ಮಡಿಕೇರಿ, ಜೂ. 7: ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಭೂಪರಿವರ್ತನೆಗೆ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸುವದು, ಕೊಳವೆ ಬಾವಿಗೆ ಬದಲಾಗಿ ತೆರೆದ ಬಾವಿಗೆ ಅವಕಾಶ ಕಲ್ಪಿಸುವದು, ಪ್ರಕೃತಿ ವಿಕೋಪ ಸಂದರ್ಭ ತೋಟ, ಕೃಷಿ ಭೂಮಿಗಳನ್ನು ಕಳೆದುಕೊಂಡವರಿಗೆ ಹೆಚ್ಚಿಗೆ ಪರಿಹಾರ ನೀಡುವದು ಸೇರಿದಂತೆ ಇನ್ನಿತರ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆದು, ಈ ಸಂಬಂಧ ತೆಗೆದುಕೊಳ್ಳಲಾದ ನಿರ್ಣಯಗಳನ್ನು ಸರಕಾರಕ್ಕೆ ಕಳುಹಿಸುವ ಬಗ್ಗೆ ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆ ಯಲ್ಲಿಂದು ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಶಿವುಮಾದಪ್ಪ ಅವರು, ಜಿಲ್ಲೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆಗೆ ನಿರ್ಬಂಧ ಹೇರಲಾಗಿದೆ. ಆದರೆ ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಕೇವಲ 20 ಸೆಂಟ್ ಜಾಗದ ಪರಿವರ್ತನೆಗೆ ಮಾತ್ರ ಅವಕಾಶ ನೀಡಲಾಗಿದೆ. ಓರ್ವ ರೈತರ, ಬೆಳೆಗಾರನಿಗೆ 20 ಸೆಂಟ್ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಮನೆ, ಶೆಡ್, ಕಾಫಿ ಕಣ, ಲೈನ್ಮನೆ ಹೀಗೆ ಕನಿಷ್ಟ ಎರಡು ಎಕರೆಯಷ್ಟು ಜಾಗದ ಅವಶ್ಯಕತೆ ಇದೆ. ಹಾಗಾಗಿ ಕನಿಷ್ಟ ಎರಡು ಎಕರೆ ಜಾಗದ ಭೂಪರಿವರ್ತನೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಇನ್ನುಳಿದ ಸದಸ್ಯರುಗಳು ಕೂಡ ಧನಿಗೂಡಿಸಿದರು. ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಜವರೇಗೌಡ ಅವರು, ಸರಕಾರದ ನಿಯಮಾನುಸಾರ ಸ್ವಂತ ಮನೆಗೆ 20 ಸೆಂಟ್ ಜಾಗದ ಪರಿವರ್ತನೆಗೆ ಮಾತ್ರ ಅವಕಾಶವಿದೆ. ವಾಣಿಜ್ಯ ಉದ್ದೇಶಕ್ಕೆ ನೀಡಲಾಗದೆಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಅವರು, ಭೂಕುಸಿತ ಕೆಲವು ಕಡೆಗಳಲ್ಲಿ ಮಾತ್ರ ಸಂಭವಿಸಿದ್ದು, ಇಡೀ ಜಿಲ್ಲೆಯಲ್ಲಿಯೇ ಪರಿವರ್ತನೆ ನಿರ್ಬಂಧಿಸಲಾಗಿದೆ. ಎಲ್ಲಾ ಕಾನೂನುಗಳು ಕೊಡಗಿಗೆ ಮಾತ್ರ ಏಕೆ ಎಂದು ಪ್ರಶ್ನಿಸಿದರಲ್ಲದೆ, ಈ ಬಗ್ಗೆ ಜಿಲ್ಲಾಧಿಕಾರಿಗಳು, ಉಪವಿಭಾಗಾ ಧಿಕಾರಿಗಳು, ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಚರ್ಚೆ ಆಗಿ ತೀರ್ಮಾನ ಆಗಬೇಕಿದೆ ಎಂದರು. ಈ ಸಂಬಂಧ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸುವ ಬಗ್ಗೆ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿಗಳಿಗೆ ಸೂಚಿಸಿದರು.
ತೆರೆದ ಬಾವಿ ಕೊಡಿ
ಕುಡಿಯುವ ನೀರಿನ ಯೋಜನೆಯಡಿ ಸರಕಾರದ ಮಾರ್ಗಸೂಚಿಯಲ್ಲಿ ಕೊಳವೆ ಬಾವಿ ತೆರೆಯಲು ಅವಕಾಶವಿದೆ ಆದರೆ, ಎಲ್ಲಿಯೂ ತೆರೆದ ಬಾವಿಗೆ ಅವಕಾಶ ನೀಡಬಾರದು ಎಂಬದಿಲ್ಲ. ಇಂಜಿನಿಯರ್ಗಳು ತಪ್ಪು ಮಾಹಿತಿ ನೀಡಿ ಕೇವಲ ಕೊಳವೆ ಬಾವಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ. ಕೊಳವೆ ಬಾವಿಗಳು ಫಲಪ್ರದವಾಗುತ್ತಿಲ್ಲವೆಂದು ಸಭೆಯ ಗಮನ ಸೆಳೆದರು. ಇದಕ್ಕೆ ಧನಿಗೂಡಿಸಿದ ಸಿ.ಕೆ. ಬೋಪಣ್ಣ ಹಾಗೂ ಇತರರು ದಕ್ಷಿಣ ಕೊಡಗಿಗೆ ಕೊಳವೆ ಬಾವಿಗಳ ಅವಶ್ಯಕತೆ ಇಲ್ಲ; ಕೊಳವೆ ಬಾವಿಯಿಂದಾಗಿ ಅಂತರ್ಜಲ ಬತ್ತಿ ಹೋಗಿದೆ. ತೆರೆದ ಬಾವಿಗಳಿಗೆ ಅವಕಾಶ ನೀಡಿ ಎಂದು ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಪಂಚಾಯತ್ ರಾಜ್ ಇಲಾಖೆ ಅಭಿಯಂತರರು, ತೆರೆದ ಬಾವಿಯನ್ನು ಖಾಸಗಿ ಜಾಗದಲ್ಲಿ ತೋಡ ಬೇಕಾಗುತ್ತದೆ. (ಮೊದಲ ಪುಟದಿಂದ) ಬಾವಿ ನಿರ್ಮಾಣವಾದ ನಂತರ ಖಾಸಗಿಯವರು ಸಾರ್ವಜನಿಕರಿಗೆ ನೀರು ಕೊಂಡೊಯ್ಯಲು ಬಿಡುತ್ತಿಲ್ಲ. ಹಾಗಾಗಿ ಕೊಳವೆಗೆ ಅವಕಾಶ ನೀಡುತ್ತಿರುವದಾಗಿ ಹೇಳಿದಾಗ, ಸದಸ್ಯ ಶಿವು ಮಾದಪ್ಪ ಅವರು, ನೀರು ಮತ್ತು ರಸ್ತೆಗೆ ಯಾರೂ ಅಡ್ಡಿ ಮಾಡುವದಿಲ್ಲ. ಸರಕಾರದ ಹಣದಲ್ಲಿ ಕಾಮಗಾರಿ ನಿರ್ವಹಿಸಿದ ನಂತರ ಅದು ಸರಕಾರದ ಸ್ವತ್ತಾಗಲಿದೆ; ಕೊಳವೆ ಬಾವಿ ಕೂಡ ಖಾಸಗಿ ಜಾಗದಲ್ಲೇ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಸದಸ್ಯ ಪ್ರಥ್ಯು ಮಾತನಾಡಿ; ಜಿ.ಪಂ. ಆಡಳಿತ ಅಸ್ತಿತ್ವಕ್ಕೆ ಬಂದ ಕೂಡಲೇ ಎಲ್ಲೆಲ್ಲಿ ಜಿ.ಪಂ. ವತಿಯಿಂದ ನಿರ್ಮಿಸಲಾದ ಬಾವಿಗಳನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವಂತೆ ನಿರ್ಣಯ ಆಗಿದ್ದರೂ ಇನ್ನೂ ಕೂಡ ಆಗಿಲ್ಲವೆಂದು ಹೇಳಿದರು.
ಸದಸ್ಯ ಮುರಳಿ ಮಾತನಾಡಿ, ಜಿಲ್ಲೆಯಲ್ಲಿ ಬೋರ್ವೆಲ್ ಲಾರಿಗಳು ಹೋಗದಂತಹ ಪ್ರದೇಶಗಳಿವೆ ಅಲ್ಲದೆ, ಗದ್ದೆಗಳಿರುವ ಪ್ರದೇಶದಲ್ಲಿ ಕೊಳವೆ ಬಾವಿ ಸಾಧ್ಯವಿಲ್ಲ. ಹಾಗಾಗಿ ತೆರೆದ ಬಾವಿಗೆ ಅವಕಾಶ ನೀಡಿ ಎಂದರಲ್ಲದೆ, ಇಲ್ಲಿ ಬಡವರನ್ನು ಭಿಕ್ಷುಕರನ್ನಾಗಿಸುವ ಪ್ರಯತ್ನ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದಿನ ಚರ್ಚೆ ಬಗ್ಗೆ ಸರಕಾರದ ಆಯುಕ್ತರಿಗೆ ಕಳುಹಿಸಿ ಅನುಮತಿ ಪಡೆದುಕೊಳ್ಳುವ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಹೇಳಿದಾಗ, ಅನುಮತಿ ಬೇಕಾಗಿಲ್ಲ; ಸರಕಾರದ ಮಾರ್ಗಸೂಚಿಯಲ್ಲಿ ತೆರೆದ ಬಾವಿ ನೀಡಬಾರದೆಂದು ಇಲ್ಲ; ಹಾಗಾಗಿ ತೆರೆದ ಬಾವಿ ನಿರ್ಮಿಸಲು ಅವಕಾಶ ನೀಡುವಂತೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸುವಂತೆ ತೀರ್ಮಾನಿಸಲಾಯಿತು.
ಕೃಷಿ ಭೂಮಿಗೆ ಪರಿಹಾರ
ಪ್ರಕೃತಿ ವಿಕೋಪದಲ್ಲಿ ತೋಟ - ಗದ್ದೆಗಳನ್ನು ಕಳೆದುಕೊಂಡು ಸಾಕಷ್ಟು ಮಂದಿ ಕೃಷಿ ಕೈಗೊಳ್ಳಲಾಗದೆ ಅತಂತ್ರರಾಗಿದ್ದಾರೆ. ಕೆಲವರು ಭಿಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಪರಿಹಾರವಾಗಿ ಎರಡು ಹೆಕ್ಟೇರ್ಗೆ ಕೇವಲ 36 ಸಾವಿರ ಮಾತ್ರ ಪರಿಹಾರ ನೀಡಲಾಗುತ್ತಿದೆ. ಇದು ಏನೇನು ಸಾಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಪರಿಹಾರದಲ್ಲೂ ತಾರತಮ್ಯವೆಸಗಲಾಗುತ್ತಿದೆ. ಅಧಿಕಾರಿಗಳ ಪಟ್ಟಿಯಲ್ಲಿರುವಂತೆ ಪರಿಹಾರ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಧನಿಗೂಡಿಸಿದ ಸದಸ್ಯ ಶಿವು ಮಾದಪ್ಪ ಅವರು ಜಾಗದ ನೋಂದಣಿಗೆ ಒಂದು ಲಕ್ಷಕ್ಕೂ ಹೆಚ್ಚಿಗೆ ಕಟ್ಟುತ್ತಾರೆ, ಕನಿಷ್ಟ ನೋಂದಣಿ ಮೊತ್ತವಷ್ಟಾದರೂ ಪರಿಹಾರ ಕೊಡಿ ಎಂದು ಹೇಳಿದರು. ಚಂದ್ರಕಲಾ ಅವರು ಕೂಡ ದನಿಗೂಡಿಸಿ ಬೇರೆಲ್ಲದಕ್ಕೂ ಹಣ ಇರುತ್ತದೆ. ಮಾನವೀಯತೆಯಿಂದಾದರೂ ಹೆಚ್ಚಿಗೆ ಪರಿಹಾರ ಕೊಡಿ ಎಂದು ಹೇಳಿದರು. ಬೋಪಣ್ಣ, ಶಶಿ ಸುಬ್ರಮಣಿ ಇನ್ನಿತರರು ಈ ಸಂಬಂಧ ಜನಪ್ರತಿನಿಧಿಗಳನ್ನ ಒಳಗೊಂಡು ಸಭೆ ಏರ್ಪಡಿಸಿದರೆ, ರೈತರ, ಜನರ ಸಮಸ್ಯೆಗಳನ್ನು ತಾವು ಹೇಳುತ್ತೇವೆ ಎಂದು ಸಲಹೆ ಮಾಡಿದರು. ಹೆಚ್ಚಿಗೆ ಪರಿಹಾರ ನೀಡದಿದ್ದಲ್ಲಿ ಹೋರಾಟ ಮಾಡುವ ಬಗ್ಗೆ ಪ್ರಕಟಿಸಿದರು.
ಸದಸ್ಯ ಮುರಳಿ ಅವರು ತೋಟಕ್ಕೆ ಕನಿಷ್ಟ ಹೆಕ್ಟೇರ್ಗೆ 10 ಲಕ್ಷ ಹಾಗೂ ಗದ್ದೆಗೆ 5 ಲಕ್ಷ ನೀಡುವಂತೆ ಸರಕಾರಕ್ಕೆ ಉಸ್ತುವಾರಿ ಸಚಿವರಿಗೆ ಪ್ರಸ್ತಾವನೆ ಕಳುಹಿಸಿ ಒತ್ತಡ ಹೇರಬೇಕೆಂದು ಹೇಳಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸುವ ಬಗ್ಗೆ ತೀರ್ಮಾನಿಸಲಾಯಿತು.
ಗ್ರಾಮೀಣ ನಿಧಿ
ಕಳೆದ ವರ್ಷ ಸಂಭವಿಸಿದ ಅತೀವೃಷ್ಟಿಯಿಂದಾಗಿ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದ್ದು, ಈ ಸಂಬಂಧ ಕೊಡಗಿಗೆ ವಿಶೇಷ ಗ್ರಾಮೀಣ ನಿಧಿಯ ಅವಶ್ಯಕತೆಯಿದ್ದು, ಇದನ್ನು ಸರ್ಕಾರದ ಗಮನಕ್ಕೆ ತರುವದಾಗಿ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಹೇಳಿದರು.
ಕಳೆದ ವರ್ಷದ ಅತೀವೃಷ್ಟಿಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಈ ಬಗ್ಗೆ ಇದುವರೆಗೂ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಸಭೆಯ ಆರಂಭದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎನ್.ಪಿ.ಕಿರಣ್ ಕಾರ್ಯಪ್ಪ ಅವರು ನಿಫಾ ವೈರಸ್ ಬಗ್ಗೆ ಪ್ರಸ್ತಾಪಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರಿಂದ ನಿಫಾ ವೈರಸ್ ಸೋಂಕು ತಡೆಗಟ್ಟುವಲ್ಲಿ ವಹಿಸಬೇಕಾದ ಜಾಗ್ರತೆ ಕುರಿತು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಅವರು ಎಲ್ಲಾ ಗ್ರಾ.ಪಂ. ಮಟ್ಟದಲ್ಲೂ ನಿಫಾ ವೈರಸ್ ಕುರಿತು ಜಾಗೃತಿ ಮೂಡಿಸಬೇಕು. ಹಾಗೂ ಕೇರಳ ಭಾಗದಿಂದ ಬರುತ್ತಿರುವ ಹಣ್ಣುಗಳ ಮಾರಾಟಕ್ಕೆ ನಿರ್ಬಂಧಿಸಬೇಕು ಎಂದು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ನಿಫಾ ವೈರಸ್ ಕುರಿತು ಪ್ರತೀ ಗ್ರಾಮ ಪಂಚಾಯಿತಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮ ಕೈಗೊಳ್ಳಲಾಗುವದು ಹಾಗೂ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವಂತಹ ಹಣ್ಣುಗಳ ಮಾರಾಟ ನಿಷೇಧಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಪರಿಹಾರ ಕಾರ್ಯ
ಅತೀವೃಷ್ಟಿ ಸಂಬಂಧ ಇದುವರೆಗೂ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡುವ ಕಾಮಗಾರಿಯ ಪ್ರಗತಿ ಹಾಗೂ ಮನೆ ಹಸ್ತಾಂತರ ಕುರಿತ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅತೀವೃಷ್ಟಿ ಸಂಬಂಧ ಇದುವರೆಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾ ಒಟ್ಟು 20 ಮಾನವ ಸಾವು ಸಂಭವಿಸಿದ್ದು, ಇವರ ಕುಟುಂಬದವರಿಗೆ ಈಗಾಗಲೇ ಪರಿಹಾರ ನೀಡಿದ್ದು, ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ತೀವ್ರ ಹಾನಿ, ಭಾಗಶಃ ಹಾನಿ, ವಿಭಾಗಿಸಿದ್ದು, ಮೊದಲನೇ ಹಂತದಲ್ಲಿ ತೀವ್ರ ಹಾನಿಯಾದ 415 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಕಾಮಗಾರಿಯು ಮುಗಿಯುವ ಹಂತದಲ್ಲಿದ್ದು, ಕರ್ಣಂಗೇರಿ, ಮದೆ, ಪ್ರದೇಶದಲ್ಲಿ ಮನೆಗಳು ನಿರ್ಮಾಣವಾಗಿದ್ದು, ಶೀಘ್ರದಲ್ಲಿಯೇ ಹಸ್ತಾಂತರಿಸಲಾಗುವದು ಎಂದು ಅವರು ತಿಳಿಸಿದರು. ಒಟ್ಟು 415 ಕುಟುಂಬಗಳಿಗೆ ಪ್ರತಿ ತಿಂಗಳು ಮನೆ ನಿರ್ವಹಣೆಗೆ 10 ಸಾವಿರ ರೂ. ಹಣ ನೀಡಲಾಗುತ್ತಿರುವದಾಗಿ ಸಭೆಗೆ ತಿಳಿಸಿದರು.
ಅತಿವೃಷ್ಟಿ ಸಂಬಂಧ ವಿಶೇಷ ಪರಿಹಾರ ಅದಾಲತ್ ನಡೆಸಲಾಗಿದ್ದು, ಪರಿಹಾರ ಅದಾಲತ್ನಲ್ಲಿ 1,129 ಅರ್ಜಿಗಳು ಸ್ವೀಕೃತಗೊಂಡಿರುವದಾಗಿ ತಿಳಿಸಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಮಾತನಾಡಿ ಅತಿವೃಷ್ಟಿಯಿಂದ ಕೆಲವು ಕುಟುಂಬಗಳು ಅವರ ಬಳಿ ಯಾವದೇ ದಾಖಲಾತಿ ಇರುವದಿಲ್ಲ. ಅಂತವರಿಗೂ ಕೂಡ ನೆಲೆ ಕಲ್ಪಿಸುವಂತೆ ಸಭೆಯ ಗಮನಕ್ಕೆ ತಂದರು.
ಸದಸ್ಯೆ ಕುಮುದ ಧರ್ಮಪ್ಪ ಅವರು ಮಾದಾಪುರ ವ್ಯಾಪ್ತಿಯಲ್ಲಿ ಕೆಲವು ಕುಟುಂಬಗಳಿಗೆ ಇನ್ನೂ ಕೂಡ ಯಾವದೇ ಪರಿಹಾರ ವಿತರಣೆಯಾಗಿರುವದಿಲ್ಲ. ಇಂತಹ ಅರ್ಹ ಫಲಾನುಭವಿಗಳ ಹೆಸರುಗಳು ಬಿಟ್ಟು ಹೋಗಿದ್ದು, ಇವರನ್ನು ಗುರುತಿಸಿ ಪರಿಹಾರ ವಿತರಣೆ ಮಾಡುವಂತೆ ಸಭೆಯ ಗಮನಕ್ಕೆ ತಂದರು.
ಶಿವುಮಾದಪ್ಪ ಮಾತನಾಡಿ ಅತೀವೃಷ್ಟಿ ಸಂಬಂಧ ಪರಿಹಾರ ನೀಡುವ ಪಟ್ಟಿಯಲ್ಲಿ ಅರ್ಹ ಫಲಾನುಭವಿಗಳ ಕೆಲವರ ಹೆಸರು ಬಿಟ್ಟು ಹೋಗಿರುವ ಬಗ್ಗೆ ತೀವ್ರ ಅಸಮಾದಾನ ವ್ಯಕ್ತಪಡಿಸಿ ಅಂತವರನ್ನು ಗುರುತಿಸಿ ಸೂಕ್ತ ಪರಿಹಾರ ನೀಡುವಂತೆ ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಮರಳು ವಿತರಣೆ ಸಂಬಂಧ ಆರು ತಿಂಗಳ ಹಿಂದೆಯೇ ಟೆಂಡರ್ ಪೂರ್ಣಗೊಂಡಿದ್ದರೂ ಸಾರ್ವಜನಿಕರಿಗೆ ಸಮರ್ಪಕ ರೀತಿಯಲ್ಲಿ ಮರಳು ವಿತರಣೆಯಾಗದಿರುವದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿ ಸಮರ್ಪಕ ಮರಳು ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.
ಸದಸ್ಯ ಲತೀಪ್ ಪಿ.ಎಂ. ಮಾತನಾಡಿ ಭೂ ಪರಿವರ್ತನೆ ಸಂಬಂಧ 11(9), 11(ಬಿ) ಹಾಗೂ 11(ಇ) ಇರುವ ತೊಡಕುಗಳನ್ನು ಸರಿಪಡಿಸಬೇಕೆಂದು ಸಭೆಯ ಗಮನಕ್ಕೆ ತಂದರು.
ಸದಸ್ಯ ಬಿ.ಜೆ.ದೀಪಕ್ ಅವರು ಮಾತನಾಡಿ ಕಳೆದ ವರ್ಷ ಭೂಕುಸಿತ ಉಂಟಾದ ಪ್ರದೇಶಗಳಲ್ಲಿ ಪ್ರಕೃತಿ ವಿಕೋಪ ಸಂಬಂಧ ಅಣಕು ಪ್ರದರ್ಶನ ಏರ್ಪಡಿಸಲಾಗಿದ್ದು, ಇದೇ ರೀತಿಯಲ್ಲಿ ಜಿಲ್ಲೆಯ ಎಲ್ಲಾ ಭಾಗದಲ್ಲೂ ಅಣಕು ಪ್ರದರ್ಶನಗಳನ್ನು ಏರ್ಪಡಿಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬುವಂತಹ ಕೆಲಸವಾಗಬೇಕು ಎಂದು ಅವರು ಸಭೆಯ ಗಮನಕ್ಕೆ ತಂದರು.
ಸದಸ್ಯೆ ಮಂಜುಳಾ ಅವರು, ಕೂಡಿಗೆ ಹಾಗೂ ಕೂಡುಮಂಗಳೂರು ವ್ಯಾಪ್ತಿಯಲ್ಲಿ ಸಂತ್ರಸ್ತರಾದವರಿಗೆ ಇನ್ನೂ ಕೂಡ ಪರಿಹಾರ ಸಿಗದಿರುವ ಬಗ್ಗೆ ಗಮನ ಸೆಳೆದರು. ಅಲ್ಲದೆ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಯಾವದೇ ಮಾಹಿತಿ ಸಿಗುತ್ತಿಲ್ಲವೆಂದು ಹೇಳಿದರು. ಪಿ.ಆರ್. ಪಂಕಜ, ಸುನಿತಾ ಅವರುಗಳು ಕೂಡ ದನಿಗೂಡಿಸಿ ಪರಿಹಾರ ಕಾರ್ಯ ಸಮರ್ಪಕವಾಗಿ ಆಗಿಲ್ಲವೆಂದು ಗಮನ ಸೆಳೆದರು. ಸದಸ್ಯೆ ಭವ್ಯ ಬಿ. ಶೆಟ್ಟಿಗೇರಿಯಲ್ಲಿ ಇದ್ದ ನೀರಿನ ಪೈಪ್ಗಳನ್ನು ಒಡೆದು ಹಾಕಿ 100 ಮೀಟರ್ಗೆ ರೂ. 1 ಲಕ್ಷದಲ್ಲಿ ಹೊಸ ಪೈಪ್ ಹಾಕಿದ್ದಾರೆ. ಗಮನಕ್ಕೆ ತಾರದೆ ಕೆಲಸ ಮಾಡಿದ್ದು, ನಿಷ್ಪ್ರಯೋಜಕವಾಗಿದೆ ಬಿಲ್ ಪಾವತಿ ಮಾಡದಂತೆ ಗಮನಕ್ಕೆ ತಂದರು.
ಜಿ.ಪಂ. ಸದಸ್ಯ ಅಚ್ಚಪಂಡ ಎಂ.ಮಹೇಶ್ ಗಣಪತಿ ಮಾತನಾಡಿ ಕಳೆದ ವರ್ಷ ವೀರಾಜಪೇಟೆ ತಾಲೂಕಿನ ಮಾಕುಟ್ಟದಲ್ಲಿ ಭೂ ಕುಸಿತ ಉಂಟಾದ ಸ್ಥಳದಲ್ಲಿ ತಡೆಗೋಡೆ ನಿರ್ಮಾಣವಾಗಿದೆ. ಆದರೆ ಜಿಲ್ಲೆಯ ಮಡಿಕೇರಿ ಹಾಗೂ ಸೋಮವಾರಪೇಟೆ ಭಾಗದಲ್ಲಿ ಹೆಚ್ಚು ಬರೆಕುಸಿತ ಉಂಟಾದ ಪ್ರದೇಶದಲ್ಲಿ ತಾತ್ಕಾಲಿಕ ಕಾಮಗಾರಿ ಬಿಟ್ಟರೆ, ಶಾಶ್ವತ ತಡೆಗೋಡೆ ನಿರ್ಮಾಣವಾಗದಿರುವ ಬಗ್ಗೆ ತೀವ್ರ ಅಸಮಾದಾನ ವ್ಯಕ್ತಪಡಿಸಿದರು. ಇದು ಕೊಡಗನ್ನು ಅರಣ್ಯ ಮಾಡುವ ಹುನ್ನಾರವಾಗಿದೆ ಎಂಬ ಸಂಶಯ ಮೂಡುತ್ತದೆ ಎಂದರು. ಪ್ರತಿಕ್ರಿಯಿಸಿದ ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯಾ ಭೂ ಕುಸಿತ ಉಂಟಾದ ಪ್ರದೇಶದಲ್ಲಿ ಶಾಶ್ವತ ಕಾಮಗಾರಿ ಪ್ರಗತಿಯಲ್ಲಿರುವದಾಗಿ ಸಭೆಯ ಗಮನಕ್ಕೆ ತಂದರು.