ಮಡಿಕೇರಿ, ಜೂ. 6: ನಿಫಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ವೈದ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಫಾ ವೈರಸ್ ತಡೆಗಟ್ಟುವ ಸಂಬಂಧ ನಡೆದ ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಈಗಾಗಲೇ ನಿಫಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದ್ದು, ಆ ಎಂಟು ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆ ಕೂಡ ಆದ್ಯತಾ ಪಟ್ಟಿಯಲ್ಲಿರುವದರಿಂದ ನಿಫಾ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು. ಎಲ್ಲಾ ತಾಲೂಕು ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾ. 7 ರಿಂದ 10 ರವರೆಗೆ ನಿಫಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಂಬಂಧ ವೈದ್ಯರಿಗೆ, ಶುಶ್ರೂಷಕರಿಗೆ, ಆಶಾ ಕಾರ್ಯಕರ್ತೆಯರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವದು ಎಂದು ತಿಳಿಸಿದರು. ನಿಫಾ ವೈರಸ್ ಕಂಡುಬಂದ ಸಂದರ್ಭದಲ್ಲಿ ರೋಗಿಗಳಿಗೆ (ಮೊದಲ ಪುಟದಿಂದ) ಉಪಚರಿಸಲು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಎರಡು ಹಾಸಿಗೆಯ ವಿಶೇಷ ತುರ್ತು ಚಿಕಿತ್ಸಾ ನಿಗಾ ಘಟಕ ತೆರೆಯಲು ಸೂಚನೆ ನೀಡಿದರು.

ವಿಶೇಷವಾಗಿ ಜಿಲ್ಲೆಯ ಹಾಡಿಗಳು, ಗಿರಿಜನರು ವಾಸಿಸುವ ಪ್ರದೇಶಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಹೇಳಿದರು.

ಒಂದು ವೇಳೆ ರೋಗಿಗಳಲ್ಲಿ ನಿಫಾ ವೈರಸ್ ಕಂಡು ಬಂದಲ್ಲಿ ಎಲ್ಲಾ ಬೆಂಬಲಾತ್ಮಕ ಔಷಧ ಮೂಲಕ ಉಪಚರಿಸಲಾಗುವದು. ಹಾಗೂ ಅಗತ್ಯವಿರುವ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುವದು ಎಂದು ತಿಳಿಸಿದರು.

ನಿಫಾ ವೈರಸ್ ಹರಡುವಿಕೆ, ರೋಗದ ಲಕ್ಷಣಗಳು, ಅಗತ್ಯ ಮುನ್ನೆಚ್ಚರಿಕೆ ಕುರಿತು ಜಿಲ್ಲಾ ಸರ್ವೇಕ್ಷಣಾ ಘಟಕದ ವೈದ್ಯಾಧಿಕಾರಿ ಡಾ.ಶಿವಕುಮಾರ್ ಸಭೆಯಲ್ಲಿ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಈ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ. ಶಿವಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳು, ವೈದ್ಯರು ಇತರರು ಇದ್ದರು.