ಸೋಮವಾರಪೇಟೆ, ಜೂ.7: ರಂಜಾನ್ ದಿನದಂದು ಪಟ್ಟಣದ ಸಮೀಪದ ಗಾಂಧಿನಗರ ಈದ್ಗಾ ಮೈದಾನದ ಸಮೀಪ ಕಾರು ಜಖಂಗೊಳಿಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಡಿವೈಎಸ್ಪಿ ದಿನಕರ್ಶೆಟ್ಟಿ ನೇತೃತ್ವದ ತಂಡ ಬಂಧಿಸಿದ್ದು, ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಗಾಂಧಿನಗರದ ಪ್ರವೀಣ್ ಎಂಬವರ ಕಾರಿಗೆ ಕಲ್ಲುಹೊಡೆದು ಜಖಂಗೊಳಿಸಿದ ಜನತಾ ಕಾಲನಿಯ ನಿವಾಸಿ ಹುಮಾಯುನ್ ಬೇಗ್ ಅವರ ಮಕ್ಕಳಾದ ಕರೀಂ ಬೇಗ್ ಅಲಿಯಾಸ್ ಇಮ್ರಾನ್, ಅಜೀಂಬೇಗ್ ಅಲಿಯಾಸ್ ಅಡ್ಡು, ರಹೀಂಬೇಗ್ ಅಲಿಯಾಸ್ ಚಾಂದ್, ಸಮ್ಮಿ ಎಂಬವರ ಪುತ್ರ ಸಮೀರ್ ಅಲಿಯಾಸ್ ಸಮ್ಮು ಬಂಧಿತ ಆರೋಪಿಗಳು.
ಗಾಂಧಿನಗರ ಒಕ್ಕಲಿಗರ ಸಮುದಾಯ ಭವನದ ಮುಂಭಾಗದ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಮುಸ್ಲಿಂ ಸಮುದಾಯದವರು ತೆರಳುತ್ತಿದ್ದ ಸಂದರ್ಭ, ಹಿಂಬದಿಯಿಂದ ತೆರಳುತ್ತಿದ್ದ ಗಾಂಧಿನಗರ ನಿವಾಸಿ ಪ್ರವೀಣ್ ಅವರು ತಮ್ಮ ಕಾರಿನ ಹಾರನ್ ಮಾಡಿದ ಕಾರಣಕ್ಕೆ, ಪ್ರವೀಣ್ ಅವರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಜಾತಿನಿಂದನೆ ಮಾಡಿ, ಕಾರಿನ ಗಾಜು ಪುಡಿಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಟ್ಟಣದ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಠಾಣೆ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಗಾಂಧಿನಗರದ ಯುವಕರು ಆಗಮಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಇಲಾಖೆಯ ಮೇಲೆ ಒತ್ತಡ ಹೇರಿದ್ದರು.
ಠಾಣೆಗೆ ಆಗಮಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್ ಅವರು ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದ ತಂಡವನ್ನು ರಚಿಸಿದ್ದರು. ಘಟನೆ ನಡೆದ ಎರಡು ದಿನದಲ್ಲಿ ಆರೋಪಿಗಳನ್ನು ಬಂಧಿಸಿದ ತಂಡಕ್ಕೆ ಎಸ್ಪಿ ಅವರು ಬಹುಮಾನ ಘೋಷಿಸಿದ್ದಾರೆ.
ಆರೋಪಿಗಳ ವಿರುದ್ಧ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 143, 144, 147, 148, 341, 324, 427, 504, 149 ಐಪಿಸಿ ಎಸ್.ಸಿ. ಎಸ್ಟಿ ಆ್ಯಕ್ಟ್ ಸೇರಿದಂತೆ 1981ರ ಪ್ರಾಪರ್ಟಿ ಲಾಸ್ ಕಾಯ್ದೆಗಳಡಿ ಮೊಕದ್ದಮೆ ದಾಖಲಿಸಲಾಗಿತ್ತು. ಅಜೀಂ ಬೇಗ್ನನ್ನು ನಿನ್ನೆಯೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಗಳ ಪೈಕಿ ಕರೀಂ ಬೇಗ್ನ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಒಟ್ಟು 9 ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಇದರಲ್ಲಿ 2 ಪ್ರಕರಣಗಳು ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದ್ದಾಗಿದೆ. ಈತನ ವಿರುದ್ಧ ರೌಡಿ ಶೀಟರ್ ಮತ್ತು ಕಮ್ಯೂನಲ್ ಗೂಂಡಾ ಹಾಳೆಯನ್ನು ತೆರೆಯಲಾಗಿದ್ದು, 2019 ಚುನಾವಣೆ ಸಂದರ್ಭ ಕೆ.ಪಿ. ಆ್ಯಕ್ಟ್ ರೀತ್ಯಾ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಡಿವೈಎಸ್ಪಿ ದಿನಕರ್ ಶೆಟ್ಟಿ ತಿಳಿಸಿದ್ದಾರೆ.
ಅಜೀಂ ಬೇಗ್ನ ವಿರುದ್ಧ 6 ಕ್ರಿಮಿನಲ್ ಕೇಸ್ ದಾಖಲಾಗಿದ್ದು, 2 ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದ್ದಾಗಿದೆ. ಈತನ ವಿರುದ್ಧವೂ ರೌಡಿ ಶೀಟ್ ಹಾಗೂ ಕಮ್ಯೂನಲ್ ಗೂಂಡ ಹಾಳೆ ತೆರೆಯಲಾಗಿದೆ. ರಹೀಂ ಬೇಗ್ ವಿರುದ್ಧ 4 ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಈತನ ವಿರುದ್ಧವೂ ರೌಡಿಶೀಟ್ ಮತ್ತು ಕಮ್ಯೂನಲ್ ಗೂಂಡಾ ಹಾಳೆ ತೆರೆಯಲಾಗಿದೆ. ಸಮೀರ್ನ ವಿರುದ್ಧ 5 ಕ್ರಿಮಿನಲ್ ಪ್ರಕರಣವಿದ್ದು, 2 ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಡಿವೈಎಸ್ಪಿ ದಿನಕರ್ ಶೆಟ್ಟಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸರ್ಕಲ್ಇನ್ಸ್ಪೆಕ್ಟರ್ ನಂಜುಂಡೇ ಗೌಡ, ಸಬ್ಇನ್ಸ್ಪೆಕ್ಟರ್ ಶಿವಶಂಕರ್, ಸಿಬ್ಬಂದಿಗಳಾದ ಶಿವಕುಮಾರ್, ಜಗದೀಶ್, ಸಂದೇಶ್, ಪ್ರವೀಣ್ ಮಧುಸೂದನ, ನವೀನ್ ಕುಮಾರ್, ಅಪರಾಧ ಪತ್ತೆದಳದ ದಯಾನಂದ್, ಜೋಸೆಪ್, ಪ್ರಕಾಶ್, ದಿನಕರ್, ಸಂಪತ್ ರೈ, ಸಿಡಿಆರ್ ಸೆಲ್ನ ಗಿರೀಶ್, ರಾಜೇಶ್ ಪಾಲ್ಗೊಂಡಿದ್ದರು.