ಸೋಮವಾರಪೇಟೆ, ಜೂ. 8: ಕನ್ನಡಕ್ಕೆ ತಾಯಿಯ ಸ್ಥಾನಮಾನ ನೀಡಿದ್ದೇವೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಮತ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲೆ ಹಾಗೂ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ನಿರ್ಮಿಸಲಾಗಿದ್ದ ಹರಗದ ಅಪ್ಪಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾತೃಭಾಷೆಯನ್ನು ಅಳವಡಿಸಿ ಕೊಳ್ಳುವದರೊಂದಿಗೆ, ಬದುಕಿನ ಭಾಷೆಯನ್ನೂ ಕಲಿಯಬೇಕಿದೆ. ಆಂಗ್ಲ ಭಾಷೆಯ ಕಲಿಕೆಗೂ ಒತ್ತು ಕೊಡಬೇಕು ಎಂದರು.

ಸಮ್ಮೇಳನದಲ್ಲಿ ಆಶಯ ನುಡಿಯಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು, ಕೊಡಗಿನ ಪ್ರಮುಖ ಕೇಂದ್ರ ಸೇರಿದಂತೆ ಕರಿಕೆಯಂತಹ ಗಡಿ ಭಾಗದಲ್ಲಿಯೂ ಈ ನಾಲ್ಕು ವರ್ಷಗಳಲ್ಲಿ ಕನ್ನಡಪರ ಕೆಲಸಗಳನ್ನು ಮಾಡಲಾಗಿದೆ. ಸಮ್ಮೇಳ ನಗಳಿಗೆ ಸಂಘಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ ಮಾತನಾಡಿ, ಕೃತಿ ರಚಿಸುವವರನ್ನು ಕಡೆಗಣಿಸಬಾರದು. ಪುಸ್ತಕಗಳನ್ನು ಕೊಂಡು ಓದುವಂತಾಗಬೇಕು. ಹಳ್ಳಿಗಳಿಗೂ ಸಂಚಾರಿ ಗ್ರಂಥಾಲಯ ಒದಗಿಸಬೇಕು. ಎಲ್ಲಾ ಭಾಗ್ಯಗಳ ಜತೆಗೆ ಓದುವ ಭಾಗ್ಯವನ್ನೂ ಕಲ್ಪಿಸಬೇಕು ಎಂದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಪೋಷಕರು ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸಬೇಕು. ಗುರು ಹಿರಿಯರಿಗೆ ಗೌರವ ಕೊಡುವ ಗುಣ ಮೂಡಿಸಬೇಕು. ಭಾಷೆಗಳ ಮಿಶ್ರಣ ಬೇಡ. ‘ಅಜ್ಜಿ ಕಮ್.., ಅಜ್ಜಿ ಗೋ’ ಅಂತಹ ಭಾಷಾ ಪ್ರಯೋಗ ಇರಬಾರದು. ಎಲ್ಲಾ ಭಾಷೆಗಳನ್ನು ಕಲಿಯಬೇಕು. ಮಾತೃಭಾಷೆ ಮರೆಯಬಾರದು ಎಂದರು.

ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ರಾಜಧಾನಿಯಲ್ಲೇ ದೈತ್ಯ ಇಂಗ್ಲೀಷ್ ಎದುರು ಕನ್ನಡ ಮಾಯವಾಗುತ್ತಿದೆ. ಕಾರ್ಪೋರೇಟ್ ವಲಯದಲ್ಲಿ ಕನ್ನಡ ಭಾಷೆ ಮಾತನಾಡಿದರೆ ಅಸ್ಪøಶ್ಯರಂತೆ ಕಾಣಲಾ ಗುತ್ತಿದೆ ಎಂದು ವಿಷಾದಿಸಿದರು.

ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಹೋಬಳಿ ವ್ಯಾಪ್ತಿಯ ಎಲ್ಲ ಕನ್ನಡಾಭಿಮಾನಿಗಳ ಸಹಕಾರದಿಂದ ಸಮ್ಮೇಳನ ಯಶಸ್ಸು ಕಂಡಿದೆ. ಭಾಷಾ ಬೆಳವಣಿಗೆಗೆ ಸಾಂಘಿಕ ಪ್ರಯತ್ನ ನಡೆಯಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಿದ್ದರು. ವೇದಿಕೆಯಲ್ಲಿ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್, ಗೌಡ ಸಮಾಜದ ಅಧ್ಯಕ್ಷ ಮುತ್ತಣ್ಣ, ಉದ್ಯಮಿ ಅರುಣ್ ಕೊತ್ನಳ್ಳಿ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯ ಧರ್ಮಪ್ಪ, ವಿಎಸ್‍ಎಸ್‍ಎನ್ ಅಧ್ಯಕ್ಷ ಕುಂದಳ್ಳಿ ದಿನೇಶ್, ತೋಳೂರುಶೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷೆ ಭಾರತಿ, ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಮಧೋಶ್ ಪೂವಯ್ಯ, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಸಾಪ ಪದಾಧಿಕಾರಿಗಳಾದ ವೀರರಾಜು, ಕೆ.ಎ. ಆದಂ, ಸುದರ್ಶನ್, ಬಿ.ಇ. ಜಯೇಂದ್ರ, ನ.ಲ. ವಿಜಯ, ಚಂದ್ರಿಕ, ಪ್ರೇಮಾ, ರಾಣಿ ರವೀಂದ್ರ, ಮುರುಳೀಧರ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.