ಮಡಿಕೇರಿ, ಜೂ. 6: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಂದಾಜು ರೂ. 5 ಕೋಟಿ ಹಣ ವ್ಯಯ ಮಾಡಿದ್ದರೂ, ಸಂತೆ ವ್ಯಾಪಾರಿಗಳಿಗೆ ಕನಿಷ್ಟ ಮೂಲಭೂತ ಸೌಲಭ್ಯ ಇಲ್ಲದೆ ಇದೀಗ ಆರಂಭಿಕ ಮಳೆಗೇ ಅವಾಂತರದೊಂದಿಗೆ ವರ್ತಕರು ತೊಂದರೆ ಅನುಭವಿಸು ವಂತಾಗಿದೆ. ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಮಾರುಕಟ್ಟೆ ಸಂಕೀರ್ಣ ನೀರಿನಿಂದ ಆವೃತ ಗೊಂಡು ವ್ಯಾಪಾರಿಗಳು ಪರದಾಡುವಂತಾಗಿದೆ.ತಾ. 7 ರಂದು (ಇಂದು) ಶುಕ್ರವಾರದ ಮಾಮೂಲಿ ಸಂತೆಯಾದ ಹಿನ್ನೆಲೆ ಕೆಲವರು ನಿನ್ನೆ ಹಾಗೂ ಇಂದು ಮುಂಚಿತವಾಗಿ ಸೊಪ್ಪು ತರಕಾರಿಗಳೊಂದಿಗೆ ಮಾರುಕಟ್ಟೆಗೆ ಬಂದಿದ್ದಾರೆ. ರಾತ್ರಿ ಮಳೆಯಿಂದ ಎಲ್ಲವೂ ಒದ್ದೆಯಾಗಿ ತಮ್ಮ ಆಸರೆಗೂ ಬವಣೆ ಎದುರಾಗಿದೆ.ಕೇಳುವವರೇ ಇಲ್ಲ: ಎರಡು ತಿಂಗಳ ಹಿಂದೆ ವರ್ತಕರ ಮೂಲಭೂತ ಸೌಲಭ್ಯ ಕಲ್ಪಿಸುವ ಬೇಡಿಕೆ ಬಳಿಕ
(ಮೊದಲ ಪುಟದಿಂದ) ಮಾರುಕಟ್ಟೆ ವ್ಯಾಪಾರಕ್ಕೆ ಚಾಲನೆ ನೀಡುವಂತೆ ಬೇಡಿಕೆ ಮುಂದಿಟ್ಟರೂ ಆಡಳಿತ ಮಂಡಳಿ ಪ್ರಮುಖರು ದಿಢೀರ್ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರು. ಮಳೆಯ ಹೊಡೆತ ತಡೆಯಲು ಸುತ್ತಲೂ ಶೀಟುಗಳನ್ನು ಅಳವಡಿಸಿ ದ್ದಾಯಿತು. ಆ ವೇಳೆಗೆ ಆಡಳಿತ ಮಂಡಳಿ ಅಧಿಕಾರ ಮುಗಿದು, ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ಯಾಗಿ ನಿಯುಕ್ತಿಗೊಂಡರು. ಇದೀಗ ನಗರಸಭೆ ಯಾವದಕ್ಕೂ ಸ್ಪಂದಿಸುತ್ತಿಲ್ಲ ಎಂದು ವರ್ತಕ ಇಸ್ಮಾಯಿಲ್, ಖಾದರ್, ರಜಾಕ್ ಮೊದಲಾದವರು ಆರೋಪಿಸಿದ್ದಾರೆ.ಖುಷಿ ಬಂದಂತೆ ಸುಂಕ: ಈ ಹಿಂದಿನಿಂದಲೂ ಮಾರುಕಟ್ಟೆ ಸುಂಕ ವಸೂಲಿಯಲ್ಲಿ ಅಕ್ರಮದ ಆರೋಪ ಕೇಳಿ ಬರುತ್ತಿದೆ. ಹಳ್ಳಿಗಾಡಿನ ರೈತರ ಸಹಿತ ಸಂತೆ ವ್ಯಾಪಾರಿಗಳನ್ನು ಬೆದರಿಸಿ ಖುಷಿ ಬಂದಂತೆ ಹಣ ವಸೂಲಿ ಮಾಡುತ್ತಿದ್ದ ಆರೋಪವಿದೆ.
ಮತ್ತೆ ಅದೇ ಚಾಳಿ: ಇದೀಗ ತಿಳಿದು ಬಂದಂತೆ ಸಂತೆ ದಿನಗಳಂದು ನಗರಸಭೆ ಸಿಬ್ಬಂದಿಯೇ ಆಯುಕ್ತರ ಆದೇಶದ ಮೇಲೆ ವರ್ತಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕಾಳಜಿ ವಹಿಸಿ ಸಂತೆ ಸುಂಕ ವಸೂಲಿಗೆ ಸೂಕ್ತ ವ್ಯವಸ್ಥೆಯೊಂದಿಗೆ, ವರ್ತಕರು ಅಥವಾ ಗ್ರಾಹಕರಿಗೆ ಸಂತೆ ವ್ಯಾಪಾರದಲ್ಲಿ ನ್ಯಾಯ ಕಲ್ಪಿಸಬೇಕೆಂದು ಹಳ್ಳಿ ವ್ಯಾಪಾರಿಗಳು ಆಗ್ರಹಿಸಿದ್ದಾರೆ.