ಪ್ರಸ್ತುತ ಸನ್ನಿವೇಶದಲ್ಲಿ ಕುಟುಂಬ ರಾಜಕೀಯದ ವಿಷಯವೇ ಹೆಚ್ಚು ಪ್ರಸ್ತಾಪವಾಗುತ್ತಿರುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ವಿಷಯಗಳಲ್ಲಿ ಇದೂ ಒಂದು.
ಭಾರತದ ರಾಜಕೀಯದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದ ಕುಟುಂಬ ರಾಜಕಾರಣ ನೋಡುವದಾದರೆ ನೆಹರೂ ಕುಟುಂಬ, ಪಂಡಿತ್ ಜವಹರ್‍ಲಾಲ್ ನೆಹರೂ ರಾಷ್ಟ್ರದ ಪ್ರಥಮ ಪ್ರಧಾನಿಯಾದರೆ, ಮಗಳು ಇಂದಿರಾಗಾಂಧಿ ನಂತರದಲ್ಲಿ ಪ್ರಧಾನಿ. ಹಾಗೆಯೇ ರಾಜೀವ್‍ಗಾಂಧಿ ಕೂಡ ಪ್ರಧಾನಿಯೇ. ಈಗ ರಾಹುಲ್‍ಗಾಂಧಿ ಎ.ಐ.ಸಿ.ಸಿ. ಅಧ್ಯಕ್ಷ, ಸಹೋದರಿ ಪ್ರಿಯಾಂಕ. ಹಾಗೆಯೇ ನೆಹರೂ ಕುಟುಂಬದ ಇನ್ನೊಬ್ಬ ಸೊಸೆ ಮೇನಕಾ ಗಾಂಧಿ ಹಾಗೂ ಅವರ ಪುತ್ರ ಸಂಜಯ್‍ಗಾಂಧಿ ಕೂಡ ಸಕ್ರಿಯ ರಾಜಕಾರಣಿಗಳು ಮತ್ತೊಂದು ಪಕ್ಷದಲ್ಲಿ.
ಇನ್ನೂ ರಾಜ್ಯಗಳ ವಿಷಯಕ್ಕೆ ಬಂದರೆ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವರ ಕುಟುಂಬ. ಹೆಂಡತಿ ರಾಬ್ಡಿ ದೇವಿ ಕೂಡ ಮಾಜಿ ಮುಖ್ಯಮಂತ್ರಿ, ಮಕ್ಕಳಾದ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಸಕ್ರಿಯ ರಾಜಕಾರಣಿಗಳೇ. ತಮಿಳುನಾಡಿನಲ್ಲಿ ನೋಡುವದಾದರೆ, ಕರುಣಾನಿಧಿ ಅವರ ಮಕ್ಕಳಾದ ಎಂ.ಕೆ. ಸ್ಟಾಲಿನ್, ಎ.ಕೆ. ಅಳಗಿಗಿ, ಕನಿಮೋಳಿ ಹಾಗೂ ಸೋದರ ಸಂಬಂಧಿಗಳು, ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರ್ ರೆಡ್ಡಿ ಮಗ ಜಗನ್ ಮೋಹನ್ ರೆಡ್ಡಿ, ಚಿರಂಜೀವಿ ಹಾಗೂ ಅವರ ತಮ್ಮ ಪವನ್ ಕಲ್ಯಾಣ್, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಮಗ ಅಕಿಲೇಶ್ ಯಾದವ್, ರಾಜಸ್ತಾನದ ವಿಷಯಕ್ಕೆ ಬಂದರೆ, ದಿ. ವಿಜಯರಾಜೇ ಸಿಂಧಿಯಾ ಮಗಳು ವಸುಂಧರರಾಜೆ ಮಾಜಿ ಮುಖ್ಯಮಂತ್ರಿ. ಇನ್ನೊಬ್ಬ ಮಗಳು ಯಶೋದರಾಜೇ ಲೋಕಸಭಾ ಸದಸ್ಯೆ ಜೊತೆಗೆ ವಸುಂಧರರಾಜೆ ಮಗ ದುಶ್ಯಂತ್ ಸಿಂಗ್ ಸಕ್ರಿಯ ರಾಜಕಾರಣಿ.
ಕರ್ನಾಟಕ ರಾಜ್ಯ ರಾಜಕಾರಣವೂ ಕುಟುಂಬ ರಾಜಕಾರಣಕ್ಕೆ ಹೊರತಾಗಿಲ್ಲ. ಅದರಲ್ಲಿ ಪ್ರಮುಖವಾಗಿ ಎಸ್.ಆರ್. ಬೊಮ್ಮಾಯಿ ಹಾಗೂ ಅವರ ಮಗ ಬಸವರಾಜ ಬೊಮ್ಮಾಯಿ, ಎಸ್. ಬಂಗಾರಪ್ಪ ಮತ್ತು ಅವರ ಪುತ್ರರಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಕೆ.ಹೆಚ್. ಪಾಟೇಲ್ ಹಾಗೂ ಅವರ ಮಗ ಹೆಚ್.ಕೆ. ಪಾಟೀಲ್, ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಗ ರಾಘವೇಂದ್ರ, ಸಿದ್ದರಾಮಯ್ಯ ಅವರ ಮಕ್ಕಳಾದ ರಾಕೇಶ್ ಸಿದ್ದರಾಮಯ್ಯ, ಯತೀಂದ್ರ.
ಕರ್ನಾಟಕದ ಇತಿಹಾಸದ ಹಿಂದೆಯೂ ಹಾಗೂ ಮುಂದೆಯೂ ಅಳಿಸಿ ಹಾಕಲಾಗದ ದಾಖಲೆ ದೇವೇಗೌಡರ ಕುಟುಂಬ ರಾಜಕಾರಣ. ಕುಟುಂಬ ರಾಜಕಾರಣ ಮಾಡುವದಿಲ್ಲವೆನ್ನುತ್ತಲೆ ಒಬ್ಬೊಬ್ಬರನ್ನೇ ರಾಜಕೀಯಕ್ಕೆ ತರುತ್ತಿದ್ದಾರೆ. ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮಗ ಹಾಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮತ್ತೊಬ್ಬ ಮಗ ಹೆಚ್.ಡಿ. ರೇವಣ್ಣ ಕಂದಾಯ ಸಚಿವ, ಸೊಸೆ ಶಾಸಕಿ, ಮೊಮ್ಮಗ ಮಂಡ್ಯ ಲೋಕಸಭಾ ಅಧಿಕೃತ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶ. ಮತ್ತೊಬ್ಬ ಮೊಮ್ಮಗ ಪ್ರಜ್ವಲ್ ಹಾಸನದ ಸಂಸದ. ನಿಖಿಲ್ ಇವರನ್ನು ಬಿಟ್ಟು ಅವರ ಕುಟುಂಬದಲ್ಲಿ ಉಳಿದವರು ಆಯಾ ಜಿಲ್ಲಾ ರಾಜಕೀಯದಲ್ಲಿ ಸಕ್ರಿಯವಾಗಿ ಇರುವವರು. ಹೀಗೇ ಬರೆಯುತ್ತಾ ಹೋದಂತೆ ಇನ್ನೂ ಬಹುತೇಕ ರಾಜಕಾರಣಿಗಳು ತಮ್ಮ ಮಕ್ಕಳ ವ್ಯಾಮೋಹವೋ ಎಂಬಂತೆ ರಾಜಕಾರಣದ ಗಂಧ ಗಾಳಿಯೂ ಗೊತ್ತಿಲ್ಲದವರನ್ನು ರಾಜಕಾರಣಕ್ಕೆ ತರುತ್ತಿದ್ದಾರೆ.
ನಿಜಕ್ಕೂ ರಾಜಕೀಯದಲ್ಲಿ ಕುಟುಂಬ ರಾಜಕಾರಣ ಅವಶ್ಯವೇ? ಬರೀ ಒಂದೇ ಕುಟುಂಬದವರಿಗೆ ಮಾತ್ರ ಉನ್ನತ ಸ್ಥಾನ ಸಿಗುತ್ತಿದ್ದರೆ ಸಂಬಂಧಿತ ಪಕ್ಷಗಳ ನೈಜ್ಯ ಕಾರ್ಯಕರ್ತರ ಪಾಡೇನು? ಇದು ಕೇವಲ ಪಕ್ಷಗಳ ಕಾರ್ಯಕರ್ತರನ್ನು ಉಳಿಸುವ ಪ್ರಶ್ನೆಯಲ್ಲ. ರಾಜಾಡಳಿತದಿಂದ ಮುಕ್ತಿಹೊಂದಿ, ಸ್ವಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ನಮಗೆ ಮತ್ತೊಮ್ಮೆ ರಾಜಾಡಳಿತ ಬದಲು ಕುಟುಂಬ ರಾಜಕಾರಣಿಗಳ ಅಡಿಯಲ್ಲಿ ಬದುಕುವ ಪ್ರಮೇಯ ಬರಬಹುದು. ನಮ್ಮನ್ನು ಆಳುವ ವರ್ಗ ಅಧಿಕಾರವನ್ನು ವಿಕೇಂದ್ರೀಕರಣ ಮಾಡದೇ ಒಂದು ಕುಟುಂಬದಲ್ಲಿ ಕೇಂದ್ರೀಕರಣ ಮಾಡುತ್ತಿರುವದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಇಂತಹ ಕುಟುಂಬ ರಾಜಕಾರಣಕ್ಕೆ ಮತದಾರರು ಮತದಾನದ ಸಂದರ್ಭದಲ್ಲಿ ಸೂಕ್ತ ಉತ್ತರ ನೀಡಿದರೆ ಮಾತ್ರ ಇಂತಹ ಪರಿಸ್ಥಿತಿ ಮುಂದಿನ ಪೀಳಿಗೆಗೆ ಬರಲಾರದೇನೊ.
- ವಿ.ಜೆ. ಸಂತೋಷ್.