ಸೋಮವಾರಪೇಟೆ, ಜೂ.7: ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಮಣ್ಣಿನ ಗೋಡೆಯ ಮನೆ ಕಳೆದ ಮಳೆಗಾಲದಲ್ಲಿ ಸಂಪೂರ್ಣ ಕುಸಿದು ಬೀದಿಪಾಲಾಗಿದ್ದ ಕುಟುಂಬಕ್ಕೆ, ಇಲ್ಲಿನ ಲಯನ್ಸ್ ಸಂಸ್ಥೆ ನೂತನ ಮನೆ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ.
ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ವನಿತಾ ಅವರ ಪತಿ ಮಂಜುನಾಥ್ ನಿಧನಾ ನಂತರ ಕುಟುಂಬದ ಇದ್ದ ಮನೆಯೂ ಕುಸಿತಗೊಂಡಿದ್ದರಿಂದ ವನಿತಾ ಇಲ್ಲಿನ ಬಿಸಿಎಂ ಹಾಸ್ಟೆಲ್ ಬಳಿಯ ವರಾಂಡದಲ್ಲೇ ಬದುಕು ಸಾಗಿಸುತ್ತಿದ್ದರು. ಮನೆಯೊಂದಿಗೆ ಒಳಗಿದ್ದ ವಸ್ತುಗಳೆಲ್ಲವೂ ಮಣ್ಣುಪಾಲಾಗಿದ್ದರಿಂದ ಅವರಿಗೆ ದಿಕ್ಕೇ ತೋಚದಂತಾಗಿತ್ತು.
ಇವರ ಸ್ಥಿತಿಯನ್ನು ಮನಗಂಡ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಇದೀಗ ನೂತನ ಮನೆಯನ್ನು ನಿರ್ಮಿಸಿಕೊಟ್ಟಿದ್ದು, ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದ್ದಾರೆ. ಇರುವ ಸಣ್ಣ ಜಾಗದಲ್ಲಿಯೇ ಪುಟ್ಟ ಮನೆ ನಿರ್ಮಿಸಿದ್ದು, ನೂತನ ಮನೆಯ ಕೀಲಿಕೈಯನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ. ದೇವದಾಸ್ ಭಂಡಾರಿ ಅವರು ಹಸ್ತಾಂತರ ಮಾಡಿದರು.
ಲಯನ್ಸ್ ಸಂಸ್ಥೆಯ “ಹೋಂ ಫಾರ್ ದ ಹೋಮ್‍ಲೆಸ್” ಯೋಜನೆಯಡಿ ರೂ. 3.50 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮನೆ ಹಸ್ತಾಂತರ ಸಂದರ್ಭ ಸೋಮವಾರಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎನ್.ಯೋಗೇಶ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪಿ.ಎನ್.ಪೆಮ್ಮಯ್ಯ, ವಲಯಾಧ್ಯಕ್ಷ ಎ.ಎಸ್.ಮಹೇಶ್, ಕಾರ್ಯದರ್ಶಿ ಮಂಜುನಾಥ್ ಚೌಟ, ಖಜಾಂಚಿ ಎಚ್.ಎಂ.ಬಸಪ್ಪ, ಜೇಸಿ ಅಧ್ಯಕ್ಷ ಪುರುಷೋತ್ತಮ್, ಗುತ್ತಿಗೆದಾರ ಸುರೇಶ್ ಹಾಗೂ ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.