*ಗೋಣಿಕೊಪ್ಪಲು, ಜೂ. 8: ಆನೆ ಸಂಘರ್ಷವನ್ನು ತಪ್ಪಿಸಲು ನಾಗರಹೊಳೆ ಅರಣ್ಯ ವ್ಯಾಪ್ತಿಯ ತಿತಿಮತಿ ಚೇನಿಹಡ್ಲು ಮತ್ತು ಆಯಿರಸುಳಿ ಹಾಡಿಯ ಮಾರ್ಗವಾಗಿ ಅಳವಡಿಸಿರುವ 4.6 ಕಿ.ಮೀ ವ್ಯಾಪ್ತಿಯ ರೈಲ್ವೇ ಕಂಬಿಗಳನ್ನು ಎರಡು ಹಾಡಿಯ ನಿವಾಸಿಗಳನ್ನು ಹೊರತುಪಡಿಸಿ ಅಳವಡಿಸಿರುವದರಿಂದ ಹಾಡಿಯ ನಿವಾಸಿಗಳಿಗೆ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವದೇ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ತಕ್ಷಣವೇ ಅಳವಡಿಸಿರುವ ರೈಲ್ವೇ ಕಂಬಿಯನ್ನು ಮತ್ತೆ ಮೂರು ಕಿ.ಮೀ ವ್ಯಾಪ್ತಿಗೆ ಅಳವಡಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ಆಯಿರಸುಳಿ ಹಾಗೂ ಜಂಗಲ್ ಹಾಡಿಯ ಮುಂಭಾಗದಿಂದ 4.6 ಕಿ.ಮೀ ವಾಪ್ತಿಯವರೆಗೆ ರೈಲ್ವೇ ಕಂಬಿಯನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕಂಬಿಗಳನ್ನು ಅಳವಡಿಸುವದರಿಂದ ಇಲ್ಲಿನ ಹಾಡಿ ನಿವಾಸಿಗಳಿಗೆ ಯಾವದೇ ಭದ್ರತೆ ಸಿಗುವದಿಲ್ಲ ಎಂದು ಶಾಸಕರಲ್ಲಿ ಹಾಡಿಯ ನಿವಾಸಿಗಳು ಮನವಿ ಮಾಡಿಕೊಂಡಿದ್ದರು. ಇದನ್ನು ಪರಿಶೀಲಿಸಿದ ಶಾಸಕರು ಹಾಡಿಯನ್ನು ಹೊರಗಿಟ್ಟು ಹಾಡಿಯ ಸುತ್ತಲೂ ಕಂಬಿಗಳನ್ನು ಅಳವಡಿಸುವದರಿಂದ ಇಲ್ಲಿನ ನಿವಾಸಿಗಳಿಗೆ ಆನೆಯಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಹೆಚ್ಚುವರಿಯಾಗಿ ಮೂರು ಕಿ.ಮೀ ವ್ಯಾಪ್ತಿಗೆ ಅಳವಡಿಸುವದನ್ನು ವಿಸ್ತರಿಸಬೇಕು. ಇದರಿಂದ ಸುತ್ತಲಿನ ಬೆಳೆಗಾರರು ಹಾಗೂ ರೈತರಿಗೂ ಆನೆಯ ಉಪಟಳ ದಿಂದ ತಪ್ಪಿಸಿಕೊಳ್ಳ ಬಹುದಾಗಿದೆ ಎಂದರು. ಅರಣ್ಯ ಅಧಿಕಾರಿ ಮನೋಜ್ ಸ್ಥಳ ಪರಿಶೀಲನೆ ನಡೆಸ ಬೇಕೆಂದು ದೂರವಾಣಿ ಮೂಲಕ ಶಾಸಕರು ಅಧಿಕಾರಿಯನ್ನು ಸಂಪರ್ಕಿಸಿ ಸಲಹೆ ನೀಡಿದರು. ರೈತ ಸಂಘದ ಕೆಲವು ಸದಸ್ಯರುಗಳು ಶಾಸಕರನ್ನು ಭೇಟಿ ಮಾಡಿ ಅಳವಡಿಸುವ ರೈಲ್ವೇ ಕಂಬಿಯ ನಡುವೆ ಹಾಡಿ ನಿವಾಸಿಗಳು ಸಂಚರಿ ಸಲು ಕಂಬಿಯನ್ನು ತೆರೆದಿಡಲಾಗಿದೆ. ಈ ಭಾಗಕ್ಕೆ ಗೇಟ್‍ಗಳನ್ನು ಅಳವಡಿಸು ವದರಿಂದ ಸ್ಥಳೀಯ ಬೆಳೆಗಾರರು ಹಾಗೂ ರೈತರ ತೋಟ ಹಾಗೂ ಗದ್ದೆಗಳಿಗೆ ಆನೆಗಳು ಬಾರದಂತೆ ತಡೆಹಿಡಿಯಬಹುದಾಗಿದೆ ಎಂದರು. ಹೀಗಾಗಿ ತೆರೆದ ರೈಲ್ವೆ ಕಂಬಿಯಲ್ಲಿ ಗೇಟ್ ಅಳವಡಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಈ ಭಾಗದಲ್ಲಿ ತಕ್ಷಣವೇ ಗೇಟ್ ಅಳವಡಿಸಲು ಆರ್.ಎಫ್.ಓ ಶಿವಾನಂದ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಚಿಯಕಪೂವಂಡ ಬೋಪಣ್ಣ, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯೆ ಪಂಕಜಾ, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಶಿವಕುಮಾರ್, ಸದಸ್ಯರಾದ ಎನ್.ಎನ್. ಅನೂಪ್, ಚುಬ್ರು ವಿಜಯ, ಜಿಲ್ಲಾ ವರ್ತಕ ಪ್ರಕೋಷ್ಟ ಅಧ್ಯಕ್ಷ ಕಡೇಮಾಡ ಗಿರೀಶ್ ಗಣಪತಿ, ತಾಲೂಕು ವರ್ತಕರ ಪ್ರಕೋಷ್ಟ ಅಧ್ಯಕ್ಷ ಚೆಪ್ಪುಡಿರ ಮಾಚು, ರೈತ ಸಂಘದ ಪ್ರಮುಖರಾದ ಚೆಪ್ಪುಡಿರ ಕಾರ್ಯಪ್ಪ, ಪುಚ್ಚಿಮಾಡ ಸುಭಾಷ್, ಚೆಪ್ಪುಡಿರ ಶರಿ ಸುಬ್ಬಯ್ಯ, ಆರ್.ಎಫ್.ಓ ಅಶೋಕ್ ಮತ್ತು ಸಿಬ್ಬಂದಿ ಸೇರಿದಂತೆ ಹಲವರು ಹಾಜರಿದ್ದರು.