ಮಡಿಕೇರಿ, ಜೂ. 7: ಕಳೆದ ಮಳೆಗಾಲದ ತೀವ್ರತೆಯಿಂದ ಕೊಡಗಿನ ಏಳು ಗ್ರಾ.ಪಂ. ವ್ಯಾಪ್ತಿಯ ಸುಮಾರು 40 ಗ್ರಾಮಗಳಲ್ಲಿ ತೀವ್ರ ಸ್ವರೂಪದ ಹಾನಿಯೊಂದಿಗೆ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಎದುರಾಗಿರುವ ಸಮಸ್ಯೆಗಳನ್ನು ಶೀಘ್ರವೇ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹಂತದಲ್ಲಿ ಇತ್ಯರ್ಥಗೊಳಿಸಲಾಗುವದು ಎಂದು, ರಾಜ್ಯ ಪ್ರವಾಸೋದ್ಯಮ ಖಾತೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಸಾ.ರಾ. ಮಹೇಶ್ ಭರವಸೆ ನೀಡಿದರು.

ಇಲ್ಲಿನ ಕೋಟೆ ಹಳೆಯ ವಿಧಾನಸಭಾ ಸಭಾಂಗಣದಲ್ಲಿ ಸಂತ್ರಸ್ತರ ಕುಂದುಕೊರತೆ ಆಲಿಸುವ ದಿಸೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಸಂತ್ರಸ್ತರು ಹಾಗೂ ಜನಪ್ರತಿನಿಧಿಗಳು, ಆಯಾ ಗ್ರಾ.ಪಂ. ಪ್ರಮುಖರು ಮತ್ತು ಸಂಘ ಸಂಸ್ಥೆಗಳ ಮುಖಂಡರ ಅಭಿಪ್ರಾಯ ಆಲಿಸಿದ ಬಳಿಕ ಮೇಲಿನ ಆಶ್ವಾಸನೆ ನೀಡಿದರು.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದಿಂದ ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರಿಗೆ ಅಗತ್ಯ ನೆರವು ಕಲ್ಪಿಸಲಾಗಿದೆ ಎಂದು ಬೊಟ್ಟು ಮಾಡಿದ ಸಚಿವರು ಪರ್ಯಾಯ ವಸತಿ, ನಿವೇಶನ, ಆರ್ಥಿಕ ನೆರವು, ಪಡಿತರ ಸೇರಿದಂತೆ ಮೂಲ ಸೌಕರ್ಯಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಂಕಿ ಅಂಶ ಸಹಿತ ಮಾಹಿತಿಯಿತ್ತರು.

ಸಂಸದ ಸಲಹೆ : ಸಚಿವರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಈಗಾಗಲೇ ಜನತೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಗ್ರಹಗೊಂಡಿರುವ ನೆರವಿನ ಹಣವನ್ನು ಸಂತ್ರಸ್ತರ ಕೃಷಿ ಜಮೀನು ಇತ್ಯಾದಿ ಹಾನಿಯನ್ನು ಸರಿಪಡಿಸಲು ಬಳಸುವ ಮುಖಾಂತರ ತುರ್ತು ಕ್ರಮ ವಹಿಸಲು ಕಾಳಜಿ ತೋರಬೇಕೆಂದು ಸಲಹೆ ನೀಡಿದರು.

ಕೇಂದ್ರದ ಬಳಿ ನಿಯೋಗ : ಅಲ್ಲದೆ ಕೊಡಗಿಗೆ ಮೂಲಭೂತ ಸೌಲಭ್ಯ, ಕಾಫಿ ಬೆಳೆಗಾರರ ಸಂಕಷ್ಟ, ರಸ್ತೆಗಳ ಅಭಿವೃದ್ಧಿ ಮುಂತಾದ ಬೇಡಿಕೆಗಳ ಸಲುವಾಗಿ ವಿಶೇಷ ನೆರವು ಕೋರಿ, ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೇಂದ್ರ ವಿತ್ತ ಸಚಿವರ ಬಳಿ ನಿಯೋಗ ಕರೆದೊಯ್ಯುವಂತೆಯೂ ಮರು ಸಲಹೆ ನೀಡಿದರು.

ಅಸಮಾಧಾನ : ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡವರು ಭಾಗಶಃ ಮನೆ ಹಾನಿಗೊಳಗಾದವರು, ತೀವ್ರ ಹಾನಿಗೆ ಸಿಲುಕಿದವರು ಸೇರಿದಂತೆ ಆಯ ಗ್ರಾ.ಪಂ. ಅಧಿಕಾರಿಗಳು ಹಾಗೂ ಸ್ಥಳೀಯ