತ್ರ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಾದರೆ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷದ ಕಥೆ ಒಂದು ರೀತಿ ಜೆಡಿಎಸ್‍ನ ಪರಿಸ್ಥಿತಿ ಮತ್ತೊಂದು ರೀತಿಯಲ್ಲಿದೆ. ಈ ಎರಡು ಪಕ್ಷಗಳಿಗೆ ಹೋಲಿಸಿದರೆ ಕಮಲ ಪಾಳಯ ಮಾತ್ರ ಜಿಲ್ಲೆಯಲ್ಲಿ ಈ ಹಿಂದಿನಂತೆ ಸ್ಥಿರವಾಗಿದೆ. ಕಳೆದ ಎರಡು ಮೂರು ಅವಧಿಯಿಂದಲೂ ಬಿಜೆಪಿ ಶಾಸಕರು ಕೊಡಗಿನಲ್ಲಿ ಜಯಭೇರಿ ಬಾರಿಸುತ್ತಿದ್ದರೆ ಲೋಕಸಭೆಯ ಸ್ಥಾನದಲ್ಲೂ ಬಿಜೆಪಿ ಜಯಗಳಿಸಿ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. 2018ರಲ್ಲಿ ವಿಧಾನ ಸಭೆಗೆ ಚುನಾವಣೆ ಎದುರಾದ ಸಂದರ್ಭದಲ್ಲಿ ಜಿಲ್ಲೆಯ ರಾಜಕೀಯದಲ್ಲಿ ಹೊಸ ಸಂಚಲನ ಕಂಡು ಬಂದಿತ್ತು. ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳೆಡರಲ್ಲೂ ಜೆಡಿಎಸ್ ಪಕ್ಷದ ಅಬ್ಬರ ಜೋರಾಗಿದ್ದರೆ ಕಾಂಗ್ರೆಸ್ ಪಕ್ಷದಲ್ಲೂ ಹೊಸ ನಿರೀಕ್ಷೆಯ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಜರುಗಿತ್ತು. ಆದರೂ ಕೊಡಗಿನಲ್ಲಿ ಕಮಲ ಕದಲದೆ ಮತ್ತೆ ಸ್ಥಿರವಾಗಿ ಉಳಿದು ಎರಡು ಕ್ಷೇತ್ರಗಳಲ್ಲೂ ನಿರೀಕ್ಷೆಗೂ ಮೀರಿದ ಮತಗಳ ಅಂತರದಿಂದ ಜಯಗಳಿಸಿತ್ತು. ನಂತರದ ರಾಜಕೀಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಷ್ಟು ಚೇತರಿಕೆ ಕಂಡಿತಾದರೂ ಇತ್ತೀಚೆಗಷ್ಟೆ ಮುಗಿದ ಲೋಕಸಮರದಲ್ಲಿ ಮತ್ತೆ ಮುಗ್ಗರಿಸಿದೆ. ದೋಸ್ತಿಗಳಾಗಿ ಚುನಾವಣೆ ಎದುರಿಸಿದರೂ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದ ಬಿಜೆಪಿಯ ಎದುರು ತಲೆ ಎತ್ತಲು ಸಾಧ್ಯವಾಗದೆ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದೆ. ಈ ಮೂಲಕ ಕೊಡಗಿನಲ್ಲಿ ಬಿಜೆಪಿ ಸ್ಥಿರವಾಗಿದ್ದು, ಇದು ಬಿಜೆಪಿಯ ಭದ್ರಕೋಟೆ ಎಂಬದು ಮತ್ತೆ ರುಜುವಾತಾಗಿದೆ.

ಕಾಂಗ್ರೆಸ್-ಜೆಡಿಎಸ್‍ನಲ್ಲಿ ಆಂತರಿಕ ಕಲಹ

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಹೊಂದಾಣಿಕೆಯಲ್ಲಿ ಅಲ್ಲೋಲಕಲ್ಲೋಲವಾಗುತ್ತಿದ್ದರೆ ಕೊಡಗಿನಲ್ಲಿ ಈ ಪಕ್ಷಗಳಲ್ಲೇ ಆಂತರಿಕವಾದ ಗೊಂದಲಗಳು ಇವೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಮುಕ್ಕಾಟಿರ ಶಿವು ಮಾದಪ್ಪ ಅವರನ್ನು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ದಿಢೀರನೆ ಬದಲಾವಣೆ ಮಾಡಲಾಗಿತ್ತು. ಒಂದಷ್ಟು ಯುವ ಪಡೆಯೊಂದಿಗೆ ಸಂಚಲನ ಮೂಡಿಸಿದ್ದ ಶಿವು ಮಾದಪ್ಪ ಈ ಬೆಳವಣಿಗೆಯ ಬಳಿಕ ತೆರೆಮರೆಗೆ ಸರಿದಂತಿದ್ದು ಎಲ್ಲೂ ಸಕ್ರಿಯವಾಗಿ ಕಂಡುಬರುತ್ತಿಲ್ಲ. ಶಿವು ಬದಲಿಗೆ ಹೊಸ ಅಧ್ಯಕ್ಷರಾದ ಕೆ.ಕೆ. ಮಂಜುನಾಥ್ ಕುಮಾರ್ ಅವರು ಲೋಕಸಭಾ ಚುನಾವಣೆ ಎದುರಿಸಿದರೂ ಪಕ್ಷ ಚೇತರಿಕೆ ಕಾಣಲಿಲ್ಲ.

ಜೆಡಿಎಸ್‍ನಲ್ಲೂ ಇದೇ ಸ್ಥಿತಿ

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಸಂಕೇತ್ ಪೂವಯ್ಯ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದ್ದರು. ಆದರೆ ಅವರಿಗೂ ಪಕ್ಷದಲ್ಲಿ ಪೂರ್ಣ ಸಹಮತ ಸಿಗಲಿಲ್ಲ. ಬಳಿಕ ಇವರ ಅಧ್ಯಕ್ಷ ಸ್ಥಾನವೂ ಬದಲಾಯಿತು. ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್‍ನ ಮುಖಂಡರೇ ಮುಖ್ಯಮಂತ್ರಿ ಹಾಗೂ ಕೊಡಗಿನ ಉಸ್ತುವಾರಿ ಸಚಿವರು ಕೂಡ ಜೆಡಿಎಸ್‍ನವರು ಮಾತ್ರವಲ್ಲದೆ ಕೊಡಗನ್ನು ಈ ಹಿಂದೆ ಪ್ರತಿನಿಧಿಸಿದ್ದ ಲೋಕಸಭಾ ಸದಸ್ಯ ಹೆಚ್. ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರೂ ಕೊಡಗು ಜೆಡಿಎಸ್ ‘ಠುಸ್’ ಪಟಾಕಿಯಾಗಿಯೇ ಉಳಿದಿದೆ. ವಿಶ್ವನಾಥ್ ಅವರ ಬೆಂಬಲದೊಂದಿಗೆ ಜೆಡಿಎಸ್‍ನ ನೂತನ ಜಿಲ್ಲಾಧ್ಯಕ್ಷರಾಗಿ ಕೆ.ಎಂ. ಗಣೇಶ್ ನೇಮಕಗೊಂಡರೂ ಇದೀಗ ಲೋಕಸಭಾ ಫಲಿತಾಂಶದ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.

ಇದು ಕೊಡಗು ಜೆಡಿಎಸ್‍ಗೆ ಮತ್ತೊಂದು ಆಘಾತವಾಗಿದೆ. ಅಲ್ಲದೆ ಮಾಜಿ ಸಚಿವ ಬಿ.ಎ. ಜೀವಿಜಯ ಬೆಂಬಲಿಗರ ಬಣ ಪ್ರತ್ಯೇಕವಾಗಿಯೇ ಉಳಿದಿದೆ. ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮುನ್ನ ಜೆಡಿಎಸ್ ಅಧ್ಯಕ್ಷ ಗಣೇಶ್ ಒಂದು ವೇಳೆ ಮೈತ್ರಿ ಅಭ್ಯರ್ಥಿ ಸೋತಲ್ಲಿ ಇದಕ್ಕೆ ಕೊಡಗು ಕಾಂಗ್ರೆಸ್ ಹೊಣೆ ಎಂಬ ಹೇಳಿಕೆ ನೀಡಿದ್ದರು. ಆದರೆ ಇದನ್ನು ತಳ್ಳಿ ಹಾಕಿದ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಸೋಲಿಗೆ ಕೊಡಗಿನ ಕಾಂಗ್ರೆಸ್ಸಿಗರು ಕಾರಣರಲ್ಲ ಎಂದಿದ್ದಾರೆ. ಈ ಹೇಳಿಕೆಗಳಿಂದ ಜಿಲ್ಲೆಯಲ್ಲಿಯೂ ‘ದೋಸ್ತಿ’ ಸುಮಧುರವಾಗಿಲ್ಲ ಎಂಬದು ಸ್ಪಷ್ಟವಾಗಿದೆ. ಸದ್ಯದ ಮಟ್ಟಿಗೆಯಂತೂ ಕೊಡಗಿನಲ್ಲಿ ಬಿಜೆಪಿ ಸುಭದ್ರವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಗೊಂದಲ ಮತ್ತೆ ಹಳೆಯ ಕಥೆಯೇ ಸರಿ...

ಈ ನಡುವೆ ಕೊಡಗಿನಲ್ಲಿ ವಕ್ಛ್ ಸಮಿತಿ ಸೇರಿದಂತೆ ಅನೇಕ ಸರಕಾರಿ ನಾಮಕರಣಗಳು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರುಗಳ ಗಮನಕ್ಕೆ ಬಾರದೆ ನಡೆಯುತ್ತಿವೆ ಎನ್ನುವ ಆರೋಪವಿದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರ ಗಮನಕ್ಕೂ ಬರುತ್ತಿಲ್ಲ ಎನ್ನುವ ಅಸಮಾಧಾನವಿದೆ. ಕೊಡಗಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಗತ್ಯವಿದೆ ಎಂದು ಚುನಾವಣೆ ಬಳಿಕ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ.

-ಶಶಿಸೋಮಯ್ಯ