(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜೂ. 8: ಜಮ್ಮು ಕಾಶ್ಮೀರದ ಗಡಿಯಲ್ಲಿ 8 ಜನ ಉಗ್ರರನ್ನು ಹೊಡೆದುರುಳಿಸಿ ಸಾಹಸ ಮೆರೆಯುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಯನ್ನು ಪಡೆದುಕೊಳ್ಳುವ ಮೂಲಕ ಕೊಡಗಿಗೆ ಕೀರ್ತಿ ತಂದಿದ್ದ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಮಹಾತ್ಮ ಗಾಂಧಿ ನಗರದಲ್ಲಿರುವ ನಾಗರಾಜ್ ಮತ್ತು ಲಕ್ಷ್ಮಿ ದಂಪತಿ ಪುತ್ರನಾಗಿರುವ ಎಚ್.ಎನ್. ಮಹೇಶ್ ಕಳೆದ ಮೇ 29 ರಂದು ಉಗ್ರಗಾಮಿಗಳು ಸಿಡಿಸಿದ ಗುಂಡೇಟು ಮುಖದ ಭಾಗಕ್ಕೆ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಮ್ಮು ಕಾಶ್ಮೀರದ ಸುಫಿಯಾನದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರರ ವಿರುದ್ಧ ಜೀವವನ್ನು ಪಣಕ್ಕಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕೊಡಗಿನ ಯೋಧ ಮಹೇಶ್‍ಗೆ ಗಂಭೀರ ಪೆಟ್ಟಾಗಿದೆ. ನಂತರ ಅಧಿಕಾರಿಗಳು ಚಂಡೀಗಡ ಸೇನಾ ಆಸ್ಪತ್ರೆಗೆ ಸೇರಿಸುವ ಮೂಲಕ ಯೋಧ ಮಹೇಶ್‍ಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾದರು.

ಉಗ್ರರ ಗುಂಡೇಟಿನಿಂದ ಗಾಯಗೊಂಡ ಮಹೇಶ್ ನಂತರ 200 ಮೀಟರ್ ದೂರದವರೆಗೆ ನಡೆದುಕೊಂಡು ಬಂದಿದ್ದು, ಆನಂತರ ಕುಸಿದು ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸೇನಾ ಹೆಲಿಕಾಪ್ಟರ್‍ನಲ್ಲಿ ಶ್ರೀನಗರ ಕಮಾಂಡೋ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದು ಜೂನ್ 3 ರಂದು ಪ್ರಜ್ಞೆ ಬಂದಿದ್ದು, ಇದೀಗ ಪಂಜಾಬ್‍ನಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸುತ್ತಿದ್ದಾರೆ.

20 ವರ್ಷಗಳ ಅವಧಿಯಲ್ಲಿ ಜೀವಂತವಾಗಿದ್ದಾಗ ಶೌರ್ಯ ಪ್ರಶಸ್ತಿಯನ್ನು ಪಡೆದ ಮೊದಲ ವೀರ ಸೇನಾನಿ ಎಂಬ ಹೆಗ್ಗಳಿಕೆಯನ್ನು ಮಹೇಶ್ ಪಡೆದುಕೊಂಡಿದ್ದಾರೆ. ಎರಡು ತಿಂಗಳ ರಜೆಯ ಮೇಲೆ ತನ್ನ ಊರಾದ ಪೊನ್ನಂಪೇಟೆಗೆ ಬಂದಿದ್ದ ಯೋಧ ಮಹೇಶ್‍ರವರಿಗೆ ಹಲವಾರು ಸಂಘ ಸಂಸ್ಥೆಗಳು ವಿವಿಧೆಡೆಯಲ್ಲಿ ಸನ್ಮಾನ ಮಾಡಿ ಗೌರವಿಸಿದ್ದವು. ನಂತರ ತನ್ನ ರಜೆ ಮುಗಿಸಿ ಮೇ 12 ರಂದು ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಉಗ್ರರ ಬೇಟೆಯಲ್ಲಿ ತೊಡಗಿಕೊಂಡಿದ್ದರು. ಕೊಡಗಿನ ಯುವಕನೊಬ್ಬ ತನ್ನ ಪರಾಕ್ರಮದ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿರುವದು ಹೆಮ್ಮೆಯ ವಿಷಯವಾಗಿದೆ. ಯೋಧ ಮಹೇಶ್ ಆದಷ್ಟು ಬೇಗ ಗುಣಮುಖರಾಗಿ ಮತ್ತೆ ಭಾರತಾಂಬೆಯ ಸೇವೆಯಲ್ಲಿ ತೊಡಗಿ ಕೊಂಡು ಉಗ್ರರ ಹುಟ್ಟಡಿಗಿ ಸುವಂತಾಗಲಿ.